ರಾಯಚೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಖಾಡಕ್ಕಿಳಿದಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಜನಾರ್ಶೀವಾದ ಯಾತ್ರೆಯ 3ನೇ ದಿನವಾದ ಸೋಮವಾರ ರಾಯಚೂರು, ಶಹಾಪೂರದಲ್ಲಿ ರೋಡ್ ಶೋ ನಡೆಸಿದರು. ಅಲ್ಲದೇ ಗಂಜ್ ಸರ್ಕಲ್ ನಲ್ಲಿರುವ ಸಂಶಾಲಂ ದರ್ಗಾಕ್ಕೆ ಭೇಟಿ ನೀಡಿದರು.
ಡಾಬಾದಲ್ಲಿ ಮಿರ್ಚಿ ಬಜ್ಜಿ ತಿಂದ ರಾಹುಲ್:
ರೋಡ್ ಶೋ ಭಾಷಣದ ಬಳಿಕ ರಾಯಚೂರಿನ ಕಲ್ಮಲಾದ ರಸ್ತೆ ಸಮೀಪ ಇದ್ದ ಡಾಬಾವೊಂದಕ್ಕೆ ಭೇಟಿ ನೀಡಿ ಮಿರ್ಚಿ ಬಜ್ಜಿ, ಮಂಡಕ್ಕಿಯನ್ನು ಸವಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ, ಸಂಸದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಸಾಥ್ ನೀಡಿದ್ದರು.
ಹೋಟೆಲ್ ಮಾಲಕಿ ರಾಹುಲ್ ಗಾಂಧಿಗೆ ಮಿರ್ಚಿ ಬಜ್ಜಿ, ಮಂಡಕ್ಕಿ ಹಾಗೂ ಚಾ ನೀಡಿದ್ದರು. ಈ ಸಂದರ್ಭದಲ್ಲಿ ದಿನವೊಂದಕ್ಕೆ ಎಷ್ಟು ವ್ಯಾಪಾರ ಮಾಡುತ್ತೀರಿ ಎಂದು ರಾಹುಲ್ ವಿಚಾರಿಸಿದ್ದರು.
ಅದಕ್ಕೆ ಮಾಲಕಿ 2 ಸಾವಿರ ರೂಪಾಯಿ ಎಂದು ಉತ್ತರಿಸಿದ್ದರು, ತದನಂತರ ತಮ್ಮ ಕಿಸೆಯಿಂದ 2 ಸಾವಿರ ನೋಟನ್ನು ನೀಡಿದ್ದರು. ಆದರೆ ಮಾಲಕಿ ಹಣ ಬೇಡ ಎಂದು ಕೈಮುಗಿದು ಕೃತಜ್ಞತೆ ಸೂಚಿಸಿದ್ದರು. ಏತನ್ಮಧ್ಯೆ ಸಿಎಂ ಸಿದ್ದರಾಮಯ್ಯ ಕೂಡಾ ಕುಶಲೋಪರಿ ನಡೆಸಿದ್ದರು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಕೋಡ ಕುರಿತು ನೀಡಿದ ಹೇಳಿಕೆಗೆ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪಕೋಡ ವಿಚಾರದಲ್ಲಿ ಟ್ವೀಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಾಕ್ಸಮರ ನಡೆದಿತ್ತು. ಇದೀಗ ರಾಹುಲ್ ಗಾಂಧಿ ಡಾಬಾಕ್ಕೆ ಭೇಟಿ ನೀಡಿ ಮಿರ್ಚಿ ಬಜ್ಜಿ ಸವಿಯುವ ಮೂಲಕ ತಿರುಗೇಟು ನೀಡಿದ್ದಾರೆ.