Advertisement

ಮೆಕ್ಕಾ ಮಸೀದಿ ಪ್ರಕರಣ: ಕಾಂಗ್ರೆಸ್‌ ಕ್ಷಮೆ ಕೇಳಲಿ

06:00 AM Apr 19, 2018 | |

ಬೆಂಗಳೂರು: ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ಪಣ ತೊಟ್ಟಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಕಾಂಗ್ರೆಸ್‌ ವಿರುದ್ಧದ ವಾಗ್ಧಾಳಿ ಮುಂದುವರಿಸಿದ್ದಾರೆ.

Advertisement

“”ಹೈದರಾಬಾದ್‌ನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಹಿಂದೂ ಭಯೋತ್ಪಾದನೆ, ಕೇಸರಿ ಭಯೋತ್ಪಾದನೆ ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತು. ಆದರೆ, ಇದೀಗ ನ್ಯಾಯಾಲಯ ಬಂಧಿತ ಅಮಾಯಕರನ್ನು ನಿರ್ದೋಷಿಗಳು ಎಂದು ತೀರ್ಪು ನೀಡಿದೆ. ಈಗ ಕಾಂಗ್ರೆಸ್‌ ದೇಶದ ಜನರ ಕ್ಷಮೆಯಾಚಿಸಬೇಕು” ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆಗ್ರಹಿಸಿದರು.

ಅರಮನೆ ಮೈದಾನದಲ್ಲಿ ಬುಧವಾರ ನಡೆದ ಬಿಜೆಪಿ ಶಕ್ತಿಕೇಂದ್ರ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದರು. ಮೆಕ್ಕಾ ಮಸೀದಿ ಪ್ರಕರಣದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಾಯಕರೆಲ್ಲಾ ಟೀಕಿಸಿದ್ದರು. ಬಿಜೆಪಿ ತೀವ್ರ ನೋವು ಅನುಭವಿಸಿತ್ತು. ಅಮಾಯಕರು ಬಂಧಿತರಾಗಿದ್ದರು. ಆದರೆ, ಈಗ ಕಾಂಗ್ರೆಸ್‌ ನಾಯಕರು ಬಾಯಿ ಮುಚ್ಚಿಕೊಂಡಿರುವುದೇಕೆ? ಎಂದು ಪ್ರಶ್ನಿಸಿದರು.

ರಾಹುಲ್‌ಗಾಂಧಿ, ಚಿದಂಬರಂ, ದಿಗ್ವಿಜಯ್‌ಸಿಂಗ್‌, ಸಿದ್ದರಾಮಯ್ಯ ಅವರು ಯಾವ್ಯಾವ ದಿನಾಂಕದಂದು ಮೆಕ್ಕಾ ಮಸೀದಿ ಸ್ಫೋಟ ಹಾಗೂ ಕೇಸರಿ, ಹಿಂದೂ ಭಯೋತ್ಪಾದನೆ ಬಗ್ಗೆ ಮಾತನಾಡಿದ್ದರು ಎಂಬುದನ್ನು ವಿವರಿಸಿದ ಅಮಿತ್‌ ಶಾ, ಬಿಜೆಪಿ ಇದಾವುದನ್ನೂ ಮರೆತಿಲ್ಲ. ಕಾಂಗ್ರೆಸ್‌ ಈ ವಿಚಾರದಲ್ಲಿ ಉತ್ತರಿಸಲೇಬೇಕು. ಮಾಡಿದ ತಪ್ಪಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಹಿಂದೂಪರ ಕಾರ್ಯಕರ್ತರ ಹತ್ಯೆಯಾಗಿದೆ. ಇದಕ್ಕೆಲ್ಲಾ ಇತಿಶ್ರೀ ಹಾಡಲೇಬೇಕಿದೆ. ಹಿಂದೂಪರ ಕಾರ್ಯಕರ್ತರ ಕೊಲೆಗೈದವರನ್ನು ಎಷ್ಟು ದಿನ ರಕ್ಷಿಸುತ್ತೀರೋ ರಕ್ಷಿಸಿ. ಯಡಿಯೂರಪ್ಪ ನೇತೃತ್ವದಲ್ಲಿ ನಮ್ಮ ಸರ್ಕಾರ ಬಂದ ನಂತರ ಆರೋಪಿಗಳು ಪಾತಾಳದಲ್ಲಿ ಅಡಗಿದ್ದರೂ ಹೊರಗೆ ಎಳೆದು ಶಿಕ್ಷೆ ಕೊಡಿಸುತ್ತೇವೆ. ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಗುಡುಗಿದರು.

