Advertisement

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾಗವಹಿಸಲಿರುವ ಮಂಡ್ಯದ ಸಾರ್ವಜನಿಕ ಸಮಾವೇಶದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಮಂಡ್ಯ, ಮೈಸೂರು, ಚಾಮರಾಜನಗರ ಭಾಗದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆಯಿದೆ.

Advertisement

ಮಂಡ್ಯದಲ್ಲಿ ಮದರ್‌ ಡೈರಿ ಉದ್ಘಾಟನೆಯ ಅನಂತರ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿರುವ ಅಮಿತ್‌ ಶಾ ಬಳಿಕ ಸಂಜೆ 5.30ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಹಕಾರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

33 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 24 ಸಾವಿರ ಕೋಟಿ ರೂ. ಸಾಲ ನೀಡುವ ಹಾಗೂ ಯಶಸ್ವಿನಿ ಯೋಜನೆಗೆ 20 ಲಕ್ಷ ಜನರ ನೋಂದಣಿಯಾಗಿದ್ದು, ಜ. 1ರಿಂದ ಯೋಜನೆಗೆ ಮರು ಚಾಲನೆ ನೀಡುವ ಕಾರ್ಯಕ್ರಮವನ್ನು ಅಮಿತ್‌ ಶಾ ಉದ್ಘಾಟಿಸಲಿದ್ದಾರೆ.

ರಾಜ್ಯ ನಾಯಕರ ಜತೆ ಚರ್ಚೆ:  ಗುರುವಾರ ತಡರಾತ್ರಿ ನಗರಕ್ಕೆ ಆಗಮಿಸಿದ ಅಮಿತ್‌ ಶಾ ಅವರು ಶುಕ್ರವಾರ ಮಂಡ್ಯಕ್ಕೆ ತೆರಳುವ ಮುನ್ನ ರಾಜ್ಯ ನಾಯಕರ ಜತೆ ಚುನಾವಣ ಕಾರ್ಯತಂತ್ರಗಳ ಕುರಿತು ಚರ್ಚಿಸಲಿದ್ದಾರೆ. ಶನಿವಾರ ಬೆಳಗ್ಗೆಯೂ ನಗರದಲ್ಲಿರುವ ಅಮಿತ್‌ ಶಾ ಚುನಾವಣೆ ಎದುರಿಸುವ ಸಂಬಂಧ ರಾಜ್ಯ ನಾಯಕರು ಸಿದ್ಧಪಡಿಸಿರುವ ಕಾರ್ಯಸೂಚಿ ಕುರಿತು ಮಾಹಿತಿ ಪಡೆದು ಸಲಹೆ-ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ  ಗೈರು : ಸಿಂಗಾಪುರ ಪ್ರವಾಸದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು ಅಮಿತ್‌ ಶಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಎರಡೂ ಕಾರ್ಯಕ್ರಮಗಳಲ್ಲಿ  ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

Advertisement

ಸುಮಲತಾ ಬಿಜೆಪಿಗೆ? : ಅಮಿತ್‌ ಶಾ ಅವರನ್ನು ಸ್ವಾಗತಿಸುವ ಫ್ಲೆಕ್ಸ್‌ಗಳಲ್ಲಿ ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅವರ ಚಿತ್ರ ಕಾಣಿಸಿರುವುದು ಹಲವು ಊಹೆಗಳಿಗೆ ಕಾರಣವಾಗಿದೆ. ಅವರು ಬಿಜೆಪಿ ಸೇರುತ್ತಾರೆಯೇ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಸುಮಲತಾ ಪ್ರತಿಕ್ರಿಯೆ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next