Advertisement

ಅಮಿತ್‌ ಶಾ ಆಗಮನ: ಟೈಟ್‌ ಸೆಕ್ಯೂರಿಟಿ

12:02 PM Jan 16, 2021 | Team Udayavani |

ಬೆಂಗಳೂರು: ಕೇಂದ್ರ ಗೃಹಸಚಿವ ಅಮಿತ್‌ ಶಾ ಶನಿವಾರ ವಿಧಾನಸೌಧದಲ್ಲಿ ನಡೆಯಲಿರುವ “ಪೊಲೀಸ್‌ ವಸತಿಗೃಹಗಳ ನಿರ್ಮಾಣ-2025′ ಯೋಜನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವರ ಭೇಟಿ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್‌ ಅನುಚೇತ್‌ ಅವರ ನೇತೃತ್ವದಲ್ಲಿ ಭದ್ರತೆ ಕಲ್ಪಿಸಿದ್ದು ಐನೂರಕ್ಕೂ ಅಧಿಕ ಮಂದಿ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಜತೆಗೆ, ಕೆಎಸ್‌ಆರ್‌ಪಿ ಸಿಬ್ಬಂದಿಯನ್ನೂ ಭದ್ರತೆಗೆ ನಿಯೋಜಿಸಲಾಗಿದೆ.

Advertisement

ಅಷ್ಟೇ ಅಲ್ಲದೆ ಅಂಬೇಡ್ಕರ್‌  ರಸ್ತೆ ಎಂ.ಎಸ್‌. ಬಿಲ್ಡಿಂಗ್‌ ಸುತ್ತಮುತ್ತಲ ಭಾಗಗಳಲ್ಲಿ ನೂರಕ್ಕೂ ಹೆಚ್ಚಿನ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸಿಸಿ ಕ್ಯಾಮೆರಾಗಳ ಪರಿಶೀಲನೆ ಕಮಾಂಡ್‌ ಸೆಂಟರ್‌ನಲ್ಲಿ ನಡೆಯುತ್ತಲಿರುತ್ತದೆ. ವಿಧಾನಸೌಧ ವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲಿ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದು ಕಣ್ಗಾವಲಿಟ್ಟಿರುತ್ತಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಮತ್ತೊಂದೆಡೆ ಕೇಂದ್ರ ಗೃಹಸಚಿವರಿಗೆ ಶಿಷ್ಟಾಚಾರದ ಗೌರವ ವಂದನೆ ನೀಡಲಾಗುತ್ತದೆ. ಅಶ್ವದಳ, ಕೆಎಸ್‌ ಆರ್‌ಪಿಯ ಬ್ಯಾಂಡ್‌ ಸಿಬ್ಬಂದಿ ಯಿಂದ ಗೌರವ ಸ್ವಾಗತ ಕೋರಲಾಗುತ್ತದೆ. ಶುಕ್ರವಾರ ಅಶ್ವದಳ, ಬ್ಯಾಂಡ್‌ಸೆಟ್‌ ಸಿಬ್ಬಂದಿ ತಾಲೀಮು ಗಮನಸೆಳೆಯಿತು.

ಸಂಚಾರ ಬಂದ್‌!: ಅಂಬೇಡ್ಕರ್‌ ವೀದಿ ಒಳಗೊಂಡಂತೆ ಕೆ.ಆರ್‌ ವೃತ್ತದಿಂದ ಬಾಳೇಕುಂದ್ರಿ ವೃತ್ತದವರೆಗೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಶಾ ಭೇಟಿ ಹಿನ್ನೆಲೆ ಬೀದಿನಾಯಿಗಳ ಸ್ಥಳಾಂತರ

Advertisement

ಬೆಂಗಳೂರು: ನಗರಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬರುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಬೀದಿನಾಯಿಗಳನ್ನು ಸ್ಥಳಾಂತರ ಮಾಡಲಾಗಿದೆ. ಇಲ್ಲಿಯವರೆಗೆ 12ಕ್ಕೂ ಹೆಚ್ಚು ನಾಯಿಗಳನ್ನು ಪಾಲಿಕೆಯ ಪೂರ್ವ ವಲಯದ ಎಬಿಸಿ ಸೆಂಟರ್‌ಗೆ ಸ್ಥಳಾಂತರಿಸಲಾಗಿದೆ.

