ಕೋವಿಡ್ ನಿಂದಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳಂತೆ ಭಾರತದ ಆರ್ಥಿಕತೆಗೂ ಪೆಟ್ಟು ಬಿದ್ದಿದೆ. ಮುಂದಿನ ವಿತ್ತ ದಾರಿ ಹೇಗಿರಬಹುದು, ಹೇಗಿರಬೇಕು ಎನ್ನುವುದರ ಬಗ್ಗೆ ಚರ್ಚೆಗಳು, ಪ್ರಯತ್ನಗಳು, ನೀತಿ ನಿರೂಪಣೆಗಳು ಆರಂಭವಾಗಿವೆ. ಭಾರತವನ್ನು ಆತ್ಮನಿರ್ಭರವಾಗಿಸುವ ಜತೆಗೆ ಜಾಗತಿಕ ಉತ್ಪಾದನ ಹಬ್ ಆಗಿಸುವ ಗುರಿಯೂ ದೇಶದ ಮುಂದಿದೆ.
ಭಾರತದ ಈ ಆಕಾಂಕ್ಷೆಗಳಿಗೆ ಪೂರಕವಾಗುವಂಥ ವರದಿಯೊಂದು ಈಗ ಹೊರಬಿದ್ದಿದೆ. ಜಾಗತಿಕ ಉತ್ಪಾದನ ವಲಯಗಳಿಗೆ ಅನುಕೂಲಕರವಾಗಿರುವ 48 ರಾಷ್ಟ್ರಗಳ ಪೈಕಿ ಭಾರತ 3ನೇ ಸ್ಥಾನ ಪಡೆದಿದೆ ಎಂದು ಜಾಗತಿಕ ಅಧ್ಯಯನ ವರದಿಯೊಂದು ಹೇಳಿದೆ. ಗ್ಲೋಬಲ್ ಮ್ಯಾನುಫ್ಯಾಕ್ಚರಿಂಗ್ ರಿಸ್ಕ್ ಇಂಡೆಕ್ಸ್ (ಎಂಆರ್‌ಐ) ವರದಿಯು ರಾಷ್ಟ್ರವೊಂದರಲ್ಲಿನ ಉತ್ಪಾದನಾ ವೆಚ್ಚ, ಕಾರ್ಯಾಚರಣೆಯವ್ಯವಸ್ಥೆಯ ಮಾನದಂಡಗಳನ್ನು ಆಧರಿಸಿ ಈ ರ್‍ಯಾಂಕ್‌ಗಳನ್ನು ಸಿದ್ಧಪಡಿಸಿದ್ದು, ಚೀನ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕ ಎರಡನೇ ಸ್ಥಾನದಲ್ಲಿದೆ. ದೇಶದ ಆರ್ಥಿಕತೆಗೆ ಕೋವಿಡ್-19 ಸವಾಲೊಡ್ಡಿರುವ ಈ ಸಮಯದಲ್ಲೇ ಇಂಥ ವರದಿ ಬಂದಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆಯೇ ಸರಿ.
ಈಗಾಗಲೇ ಚೀನದಿಂದ ನೆಲೆ ಬದಲಿಸಲು ಯೋಚಿಸುತ್ತಿರುವ ಅನೇಕ ಬಹುರಾಷ್ಟ್ರೀಯ ಕಂಪೆನಿಗಳು ಭಾರತದತ್ತ ನೋಡಲಾರಂಭಿಸಿವೆ. ಅವೂ ಸೇರಿದಂತೆ, ಮೇ ತಿಂಗಳಲ್ಲೇ ಸಾವಿರಕ್ಕೂ ಹೆಚ್ಚು ವಿದೇಶಿ ಕಂಪೆನಿಗಳು ಭಾರತ ಸರಕಾರದ ಜತೆ ಈ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದು, ಭಾರತವೂ ಸಹ ಈ ಕಂಪೆನಿಗಳ ನಿರೀಕ್ಷೆಗಳನ್ನು ಅವಲೋಕಿಸುತ್ತಿದೆ.
