Advertisement

ಅಮೆರಿಕಾ ವಿಶ್ವವಿದ್ಯಾನಿಲಯಗಳಲ್ಲಿ ಚೀನಾ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಇಳಿಕೆ

08:33 AM Sep 24, 2019 | Team Udayavani |

ಅಮೆರಿಕಾ ಮತ್ತು ಚೀನಾ ದೇಶಗಳ ನಡುವೆ ವ್ಯಾಪಾರ ಸಮರ ಜೋರಾಗಿರುವಂತೆ ಅಮೆರಿಕಾದ ವಿಶ್ವವಿದ್ಯಾನಿಲಯಗಳಲ್ಲಿ ಚೀನಾ ದೇಶದ ವಿದ್ಯಾರ್ಥಿಗಳ ದಾಖಲಾತಿಯಲ್ಲೂ ಸಹ ಭಾರೀ ಇಳಿಕೆ ಕಂಡುಬಂದಿದೆ.

Advertisement

ಅಮೆರಿಕಾದ ಬಹಳಷ್ಟು ವಿಶ್ವವಿದ್ಯಾನಿಲಯಗಳಲ್ಲಿ ಚೀನಾ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಐದನೇ ಒಂದರಷ್ಟು ಇಳಿಕೆ ಕಂಡುಬಂದಿರುವುದು ಕಳವಳಕಾರಿ ಅಂಶ ಎನ್ನುವುದು ಅಮೆರಿಕಾ ಶಿಕ್ಷಣ ರಂಗದ ಪ್ರಮುಖರ ಅಭಿಪ್ರಾಯವಾಗಿದೆ. ಇನ್ನು ಚೀನಾ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಉಂಟಾಗಿರುವ ಕೊರತೆಯನ್ನು ನೀಗಿಸಲು ಬಹಳಷ್ಟು ವಿಶ್ವವಿದ್ಯಾನಿಲಯಗಳು ಪ್ರಪಂಚದ ಬೇರೆ ರಾಷ್ಟ್ರಗಳ ವಿದ್ಯಾರ್ಥಿಗಳತ್ತ ತಮ್ಮ ಗಮನವನ್ನು ಹರಿಸಲು ಪ್ರಾರಂಭಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಎರಡೂ ದೇಶಗಳ ನಡುವೆ ಉದ್ಭವಿಸಿರುವ ರಾಜತಾಂತ್ರಿಕ ಬಿಕ್ಕಟ್ಟು, ವಿಸಾ ನೀಡುವಿಕೆಯಲ್ಲಿನ ಸಮಸ್ಯೆಗಳು ಮತ್ತು ಚೀನಾದಲ್ಲೇ ಉನ್ನತ ಶಿಕ್ಷಣ ಮಟ್ಟದಲ್ಲಿ ಗಮನಾರ್ಹ ಸುಧಾರಣೆ ಉಂಟಾಗಿರುವುದು ಮೊದಲಾದ ಕಾರಣಗಳಿಂದ ಅಮೆರಿಕಾದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಚೀನಾ ವಿದ್ಯಾರ್ಥಿಗಳು ದಾಖಲುಗೊಳ್ಳಲು ಮನಸ್ಸು ಮಾಡುತ್ತಿಲ್ಲ ಎನ್ನುವ ಅಂಶಗಳೂ ಸಹ ಬಯಲಾಗಿದೆ.

ಮ್ಯಾಸಚ್ಯುಸೆಟ್ಸ್ ನಲ್ಲಿರುವ ಬೆಂಟ್ಲಿ ವಿಶ್ವವಿದ್ಯಾನಿಲಯದಲ್ಲಿ ಈ ಬಾರಿ ಚೀನಾ ದೇಶದ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ 70ಕ್ಕೆ ಇಳಿದಿದೆ. ಕಳೆದ ವರ್ಷ 110 ವಿದ್ಯಾರ್ಥಿಗಳು ಈ ವಿಶ್ವವಿದ್ಯಾನಿಲಯದಲ್ಲಿ ದಾಖಲಾತಿಯನ್ನು ಪಡೆದುಕೊಂಡಿದ್ದರು. ಹೀಗಾಗಿ ಈ ವಿಶ್ವವಿದ್ಯಾನಿಲಯದಲ್ಲಿ ಕೆಲವೊಂದು ಸ್ನಾತಕೋತ್ತರ ಶಿಕ್ಷಣ ಕೋರ್ಸ್ ಗಳನ್ನು ಉಳಿಸಿಕೊಳ್ಳಲು ಆಡಳಿತ ಮಂಡಳಿ ಹರಸಾಹಸಪಡುವಂತಾಗಿದೆ.

