Advertisement

ನಿರ್ಬಂಧದ ನಡುವೆ “ಚಾರಣ’ವೇ ಅಪಾಯಕ್ಕೆ ಕಾರಣ !

12:06 AM Jul 31, 2023 | Team Udayavani |

ಮಂಗಳೂರು: ಅಬ್ಬರಿಸುತ್ತಿರುವ ಮಳೆ, ಘಟ್ಟ ಪ್ರದೇಶದಲ್ಲಿ ಭೂ ಕುಸಿತದ ಭೀತಿ, ತುಂಬಿ ಹರಿಯುತ್ತಿರುವ ತೊರೆ-ಝರಿಗಳಿಂದ ಅಪಾಯವಿರುವ ಕಾರಣ ಪ್ರವಾಸಿಗರ ಸುರಕ್ಷತೆಗಾಗಿ ಜಿಲ್ಲಾಡಳಿತ ಪಶ್ಚಿಮ ಘಟ್ಟದ ವಿವಿಧ ಬೆಟ್ಟ-ಗುಡ್ಡಗಳ ಚಾರಣಕ್ಕೆ ನಿರ್ಬಂಧ ಹೇರಿದೆ. ಆದರೂ ಕೆಲವೊಂದು ಚಾರಣ ಆಯೋಜಕ ಸಂಸ್ಥೆಗಳು “ವೀಕೆಂಡ್‌ ಟ್ರೆಕ್ಕಿಂಗ್‌’ ಎಂದು ಬುಕ್ಕಿಂಗ್‌ ಮಾಡಿ ಚಾರಣಿಗರನ್ನು ಮಲೆನಾಡು, ಕರಾವಳಿಯ ವಿವಿಧ ತಾಣಗಳಿಗೆ ಕರೆದುಕೊಂಡು ಬರುತ್ತಿವೆ.

