ಬೆಂಗಳೂರು: ಹಿಂದೂಗಳ ಮತ ಕ್ರೋಡೀಕರಣಕ್ಕೆ ಆದ್ಯತೆ ನೀಡಬೇಕು. ಒಗ್ಗಟ್ಟಿನಿಂದ ಎಲ್ಲರೂ ಚುನಾವಣೆಗೆ ಹೋಗಬೇಕು. ಚುನಾವಣೆ ವೇಳೆ ಖುದ್ದಾಗಿ ರಾಜ್ಯಕ್ಕೆ ಬಂದು ತಂತ್ರಗಾರಿಕೆ ರೂಪಿಸುತ್ತೇನೆ…ಇದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಜೆಪಿ ಸಭೆಯಲ್ಲಿ ಶಾಸಕರು, ಎಂಎಲ್ ಸಿಗಳಿಗೆ ಹೇಳಿದ ಮಾತು.
ಶನಿವಾರದಿಂದ ರಾಜ್ಯಕ್ಕೆ 3 ದಿನಗಳ ಭೇಟಿಗಾಗಿ ಆಗಮಿಸಿರುವ ಶಾ ಅವರು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕರು, ಸಂಸದರು ಹಾಗೂ ಎಂಎಲ್ ಸಿಗಳ ಜೊತೆ ಮಾತುಕತೆ ನಡೆಸಿದರು. ಉತ್ತರಪ್ರದೇಶದ ಮಾದರಿಯಲ್ಲೇ ಕರ್ನಾಟಕದಲ್ಲೂ ಚುನಾವಣೆ ಎದುರಿಸುವುದಾಗಿ ತಿಳಿಸಿದರು.
ಮುಂದಿನ ಚುನಾವಣೆಗಾಗಿ ಪ್ರತಿಯೊಬ್ಬರು ಬೂತ್ ಮಟ್ಟದಲ್ಲಿ ಕಾರ್ಯತಂತ್ರ ರೂಪಿಸಬೇಕು. ಶಾಸಕರು, ಸಂಸದರೇ ಬೂತ್ ಮಟ್ಟದ ಕೆಲಸಕ್ಕೆ ಹೊಣೆಗಾರರು. ಯಾವುದೇ ಅಸಮಾಧಾನಕ್ಕೆ ಅವಕಾಶ ಇಲ್ಲ, ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕೆಂದು ಶಾ ಖಡಕ್ ಸಂದೇಶ ರವಾನಿಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಬಿಜೆಪಿ ಶಾಸಕರು, ಎಂಎಲ್ ಸಿಗಳಿಗೆ ಶಾ ಕ್ಲಾಸ್:
Related Articles
ಸಭೆಯಲ್ಲಿ ಶಾ ಮಾತನಾಡಲು ಆರಂಭಿಸುತ್ತಿದ್ದಂತೆಯೇ, ಪೆನ್ನು, ನೋಟ್ ಪ್ಯಾಡ್ ಇದೆಯಾ ಎಂದು ಶಾಸಕರು, ಎಂಎಲ್ ಸಿಗಳನ್ನು ಪ್ರಶ್ನಿಸಿದ್ದರು, ಪೆನ್ನು, ನೋಟ್ ಪ್ಯಾಡ್ ಇಲ್ಲದವರು ಕೂಡಲೇ ತರುವಂತೆ ಸೂಚಿಸಿದ್ದರು. ನಾನು ಹೇಳೋದನ್ನು ಗಮನವಿಟ್ಟು ಕೇಳಿಸಿಕೊಂಡು ಬರೆದಿಟ್ಟುಕೊಳ್ಳಿ ಎಂದು ಹೇಳಿದ್ದರು. ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ಶಾ ಮಾತನಾಡಿರುವುದಾಗಿ ವರದಿ ವಿವರಿಸಿದೆ.