ನವದೆಹಲಿ:ಮಹಾರಾಷ್ಟ್ರದಲ್ಲಿ ಹಳೆಯ ಮೈತ್ರಿಪಕ್ಷವಾದ ಬಿಜೆಪಿಯಿಂದ ಬೇರ್ಪಟ್ಟ ಶಿವಸೇನಾ ಹಾಗೂ ಎನ್ ಸಿಪಿ, ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಲು ಮುಂದಾಗಿರುವ ಬೆಳವಣಿಗೆಯ ನಡುವೆಯೇ ಶರದ್ ಪವಾರ್ ನೇತೃತ್ವದ ಎನ್ ಸಿಪಿ ಹಾಗೂ ಬಿಜೆಡಿ ಪಕ್ಷ ಲೋಕಸಭೆಯಲ್ಲಿ ಶಿಷ್ಟಾಚಾರವನ್ನು ಕಾಪಾಡಿಕೊಂಡು ಬಂದಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಸೋಮವಾರ ರಾಜ್ಯಸಭೆಯಲ್ಲಿ ಐತಿಹಾಸಿಕ 250ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಎನ್ ಸಿಪಿ(ಶರದ್ ಪವಾರ್) ಹಾಗೂ ಬಿಜು ಜನತಾ ದಳದ (ನವೀನ್ ಪಟ್ನಾಯಕ್) ಮುಖಂಡರು ಯಾವತ್ತೂ ಸದನದ ಬಾವಿ ಬಳಿ ತೆರಳಿ ಪ್ರತಿಭಟನೆ ನಡೆಸಿಲ್ಲ. ತಮ್ಮ ಅಹವಾಲಿನ ಬಗ್ಗೆ ಸಮರ್ಥವಾಗಿ ಧ್ವನಿಎತ್ತುವ ಮೂಲಕ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಸಂಸತ್ ನಲ್ಲಿ ಯಾವುದೇ ಕೋಲಾಹಲ ನಡೆಸದೇ ವಿಷಯದ ಬಗ್ಗೆ ಹೇಗೆ ಧ್ವನಿ ಎತ್ತಬೇಕು ಎಂಬ ಬಗ್ಗೆ ಭಾರತೀಯ ಜನತಾ ಪಕ್ಷ ಸೇರಿದಂತೆ ಉಳಿದ ಪಕ್ಷಗಳು ಕೂಡಾ ಎನ್ ಸಿಪಿ ಮತ್ತು ಬಿಜೆಡಿ ಪಕ್ಷವನ್ನು ನೋಡಿ ಕಲಿಯಬೇಕು ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಸಂಸದರಿಗೆ ಸಲಹೆ ನೀಡಿದರು.
ಇಂದು ನಾನು ಎನ್ ಸಿಪಿ, ಬಿಜೆಡಿ ಸೇರಿ ಎರಡೂ ಪಕ್ಷಗಳನ್ನು ಅಭಿನಂದಿಸುತ್ತೇನೆ. ಎರಡೂ ಪಕ್ಷಗಳೂ ಸಂಸತ್ತಿನ ನಡವಳಿಕೆ(ಶಿಷ್ಟಾಚಾರ)ಯನ್ನು ಸಮರ್ಪಕವಾಗಿ ಅನುಸರಿಸಿವೆ. ಅವರು ಯಾವತ್ತೂ ಸಂಸತ್ ನ ಬಾವಿ ಬಳಿ ತೆರಳಿ ಗದ್ದಲ ಎಬ್ಬಿಸಿಲ್ಲ ಎಂದು ಹೊಗಳಿದರು.
ಮೇಲ್ಮನೆಯ ಕಲಾಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎನ್ ಸಿಪಿಯನ್ನು ಹೊಗಳಿದ್ದನ್ನು ಕೇಳಿ ಹಲವರು ಹುಬ್ಬೇರಿಸುವಂತಾಗಿತ್ತು. ಅದಕ್ಕೆ ಕಾರಣ ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನಾ ಮೈತ್ರಿಯನ್ನು ಕಡಿದುಕೊಂಡ ನಂತರ, ಸರ್ಕಾರ ರಚನೆಗಾಗಿ ಶಿವಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ಮಾತುಕತೆ ನಡೆಸುತ್ತಿರುವುದು.!