Advertisement

ನಮಗೆ 130 ಸ್ಥಾನಗಳು ನಿಶ್ಚಿತ; ಮೈತ್ರಿಯ ಅಗತ್ಯವಿಲ್ಲವೆಂದ ಅಮಿತ್‌ ಶಾ

06:00 AM May 11, 2018 | |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 130 ಸ್ಥಾನ ಗೆಲ್ಲುವ ಮೂಲಕ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

Advertisement

ಸತತ ರ್ಯಾಲಿ, ರೋಡ್‌ ಶೋ, ಬಹಿರಂಗ ಸಭೆ ನಡೆಸಿ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಎರಡು ಗಂಟೆಗೆ ಮೊದಲು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆದಿರುವ ಅರ್ಕಾವತಿ ಡಿನೋಟಿಫಿಕೇಶನ್‌ ಸೇರಿದಂತೆ ಎಲ್ಲ ಭ್ರಷ್ಟಾಚಾರ ಬಯಲಿಗೆ ಎಳೆದು ಜನರಿಂದ ಲೂಟಿ ಮಾಡಿರುವ ಒಂದೊಂದು ರೂಪಾಯಿಯನ್ನು ವಸೂಲಿ ಮಾಡಲಾಗುವುದು ಎಂದರು. ಆದರೆ ಸಿಎಂ ವಿರುದ್ಧದ 40 ಲಕ್ಷ ರೂ. ಮೊತ್ತದ ವಾಚ್‌ ಇದೀಗ ಸರ್ಕಾರದ ಸ್ವತ್ತಾಗಿರುವುದರಿಂದ ಈ ಪ್ರಕರಣ ಕೈ ಬಿಡಲಾಗುವುದು ಎಂದು ತಿಳಿಸಿದರು.

ಮೈತ್ರಿ ಪ್ರಮೇಯವೇ ಇಲ್ಲ
ಈ ಚುನಾವಣೆಯಲ್ಲಿ ಬಿಜೆಪಿ 130 ಸ್ಥಾನ ಗಳಿಸುವುದು ನಿಶ್ಚಿತ. ಏಕೆಂದರೆ,  50,000ಕ್ಕೂ ಹೆಚ್ಚು ಮತಗಟ್ಟೆ ಹಂತದಲ್ಲಿ ಕಾರ್ಯಕರ್ತರು ಜನರೊಂದಿಗೆ ಸಂಪರ್ಕ ಸಾಧಿಸಿದ್ದಾರೆ. 400ಕ್ಕೂ ಹೆಚ್ಚು ರ್ಯಾಲಿ, ರೋಡ್‌ ಶೋ, ಬಹಿರಂಗ ಸಭೆ ನಡೆಸಲಾಗಿದೆ. ಸುಮಾರು 50,000 ಕಿ.ಮೀ.ಗೂ ಹೆಚ್ಚು ಸುತ್ತಾಟ ನಡೆಸಿದ್ದು, ಎಲ್ಲೆಡೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನರ ಆಕ್ರೋಶ ಕಂಡಿದ್ದೇನೆ. ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ವಿಫ‌ಲವಾಗಿರುವುದನ್ನು ಜನರಿಂದ ಕೇಳಿ ತಿಳಿದಿದ್ದೇನೆ. ಹಾಗಾಗಿ ಆ ವಿಶ್ವಾಸ ನನಗಿದೆ. ಬಿಜೆಪಿಯ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಯಾವ ಪಕ್ಷದೊಂದಿಗೂ ಮೈತ್ರಿ ಸರ್ಕಾರ ರಚಿಸುವ ಪ್ರಮೇಯವೇ ಇಲ್ಲ ಎಂದರು.

