ಗಯಾ : ಕೋಲ್ಕತಾದ ಅಮೆರಿಕನ್ ಸೆಂಟರ್ ಮೇಲೆ 2002ರಲ್ಲಿ ದಾಳಿ ನಡೆಸಿ ಆರು ಪೊಲೀಸರನ್ನು ಕೊಂದು ಇತರ 14 ಮಂದಿಯನ್ನು ಗಾಯಗೊಳಿಸಿದ್ದ ಪ್ರಕರಣದ ಶಂಕಿತನನ್ನು ಬಿಹಾರದ ಗಯಾ ಜಿಲ್ಲೆಯಲ್ಲಿ ಬಂಧಿಸಿರುವುದಾಗಿ ಪೊಲೀಸರು ಇಂದು ತಿಳಿಸಿದ್ದಾರೆ.
ಶಂಕಿತ ಮೊಹಮ್ಮದ್ ಸರ್ವಾರ್ ಎಂಬಾತನನ್ನು ಇಲ್ಲಿನ ನೀಮ್‌ಚಾಕ್ ಬಥಾನಿ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದಿಂದ ಬಂಧಿಸಲಾಯಿತು. ಈ ಕಾರ್ಯಾಚರಣೆಯನ್ನು ಗುಜರಾತ್ ಉಗ್ರ ನಿಗ್ರಹ ದಳ, ಜಾರ್ಖಂಡ್ ಪೊಲೀಸ್ ಮತ್ತು ಬಿಹಾರ್ ಪೊಲೀಸ್ ತಂಡದವರು ಜತೆಯಾಗಿ ನಡೆಸಿದ್ದರು ಎಂದು ಮಗಧ ದ ಡಿಐಜಿ ಸೌರಭ್ ಕುಮಾರ್ ತಿಳಿಸಿದ್ದಾರೆ.
ಶಂಕಿತ ಆರೋಪಿ ಮೊಹಮ್ಮದ್ ಸರ್ವಾರ್ 2002ರಲ್ಲಿ ಹಜಾರಿಬಾಗ್‌ನಲ್ಲಿ ಜಾರ್ಖಂಡ್ ಪೊಲೀಸ್ ಹಾಗೂ ಸಿಬಿಐ ತಂಡದ ಮೇಲೆ ಕೂಡ ದಾಳಿ ನಡೆಸಿದ್ದ ಎನ್ನಲಾಗಿದೆ. ಈ ದಾಳಿಯ ವೇಳೆ ಇಬ್ಬರು ದಾಳಿಕೋರರನ್ನು ಕೊಲ್ಲಲಾಗಿತ್ತು; ಆದರೆ ಸರ್ವಾರ್ ಮಾತ್ರ ಎಸ್ಕೇಪ್ ಆಗಿದ್ದ.
ಬಂಧಿತ ಸರ್ವಾರ್‌ನನ್ನು ಜಾರ್ಖಂಡ್‌ನ ಹಜಾರಿಬಾಗ್ ಗೆ ಒಯ್ಯಲಾಗುವುದು ಎಂದು ಡಿಐಜಿ ತಿಳಿಸಿದ್ದಾರೆ.
2002ರ ಜನವರಿ 22ರಂದು ಕೋಲ್ಕತದ ಜವಾಹರಲಾಲ್ ನೆಹರೂ ರಸ್ತೆಯಲ್ಲಿರುವ ಅಮೆರಿಕನ್ ಸೆಂಟರ್ ಹೊರಗೆ ಕಾವಲಿದ್ದ ಪೊಲೀಸರ ಮೇಲೆ ಮೋಟರ್‌ಸೈಕಲ್ ಮೇಲೆ ಬಂದಿದ್ದ ಇಬ್ಬರು ಎಕೆ 47 ರೈಫಲ್‌ನಿಂದ ದಾಳಿ ನಡೆಸಿ ಆರು ಪೊಲೀಸರನ್ನು ಕೊಂದು ಇತರ 14 ಮಂದಿಯನ್ನು ಗಾಯಗೊಳಿಸಿದ್ದರು.