ಹೌದು, ಕರ್ನಾಟಕ ಪ್ರತಿಷ್ಠೆಯ ಕಣ
ಕರ್ನಾಟಕ ವಿಧಾನಸಭೆ ಚುನಾವಣೆ ಬಿಜೆಪಿ ಪಾಲಿಗೆ ಅತ್ಯಂತ ಪ್ರಮುಖ. ದಕ್ಷಿಣ ಭಾರತದ ಪ್ರವೇಶ ದ್ವಾರವಾಗಿರುವ ಇಲ್ಲಿನ ಜಯ ನಮಗೆ ಪ್ರತಿಷ್ಠೆಯೂ ಹೌದು. ಬೆಂಗಳೂರಿನಲ್ಲಿ ಬಿಜೆಪಿ ಹವಾ ಎಬ್ಬಿಸುವ ಮೂಲಕ ಅದು ಸುನಾಮಿಯಂತೆ ಇಡೀ ರಾಜ್ಯ ಆವರಿಸುವಂತೆ ಮಾಡುವ ಹೊಣೆಗಾರಿಕೆ ನಮ್ಮ ಕಾರ್ಯಕರ್ತರು ಹಾಗೂ ಶಕ್ತಿ ಕೇಂದ್ರದ ಪ್ರಮುಖರ ಮೇಲಿದೆ. ಬಿಜೆಪಿ ವಿಜಯಯಾತ್ರೆ ದೇಶದ 21 ರಾಜ್ಯ ಸಂಚರಿಸಿ ವಿಜಯ ಪತಾಕೆ ಹಾರಿಸಿ ಕರ್ನಾಟಕಕ್ಕೆ ಪ್ರವೇಶಿಸಿದೆ. ಇಲ್ಲಿ ವಿಜಯದ ಬಾವುಟ ಹಾರಿಸಿ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳಕ್ಕೆ ಪ್ರವೇಶಿಸಿ ಅಲ್ಲಿಯೂ ಜಯ ಪಡೆದೇ ತೀರಲಿದೆ ಎಂದಿದ್ದಾರೆ ಅಮಿತ್‌ ಶಾ.

Advertisement

ಕಾಂಗ್ರೆಸ್ಸಿಗರೇ ಲೆಕ್ಕ ಕೊಡಿ
ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಬೆಂಗಳೂರು ಸೇರಿ ಕರ್ನಾಟಕದ ಅಭಿವೃದ್ಧಿಗೆ 2.19 ಲಕ್ಷ ಕೋಟಿ ರೂ. ಅನುದಾನ ನೀಡಿದೆ. ಐವತ್ತು ವರ್ಷ ದೇಶ ಆಳಿದ ನಾಲ್ಕು ಪೀಳಿಗೆ ಕೊಟ್ಟ ಕೊಡುಗೆಯ ಲೆಕ್ಕ ರಾಹುಲ್‌ಗಾಂಧಿ ಕೊಡಲಿ. ಜವಹರ್‌ಲಾಲ್‌ ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ, ಮನಮೋಹನ್‌ ಸಿಂಗ್‌ವರೆಗೆ ಆಡಳಿತ ನಡೆಸಿದ ಕಾಂಗ್ರೆಸ್‌ ಕೊಟ್ಟಿದ್ದೇನು ಎಂಬುದರ ಲೆಕ್ಕ ಕೊಡಬೇಕಲ್ಲವೇ?

– ಅಮಿತ್‌ ಶಾ

ಇಬ್ಬರೂ ಸೋಲ್ತಾರೆ
ನಾನು ಸೋತರೆ ಬಸವಣ್ಣನ ಸೋಲು ಎಂದು ಎಂ.ಬಿ.ಪಾಟೀಲ್‌ ಹೇಳುವ ಮೂಲಕ ಬಸವಣ್ಣ ಅವರ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ಎಂ.ಬಿ.ಪಾಟೀಲ್‌ ಅಷ್ಟೇ ಅಲ್ಲದೆ, ಧರ್ಮ ವಿಭಜನೆ ಮಾಡಲು ಮುಂದಾಗಿರುವ ಸಿದ್ದರಾಮಯ್ಯ ಸಹ ಈ ಬಾರಿ ಸೋಲುವುದು ಖಚಿತ. ಚಾಮುಂಡೇಶ್ವರಿಯಲ್ಲಿ ಗೆಲ್ಲಲಾಗದು ಎಂದೇ ಬಾದಾಮಿಯಲ್ಲಿ ಸ್ಪರ್ಧಿಸುವ ಆಸೆ ಇಟ್ಟುಕೊಂಡಿದ್ದಾರೆ. ಅಲ್ಲಿಯೂ ಅವರಿಗೆ ಸೋಲು ಖಚಿತ.
– ಬಿ.ಎಸ್‌.ಯಡಿಯೂರಪ್ಪ

Advertisement

Udayavani is now on Telegram. Click here to join our channel and stay updated with the latest news.

Next