ಸಿಎಂಗೆ ಎರಡು ಕಡೆ ಸೋಲು
ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲಿನ ಭೀತಿಯಿಂದ ಚಾಮುಂಡೇಶ್ವರಿಯಿಂದ ಬಾದಾಮಿ ಕ್ಷೇತ್ರಕ್ಕೆ ಓಡಿ ಹೋಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರಕ್ಕಿಂತ ದೊಡ್ಡ ಅಂತರದಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಸೋಲಲಿದ್ದಾರೆ. ಎರಡೂ ಕಡೆ ಸಿದ್ದರಾಮಯ್ಯ ಅವರಿಗೆ ಸೋಲಾಗಲಿದೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್‌ನ ಹತಾಶೆ
ಕಳೆದ ಮೂರ್‍ನಾಲ್ಕು ದಿನಗಳಿಂದ ನಡೆದ ಅಕ್ರಮಗಳು ರಾಜ್ಯ ಮಾತ್ರವಲ್ಲದೇ ದೇಶಾದ್ಯಂತ ಜನರನ್ನು ಚಿಂತೆಗೀಡು ಮಾಡುವಂತಿವೆ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ನಕಲಿ ಮತದಾರರ ಗುರುತಿನ ಚೀಟಿ ಪತ್ತೆಯಾಗಿದ್ದು, ಆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್‌ ಕಾರ್ಪೋರೇಟರ್‌ ವೆಂಕಟೇಶ್‌, ನಟರಾಜ್‌ ಎಂಬುವರ ವಿರುದ್ಧ ದಾಖಲಾಗಿದೆ. ಬಾದಾಮಿಯಲ್ಲಿ ಕೋಟ್ಯಂತರ ರೂ. ಹಣ ಸಿಕ್ಕಿದ್ದು, ಹತಾಶೆಯಿಂದ ಕಾಂಗ್ರೆಸ್‌ ಗೆಲ್ಲಲು ನಾನಾ ಕಸರತ್ತು ನಡೆಸಿರುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

Advertisement

ಬಿಎಸ್‌ವೈ ಪೂರ್ಣಾವಧಿ ಮುಖ್ಯಮಂತ್ರಿ
ಬಿ.ಎಸ್‌.ಯಡಿಯೂರಪ್ಪ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪುನರುತ್ಛರಿಸಿದರು. ಲಿಂಗಾಯಿತ- ವೀರಶೈವ ಪ್ರತ್ಯೇಕ ಧರ್ಮ ಮಾನ್ಯತೆ ವಿಚಾರದಲ್ಲಿ ಪಕ್ಷಕ್ಕೆ ಯಾವುದೇ ನಷ್ಟ ಉಂಟಾಗದು ಎಂದು ಹೇಳಿದರು. ಮುಖ್ಯಮಂತ್ರಿಯಾಗಿ ಮೇ 17ರಂದು ಪ್ರಮಾಣವಚನ ಸ್ವೀಕರಿಸುವುದಾಗಿ ಯಡಿಯೂರಪ್ಪ ಅವರು ಹೇಳಿರುವುದನ್ನು ಅತಿಯಾದ ವಿಶ್ವಾಸ ಎಂಬುದಕ್ಕಿಂತ ಆತ್ಮವಿಶ್ವಾಸ ಎನ್ನಬಹುದು ಎಂದು ಹೇಳಿದರು.

ಗೆದ್ದ ಬಳಿಕ ಡಿಸಿಎಂ ಚರ್ಚೆ
ಶ್ರೀರಾಮುಲು ಅವರು ರಾಜ್ಯಾದ್ಯಂತ ಪ್ರಚಾರ ನಡೆಸಿದ್ದು, ಸಾಕಷ್ಟು ಪ್ರಭಾವ ಬೀರಿದೆ. ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಚುನಾವಣೆಯಲ್ಲಿ ಗೆದ್ದ ಬಳಿಕ ಈ ಮುಕ್ತವಾಗಿ ಚರ್ಚಿಸಲಾಗುವುದು. ಬಿಜೆಪಿಯಿಂದ ಸ್ಪರ್ಧಿಸಿರುವ ಯಾವುದೇ ಅಭ್ಯರ್ಥಿ ವಿರುದ್ಧ ಗಣಿ ಅಕ್ರಮ ಪ್ರಕರಣದಲ್ಲಿ ಎಫ್ಐಆರ್‌ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಜಾತಿ, ಧರ್ಮದ ಆಧಾರದಲ್ಲಿ ಬಿಜೆಪಿ ಯಾರಿಗೂ ಟಿಕೆಟ್‌ ನೀಡುವುದಿಲ್ಲ. ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆ ನಡೆಸಬಾರದು. ಬಿಜೆಪಿಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೂ ಸಂಬಂಧವಿಲ್ಲ. ನನ್ನ ಮಾತೇ ಅಂತಿಮ.
– ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next