ಇಂದು ಚೀನದ ಮೇಲಿನ ಅವಲಂಬನೆಯನ್ನು ತಗ್ಗಿಸಿಕೊಳ್ಳಬೇಕಾದ ಅಗತ್ಯ ಭಾರತದ ಮೇಲಷ್ಟೇ ಅಲ್ಲ, ಇಡೀ ಪ್ರಪಂಚದ ಮೇಲೂ ಬಿದ್ದಿದೆ. ಚೀನದೊಂದಿಗೆ ಆರ್ಥಿಕ ವಹಿವಾಟು ಹೆಚ್ಚಾದಷ್ಟೂ, ಡ್ರ್ಯಾಗನ್ ರಾಷ್ಟ್ರದಿಂದ ವಿವಿಧ ರೀತಿಯಲ್ಲಿ ತೊಂದರೆಗಳು ಎದುರಾಗುವುದನ್ನು ರಾಷ್ಟ್ರಗಳು ಮನಗಾಣುತ್ತಿವೆ. ಆದಾಗ್ಯೂ, ಉತ್ಪಾದನ ಹಬ್ ಆಗಿ ಬೆಳೆಯುವುದಕ್ಕೆ ವಿವಿಧ ಅಗತ್ಯಗಳು ಇರುತ್ತವೆ. ಕಾರ್ಮಿಕ ವೆಚ್ಚ, ನಿರ್ವಹಣ ವೆಚ್ಚ ಕಡಿಮೆಯಿರುವುದು ಹಾಗೂ ಮುಖ್ಯವಾಗಿ ಸಂಚಾರ- ಸಾಗಣೆ, ತೆರಿಗೆ ಪದ್ಧತಿಯು ಕಂಪೆನಿಗಳಿಗೆ ಪೂರಕವಾಗಿದೆಯೇ ಎನ್ನುವುದನ್ನು ಹೂಡಿಕೆದಾರರು ಪರಿಗಣಿಸುತ್ತಾರೆ. ಈ ವಿಚಾರದಲ್ಲಿ ಈಗಲೂ ಚೀನದಲ್ಲಿ ಕಂಪೆನಿಗಳಿಗೆ ಪೂರಕವಾಗುವಂಥ ವ್ಯವಸ್ಥೆ ಇದೆ ಎನ್ನುವುದನ್ನು ಗಮನಿಸಬೇಕು. ಆದರೆ ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ ಮುಂದಿನ ವರ್ಷಗಳಲ್ಲಿ ನಿಸ್ಸಂಶಯವಾಗಿಯೂ ಭಾರತವು ಅಮೆರಿಕ ಮತ್ತು ಚೀನಕ್ಕೆ ಸರಿಸಮನಾಗಿ ಪೈಪೋಟಿ ನೀಡುವಂಥ ಉತ್ಪಾದನ ಕೇಂದ್ರವಾಗಿ ಬದಲಾಗುವ ಸಾಧ್ಯತೆ ಇದೆ.
ಚೀನ ಮತ್ತು ಭಾರತದ ನಡುವಿನ ವ್ಯತ್ಯಾಸವೆಂದರೆ ಚೀನದಲ್ಲಿ ಜಿನ್‌ಪಿಂಗ್ ಸರಕಾರದ ನಿರ್ಣಯವೇ ಅಂತಿಮ. ಇನ್ನೊಂದೆಡೆ ಭಾರತದಲ್ಲಿ ಹೂಡಿಕೆ, ಉತ್ಪಾದನ ಘಟಕಗಳಿಗೆ ಜಾಗ ನೀಡುವಿಕೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ರಾಜ್ಯ ಸರಕಾರಗಳ ತೀರ್ಮಾನ ಮುಖ್ಯ. ಈ ನಿಟ್ಟಿನಲ್ಲಿ ಉತ್ಪಾದನ ಹಬ್ ಆಗಿ ಬೆಳೆಯುವ ಹಾದಿಯಲ್ಲಿ ಇರುವ ಅಡ್ಡಿ ಆತಂಕಗಳನ್ನು ನಿವಾರಣೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತ್ವರಿತವಾಗಿ ಮುಂದಾಗಬೇಕಿದೆ. ಇದೇ ವೇಳೆಯಲ್ಲೇ ದೇಶವನ್ನು ಆತ್ಮನಿರ್ಭರಗೊಳಿಸುವ ಪ್ರಯತ್ನಕ್ಕೂ ವೇಗನೀಡಬೇಕಾಗಿದೆ.