ತಮಿಳು, ತೆಲುಗು, ಹಿಂದಿಯಲ್ಲಿ ಅಕ್ಷರಾಗೆ ಡಿಮ್ಯಾಂಡ್ ಕನ್ನಡದ ನಾಯಕಿಯರು ಕನ್ನಡಕ್ಕಿಂತ ಹೆಚ್ಚಾಗಿ ಅಕ್ಕಪಕ್ಕದ ಪರಭಾಷೆ ಚಿತ್ರಗಳಲ್ಲಿ ಮಿಂಚುವುದು ಹೊಸ ವಿಷಯವೇನಲ್ಲ. ಒಂದೆಡೆ ಪರಭಾಷಾ ನಟಿಯರು ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದರೆ, ಮತ್ತೂಂದೆಡೆ ಕನ್ನಡದ ನಟಿಯರು ಪರಭಾಷೆಗಳತ್ತ ವಲಸೆ ಹೋಗುವುದು ಮೊದಲಿನಿಂದಲೂ ಚಿತ್ರರಂಗದಲ್ಲಿ ಸಾಮಾನ್ಯ ಪ್ರಕ್ರಿಯೆ ಎಂಬಂತೆ ನಡೆದುಕೊಂಡು ಬರುತ್ತಿದೆ. ಹಾಗೆ ಕನ್ನಡದಿಂದ ಪರಭಾಷೆಗೆ ಹೋಗಿ ಮಿಂಚುತ್ತಿರುವ ನಾಯಕಿಯರ ಸಾಲಿನಲ್ಲಿ ಈಗ ಅಕ್ಷರಾ ಗೌಡ ಎನ್ನುವ ಮತ್ತೂಬ್ಬ ನಟಿಯ ಹೆಸರು ಸೇರ್ಪಡೆಯಾಗಿದೆ.
ಆರಂಭದಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಅಕ್ಷರಾ ಗೌಡ ನಂತರ ಚಿತ್ರರಂಗದತ್ತ ಮುಖ ಮಾಡಿದ ಹುಡುಗಿ. ಮಾಡೆಲಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಒಂದಷ್ಟು ಛಾಪು ಮೂಡಿಸುವಲ್ಲಿ ಯಶಸ್ವಿಯಾದ ಅಕ್ಷರಾ, 2011ರಲ್ಲಿ ತೆರೆಕಂಡ ವುಯೆರ್‌ತಿರು-420 ತಮಿಳು ಚಿತ್ರದ ಮೂಲಕ ಕಾಲಿವುಡ್‌ಗೆ ಪ್ರವೇಶ ಪಡೆದುಕೊಂಡರು. ಬಳಿಕ ಅಕ್ಷರಾ ತಮಿಳಿನ ಸೂಪರ್‌ಸ್ಟಾರ್ ನಟ ಅಜಿತ್ ಅಭಿನಯದ ಆರಂಭಂ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದ ನಂತರ ಅಕ್ಷರಾ ಗೌಡಗೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವಕಾಶಗಳ ಹೆಬ್ಟಾಗಿಲೇ ತೆರೆಯಿತು.
ವಿಜಯ್ ಅಭಿನಯದ ತುಪಾಕಿ, ಇರುಂಬು ಕುತಿರೈ, ಭೋಗಾನ್, ಮಾಯವನ್ ಮೊದಲಾದ ಚಿತ್ರಗಳು ಅಕ್ಷರಾಗೆ ತಮಿಳಿನಲ್ಲಿ ಸಾಕಷ್ಟು ಹೆಸರು ಮತ್ತು ಜನಪ್ರಿಯತೆ ಎರಡನ್ನೂ ತಂದುಕೊಟ್ಟವು. ಇನ್ನು ತೆಲುಗಿನಲ್ಲೂ ನಾಗಾರ್ಜುನ ಅಭಿನಯದ ಮನ್ಮಥುಡು-2 ಚಿತ್ರದಲ್ಲಿ ಕಾಣಿಸಿಕೊಂಡ ಅಕ್ಷರಾ ಗೌಡ ತೆಲುಗು ಸಿನಿಪ್ರಿಯರ ಮನಗೆಲ್ಲುವಲ್ಲೂ ಯಶಸ್ವಿಯಾದರು.
ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಅಕ್ಷರಾ ಗೌಡ ಹೆಸರು ಲೈಮ್‌ಲೈಟ್‌ಗೆ ಬರುತ್ತಿದ್ದಂತೆ, ಕನ್ನಡ ಚಿತ್ರರಂಗದಿಂದಲೂ ಕೂಡ ಅಕ್ಷರಾಗೆ ಅವಕಾಶಗಳು ಬರಲು ಶುರುವಾಯಿತು. ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರದಲ್ಲೂ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಕ್ಷರಾಗೆ ಈ ಚಿತ್ರ ಕನ್ನಡದ ಪ್ರೇಕ್ಷಕರೂ ಕೂಡ ಈಕೆಯನ್ನು ಗುರುತಿಸುವಂತೆ ಮಾಡಿತು. ಸದ್ಯ ಅಕ್ಷರಾ ತಮಿಳಿನಲ್ಲಿ ಮೂರು ಚಿತ್ರಗಳು ಮತ್ತು ತೆಲುಗಿನಲ್ಲಿ ಎರಡು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಕನ್ನಡದಲ್ಲಿ ಕೂಡ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ಅಭಿನಯದ ಚೊಚ್ಚಲ ಚಿತ್ರ ತ್ರಿವಿಕ್ರಮಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಒಟ್ಟಾರೆ ಕನ್ನಡದ ನಟಿಯಾದರೂ, ಪರಭಾಷೆಯ ಮೂಲಕ ಗುರುತಿಸಿಕೊಂಡು ಈಗ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗುತ್ತಿರುವ ಅಕ್ಷರಾ ಗೌಡ, ಇನ್ನಷ್ಟು ಕನ್ನಡದ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿ ಎನ್ನುವುದು ಕನ್ನಡ ಸಿನಿಪ್ರಿಯರ ಆಶಯ.