ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಬುಧವಾರ ಹೊಸದಿಲ್ಲಿಯಲ್ಲಿ 18ನೇ ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದೆ. ಅದಕ್ಕೆ ಪೂರಕವಾಗಿ ಮಾರ್ಚ್‌ವರೆಗೆ ಪ್ರತಿ ತಿಂಗಳು 1.1 ಲಕ್ಷ ಕೋಟಿ ರೂ. ಜಿಎಸ್‌ಟಿ ತೆರಿಗೆ ಸಂಗ್ರಹ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಅಜಯ ಭೂಷಣ ಪಾಂಡೆ ಸೂಚಿಸಿದ್ದಾರೆ.
ಮಂಗಳವಾರ ವಿವಿಧ ತೆರಿಗೆ ವಿಭಾಗಗಳ ಪ್ರಮುಖಾಧಿಕಾರಿಗಳ ಜತೆಗೆ ವೀಡಿಯೋ ಕಾನ್ಫರೆನ್ಸ್ ವೇಳೆ ಈ ಅಂಶ ಪ್ರಸ್ತಾವವಾಗಿದೆ. ಇದರ ಜತೆಗೆ ತೆರಿಗೆ ಸೋರಿಕೆಯಾಗುವುದರ ತಡೆಗೆ ಕೂಡ ಪ್ರಯತ್ನಿಸಬೇಕು ಎಂದಿದ್ದಾರೆ.
ಡಿಸೆಂಬರ್‌ನಿಂದ ಮಾರ್ಚ್ 2020ರ ವರೆಗೆ ಸರಿ ಸುಮಾರು 1.10 ಕೋಟಿ ರೂ ಸಂಗ್ರಹಿಸಬೇಕು ಎಂದು ಸೂಚಿಸಲಾಗಿದೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ 13.35 ಲಕ್ಷ ಕೋಟಿ ರೂ.ನೇರ ತೆರಿಗೆ ಸಂಗ್ರಹ ಮಾಡುವ ಬಗ್ಗೆ ಗುರಿ ಹಾಕಿಕೊಳ್ಳಲಾಗಿದೆ. ಈ ಪೈಕಿ ಅಕ್ಟೋಬರ್ ಅಂತ್ಯದವರೆಗೆ 6 ಲಕ್ಷ ಕೋಟಿ ಸಂಗ್ರಹಿಸಲಾಗಿದೆ.
ಆದ್ಯತೆ ಸಂಭವ: ಫೆ.1ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಸ್ಥಳೀಯ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಲ್ಯುಮಿನಿಯಂ, ತಾಮ್ರ, ಉಕ್ಕು, ಕೆಲ ರಾಸಾಯನಿಕ ವಸ್ತುಗಳು, ಪ್ಲಾಸ್ಟಿಕ್ ಕ್ಷೇತ್ರಗಳನ್ನು ಗುರಿಯಾಗಿರಿಸಿಕೊಂಡು ತೆರಿಗೆ ಪ್ರಮಾಣದಲ್ಲಿ ಇಳಿಕೆ ಮಾಡುವ ಸಾಧ್ಯತೆಗಳು ಇವೆ.
ಮತ್ತೂಂದು ಬೆಳವಣಿಗೆಯಲ್ಲಿ ಟಾಟಾ, ರಿಲಯನ್ಸ್, ಬಿರ್ಲಾ, ಮಹೀಂದ್ರಾ, ಅದಾನಿ, ಇನ್ಫೋಸಿಸ್ ಸೇರಿದಂತೆ 25 ಪ್ರಮುಖ ಉದ್ಯಮ ಸಂಸ್ಥೆಗಳ ಜತೆಗೆ ಹೂಡಿಕೆ ಪ್ರಮಾಣ ಹೆಚ್ಚು ಮಾಡುವ ಬಗ್ಗೆ ಕೇಂದ್ರ ಸರಕಾರ ಸಮಾಲೋಚನೆ ನಡೆಸಿದೆ. ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ನೇತೃತ್ವದಲ್ಲಿ ಈ ಮಾತುಕತೆ ನಡೆದಿದೆ.