ಇನ್ನು ವೆರ್ಮೊಂಟ್ ವಿಶ್ವವಿದ್ಯಾನಿಲಯದಲ್ಲಿ ಚೀನಾ ವಿದ್ಯಾರ್ಥಿಗಳ ದಾಖಲಾತಿಯಲ್ಲಿ 23% ಇಳಿಕೆಯಾಗಿದ್ದರೆ, ನೆಬ್ರಾಸ್ಕಾ-ಲಿಂಕಲ್ನ್ ವಿಶ್ವವಿದ್ಯಾನಿಲಯದಲ್ಲಿ ಚೀನಾ ವಿದ್ಯಾರ್ಥಿಗಳ ದಾಖಲಾತಿಯಲ್ಲಿ 20% ಕುಸಿತವಾಗಿದೆ.

Advertisement

ಜಗತ್ತಿನ ಬೇರೆಲ್ಲಾ ದೇಶಗಳಿಗೆ ಹೋಲಿಸಿದರೆ ಚೀನಾ ದೇಶವು ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಅಮೆರಿಕಾ ದೇಶಕ್ಕೆ ಶಿಕ್ಷಣದ ಉದ್ದೇಶಕ್ಕಾಗಿ ಕಳುಹಿಸುತ್ತಿದೆ. ಚೀನಾ ದೇಶದ 363,000 ವಿದ್ಯಾರ್ಥಿಗಳು ವಿಶ್ವದ ಒಟ್ಟು ವಿದ್ಯಾರ್ಥಿಗಳ ಮೂರನೇ ಒಂದು ಭಾಗವನ್ನು ಅಮೆರಿಕಾದ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿನಿಧಿಸುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರಮಾಣ ಸಮವಾಗಿದೆ.

ಅಮೆರಿಕಾದಲ್ಲಿ ಹೆಚ್ಚುತ್ತಿರುವ ಗನ್ ಹಿಂಸೆ ಮತ್ತು ಕಠಿಣ ವಲಸೆ ನೀತಿಗಳ ಕುರಿತಾಗಿ ಚೀನಾ ದೇಶದ ವಿದ್ಯಾರ್ಥಿಗಳ ಹೆತ್ತವರು ಕಳವಳ ಹೊಂದಿರುವುದೂ ಸಹ ಅಮೆರಿಕಾದಲ್ಲಿ ಚೀನಾ ವಿದ್ಯಾರ್ಥಿಗಳ ಇಳಿಕೆಗೆ ಕಾರಣ ಎನ್ನಲಾಗುತ್ತಿದೆ.

ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಸಂಘವೊಂದು ನಡೆಸಿದ ಸಮೀಕ್ಷೆಯ ಪ್ರಕಾರ ವೀಸಾ ಪಡೆಯುವಲ್ಲಿನ ತೊಡಕುಗಳು ಹಾಗೂ ಅಮೆರಿಕಾದಲ್ಲಿನ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳೇ ಚೀನಾ ವಿದ್ಯಾರ್ಥಿಗಳ ದಾಖಲಾತಿ ಕುಸಿತಕ್ಕೆ ಪ್ರಮುಖ ಕಾರಣ ಎಂದು ಕಂಡುಕೊಳ್ಳಲಾಗಿದೆ.

ಇನ್ನು ಚೀನಾದ ವಿದ್ಯಾರ್ಥಿಗಳು ಅಮೆರಿಕಾದಲ್ಲಿ ಶಿಕ್ಷಣವನ್ನು ಪಡೆದು ಅಮೆರಿಕಾದ ಯುವಕರ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬ ಭಾವನೆಯೊಂದು ಟ್ರಂಪ್ ಸರಕಾರಕ್ಕೆ ಇರುವುದೂ ಸಹ ಈ ಬೆಳವಣಿಗೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next