Advertisement

ಈಗಾಗಲೇ ಚಾರಣ, ಪ್ರವಾಸಿ ಚಟುವಟಿಕೆ ನಿಷೇಧಿಸಿರುವ ಜಿಲ್ಲಾಡಳಿತಕ್ಕೆ ಇದೊಂದು ತಲೆನೋವಾಗಿ ಪರಿಣಮಿಸಿದ್ದು, ಅರಣ್ಯ ಇಲಾಖೆಯವರು ಅಂಥವರನ್ನು ವಾಪಸು ಕಳುಹಿಸುವ ಕೆಲಸ ಮಾಡುತ್ತಿದ್ದಾರೆ.
ಜಿಲ್ಲೆಯ ಪ್ರಮುಖ ಟ್ರೆಕ್ಕಿಂಗ್‌ ಪಾಯಿಂಟ್‌ ಆಗಿರುವ ಕುದುರೆಮುಖ, ಕುರಿಂಜಾಲ್‌ ಮತ್ತು ಗಂಗಡಿಕಲ್‌ ಪರ್ವತಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಆನ್‌ಲೈನ್‌ ಬುಕ್ಕಿಂಗ್‌ ರದ್ದು ಮಾಡಿದ್ದು, ಚಾರಣಿಗರಿಗೆ ಪ್ರವೇಶವಿಲ್ಲ ಎಂದು ಈಗಾಗಲೇ ಸೂಚಿಸಿದೆ. ಇದನ್ನು ಹೊರತು ಪಡಿಸಿಯೂ ಉಭಯ ಜಿಲ್ಲೆಗಳಲ್ಲಿ ಸಾಕಷ್ಟು ಟ್ರೆಕ್ಕಿಂಗ್‌ ತಾಣಗಳಿದ್ದು, ಅನಧಿಕೃತ ಚಾರಣ ಹಾದಿಗಳೂ ಇವೆ. ಸ್ಥಳೀಯವಾಗಿರುವ ಕೆಲವು ಹೋಮ್‌ಸ್ಟೇಗಳು, ಬೆಂಗಳೂರು, ಮೈಸೂರಿನ ಕೆಲವು ಸಂಸ್ಥೆಗಳು ವಿದ್ಯಾರ್ಥಿಗಳು, ಟೆಕ್ಕಿಗಳನ್ನು ಚಾರಣ ಹೆಸರಿನಲ್ಲಿ ಕರೆದುಕೊಂಡು ಬಂದು ಅಪಾಯಕ್ಕೆ ಸಿಲುಕಿಸುತ್ತಿವೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಷೇಧದ ಬಗ್ಗೆ ಅರಿವು ಇಲ್ಲದವರು ಬಂದು ಕೊನೆಗೆ ಪರಿತಪಿಸುತ್ತಾರೆ. ಮುಖ್ಯ ದಾರಿಗಳಲ್ಲಿ ಹೋಗಲು ಅವಕಾಶ ಇಲ್ಲ ಎಂದಾಗ ಅಡ್ಡದಾರಿಗಳನ್ನು ಹಿಡಿದು ಹೋಗುತ್ತಾರೆ. ಸೂಕ್ತ ಗೈಡ್‌ಗಳೂ ಇಲ್ಲದೆ ಕೊನೆಗೆ ಅಪಾಯ ತಂದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಟ್ರೆಕ್ಕಿಂಗ್‌ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಅನಧಿಕೃತವಾಗಿ ಪ್ರವೇಶಿಸಿದರೆ ಕ್ರಮ
ಚಾರಣದ ಹೆಸರಿನಲ್ಲಿ ಹೋಮ್‌ಸ್ಟೇಗಳಿಗೆ ಪ್ರವಾಸಿಗರನ್ನು ಕರೆಸಿಕೊಂಡರೆ ಕ್ರಮ ಕೈಗೊಳ್ಳುವ ಬಗ್ಗೆ ಈಗಾಗಲೇ ಅರಣ್ಯ ಇಲಾಖೆ ಸೂಚನೆ ನೀಡಿದ್ದು, ಅನಧಿಕೃತವಾಗಿ ಪ್ರವೇಶಿಸುವವರ ವಿರುದ್ಧ ಕಠಿನ ಕ್ರಮದ ಎಚ್ಚರಿಕೆ ನೀಡಿದೆ. ಮಳೆಯಿಂದಾಗಿ ಕಾಡೊಳಗೆ, ಗುಡ್ಡದಲ್ಲಿ ನಡೆದಾಡುವ ಪ್ರದೇಶ, ಕಲ್ಲು ಬಂಡೆಗಳು ಜಾರುತ್ತಿವೆ. ಇದರಿಂದ ಅಪಾಯ ಉಂಟಾಗುವ ಸಾಧ್ಯತೆಯಿದೆ. ಮಳೆ ಕಡಿಮೆಯಾದರೆ ಮುಂದಿನ ವಾರ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ, ನಿರ್ಬಂಧ ವಾಪಸ್‌ ಪಡೆಯುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಬೀಚ್‌ಗಳಿಂದಲೂ
ಪ್ರವಾಸಿಗರು ವಾಪಸ್‌
ಮಳೆ ಕಡಿಮೆಯಾದರೂ ಕಡಲು ಪ್ರಕ್ಷುಬ್ದವಾಗಿರುವುದರಿಂದ ಪ್ರವಾಸಿಗರಿಗೆ ಈಗಾಗಲೇ ಬೀಚ್‌ಗಳಿಗೂ ನಿರ್ಬಂಧ ವಿಧಿಸಲಾಗಿದೆ. ಆದರೂ ಸಾಕಷ್ಟು ಸಂಖ್ಯೆಯಲ್ಲಿ ಸ್ಥಳೀಯರು ಮತ್ತು ಹೊರ ಜಿಲ್ಲೆಯವರು ಬೀಚ್‌ಗಳಿಗೆ ಆಗಮಿಸುತ್ತಿದ್ದಾರೆ. ಸೆಲ್ಫಿ, ರೀಲ್ಸ್‌ ಎಂದು ಮೋಜು ಮಾಡುವ ಪ್ರವಾಸಿಗರನ್ನು ಭದ್ರತಾ ಸಿಬಂದಿ ಹಾಗೂ ಹೋಮ್‌ಗಾರ್ಡ್‌ ಗಳು ವಾಪಸ್‌ ಕಳುಹಿಸುತ್ತಿದ್ದಾರೆ.

Advertisement

ಪಶ್ಚಿಮ ಘಟ್ಟದ ಬೆಟ್ಟಗಳಿಗೆ ಚಾರಣವನ್ನು ಈ ವಾರಾಂತ್ಯದ ವರೆಗೆ ನಿರ್ಬಂಧಿಸಲಾಗಿದೆ. ಈಗಾಗಲೇ ಈ ಬಗ್ಗೆ ಸ್ಥಳೀಯ ಹೋಮ್‌ ಸ್ಟೇಗಳು, ಟ್ರೆಕ್ಕಿಂಗ್‌ ಆಯೋಜಕ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ. ಆದಾಗ್ಯೂ ಗೊತ್ತಿಲ್ಲದೆ ಬಂದವರನ್ನು ವಾಪಸ್‌ ಕಳಹಿಸಲಾಗುತ್ತಿದೆ. ಅನಧಿಕೃತವಾಗಿ ಪ್ರವೇಶಿಸುವವರ ಮೇಲೂ ಕಣ್ಣಿಡಲಾಗುತ್ತಿದ್ದು, ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.
-ಡಾ| ವಿ. ಕರಿಕಾಳನ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ಮಂಗಳೂರು ವೃತ್ತ

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next