ವಿಧಾನಸೌಧ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿರುವ ನಾಯಿಗಳನ್ನು ಸ್ಥಳಾಂತರ ಮಾಡುವಂತೆ ವಿಧಾನಸೌಧದ ಭದ್ರತಾ ವಿಭಾಗದ ಪೊಲೀಸ್‌ ಅಧಿಕಾರಿಗಳು ಪಾಲಿಕೆಯ ಪಶುಪಾಲನಾ ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆದ ಮೇಲೆ, ಪಾಲಿಕೆ ಈ ಕ್ರಮಕ್ಕೆ ಮುಂದಾಗಿದೆ. ಅಮಿತ್‌ ಶಾ ಅವರು ರಾಜ್ಯ ಪ್ರವಾಸ ಕೈಗೊಳ್ಳು ತ್ತಿದ್ದು, ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಹಾಗೂ ವಿಧಾನಸೌಧ ಕೊಠಡಿ 334ರಲ್ಲಿ ಸಭೆ- ಸಮಾರಂಭಗಳು ನಡೆಯಲಿವೆ.

ಈ ವೇಳೆ ಬೀದಿ ನಾಯಿಗಳು ಗೃಹ ಸಚಿವರು, ಮುಖ್ಯಮಂತ್ರಿ, ಶಾಸಕರು ಅಥವಾ ಆಹ್ವಾನಿತರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಇಲ್ಲವೇ ಎಲ್ಲೆಂದರಲ್ಲಿ ಸಂಚರಿಸಿ ಮುಜುಗರವುಂಟು ಮಾಡುವ ಸಾಧ್ಯತೆ ಇದೆ. ಹೀಗಾಗಿ, ವಿಧಾನಸೌಧ ಹಾಗೂ ಸಮೂಹ ಕಟ್ಟಡ ವ್ಯಾಪ್ತಿಯ ಆವರಣದಲ್ಲಿ ನಾಯಿಗಳನ್ನು ಪುನರ್‌ ವಸತಿ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಮನವಿ ಮಾಡಲಾಗಿದೆ. “ಪೊಲೀಸ್‌ ಇಲಾಖೆಯು ಭದ್ರತೆ ಹಾಗೂ ಅಹಿತಕರ ಘಟನೆ ನಡೆಯುವುದು ತಪ್ಪಿಸುವ ಉದ್ದೇಶದಿಂದ ವಿಧಾನಸೌಧ ಹಾಗೂ ಸುತ್ತಮುತ್ತಲಿನ ಪ್ರದೇಶದ ನಾಯಿಗಳ ಸ್ಥಳಾಂತರಕ್ಕೆ ಮನವಿ ಮಾಡಿದೆ.

ಇದನ್ನೂ ಓದಿ:ಕೊಪ್ಪಳದಲ್ಲಿ ಜಿಲ್ಲಾಸ್ಪತ್ರೆ ಡಿ-ದರ್ಜೆ ನೌಕರನಿಗೆ ಮೊದಲ ಲಸಿಕೆ

ಸುಪ್ರೀಂ ಕೋರ್ಟ್‌ನ ಆದೇಶದ ಅನುಸಾರ ನಾಯಿಗಳನ್ನು ಸ್ಥಳಾಂತರ ಮಾಡುವಂತಿಲ್ಲ. ಹೀಗಾಗಿ, ಹೆಚ್ಚು ನಾಯಿಗಳನ್ನು ಸಂತಾನಹರಣ ಶಸ್ತ್ರಚಿಕಿತ್ಸಾ (ಎಬಿಸಿ) ಕೇಂದ್ರಕ್ಕೆ ಬಿಡಲಾಗಿದೆ. ಇವುಗಳ ಆರೋಗ್ಯ ಪರೀಕ್ಷೆ ಮಾಡಿ, ಯಾವುದಾದರು ನಿರ್ದಿಷ್ಟ ನಾಯಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವುದು ಬಾಕಿ ಇದ್ದರೆ, ಮಾಡಿ ಮತ್ತೆ ತಂದು ಬಿಡಲಿದ್ದೇವೆ’ ಎಂದು ಪಾಲಿಕೆಯ ಪಶು ಪಾಲನಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next