ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ ಸಿಖ್ಖ್ ಸಮುದಾಯ ಭಾರತದಲ್ಲಿ 100 ಅರಣ್ಯಗಳನ್ನು ನಿರ್ಮಿಸಲು ಮುಂದಾಗಿದೆ. ಜಾಗತಿಕ ಹವಾಮಾನ ವೈಪರಿತ್ಯಗಳು ಹೆಚ್ಚುತ್ತಿರುವ ಈ ಸಂದರ್ಭ ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಭಾರತದ ಪರವಾಗಿ ಸಿಖ್ಖ್ ಸಮುದಾಯದವರು ಕೆಲಸ ಮಾಡಲಿದ್ದಾರೆ.
ಇಕೋ ಸಿಖ್ಖ್ ಸದಸ್ಯರು, ವಾಷಿಂಗ್ಟನ್‌ನಲ್ಲಿ ಜರಗಿದ ತಮ್ಮ 7ನೇ ಗಾಲಾ ಸಂದರ್ಭದಲ್ಲಿ, ಪಂಜಾಬ್ ಮತ್ತು ಭಾರತದ ಇತರೆಡೆ ‘ಗುರುನಾನಕ್ ಪವಿತ್ರ ಕಾಡು’ಗಳನ್ನು ನಿರ್ಮಿಸುವ ಮೂಲಕ ಹವಾಮಾನ ಬದಲಾವಣೆಯನ್ನು ಎದುರಿಸಲು ನಾವು ಈ ಕೊಡುಗೆ ನೀಡುತ್ತೇವೆ ಎಂದು ವಾಗ್ಧಾನ ಮಾಡಿದ್ದಾರೆ.
ಗುರುನಾನಕ್ ಅವರ 550ನೇ ಜನ್ಮ ವಾರ್ಷಿಕೋತ್ಸವದ ಗೌರವಾರ್ಥ 100 ಗುರುನಾನಕ್ ಪವಿತ್ರ ಕಾಡುಗಳನ್ನು ನೆಡುವ ಮೂಲಕ ‘ಇಕೋ ಸಿಖ್ಖ್’ ಸಂಸ್ಥೆ ಒಂದು ಮಿಲಿಯನ್ ಮರಗಳನ್ನು ನೆಡುವ ಗುರಿಯನ್ನು ತಲುಪಲು ಇದು ಸಹಾಯ ಮಾಡಲಿದೆ. ಈಗಾಗಲೇ ಈ ಸಂಸ್ಥೆ 120 ಮಿನಿ ಫಾರೆಸ್ಟ್‌ಗಳನ್ನು ನಿರ್ಮಿಸಿದ್ದು, ಅದರಲ್ಲಿ ತಲಾ 550 ಮರಗಳಿವೆ. ಸಿಕ್ಖರು ಅತೀ ಹೆಚ್ಚು ನೆಲೆಸಿರುವ ಪಂಜಾಬ್, ಹರ್ಯಾಣ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ದಿಲ್ಲಿ, ಜಮ್ಮು ಕಾಶ್ಮೀರ ಮತ್ತು ಚಂಢೀಗಡ ಈ ಕಾರ್ಯವನ್ನು ಮಾಡಿದೆ.
ಇದರ ಮುಂದುವರಿದ ಭಾಗವಾಗಿ ಈ ವರ್ಷ 100 ಅರಣ್ಯಗಳನ್ನು ನಿರ್ಮಿಸುವ ಗುರಿ ಇಟ್ಟುಕೊಂಡಿದೆ. ಜಗತ್ತು ಈಗಾಗಲೇ ಪರಿಸರ ಮಾಲಿನ್ಯ ಮತ್ತು ಜಾಗತಿಕ ತಾಪಮಾನದ ಬೇಗೆಗೆ ತತ್ತರಿಸುತ್ತಿದ್ದು, ಇದಕ್ಕಾಗಿ ನಾವು ಕಾಡುಗಳನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೆಡಬೇಕಾಗಿದೆ. ಈಗಿನ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಮ್ಮ ಮಕ್ಕಳಿಗೆ ಉಸಿರಾಡಲು ಗಾಳಿಯ ಸಮಸ್ಯೆಯಾಗಲಿದೆ. ಈ ಕಾರಣಕ್ಕೆ ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಾಗತಿಕ ಇಕೋ ಸಿಖ್ಖ್ ಸಂಸ್ಥೆ ಅಧ್ಯಕ್ಷ ರಜ್ವಂತ್ ಸಿಂಗ್ ಹೇಳಿದ್ದಾರೆ.