Advertisement

ಅಮೆರಿಕ, ಚೀನ ಶಸ್ತ್ರಾಸ್ತ್ರ ಕದನ; ರಷ್ಯಾಕ್ಕೆ ಸಹಾಯ ಮಾಡಿದರೆ ಎಚ್ಚರ ಎಂದ ದೊಡ್ಡಣ್ಣ

01:36 AM Mar 15, 2022 | Team Udayavani |

ಮಾಸ್ಕೊ/ಕೀವ್‌/ಬೀಜಿಂಗ್‌: ವಿಶ್ವದ ಎರಡನೇ ಅತೀ ದೊಡ್ಡ ಸೇನಾ ಶಕ್ತಿಯೆಂದೇ ಖ್ಯಾತಿ ಪಡೆದಿರುವ ರಷ್ಯಾ ಈಗ ನೆರೆಯ ರಾಷ್ಟ್ರವಾದ ಚೀನ ಬಳಿ ಶಸ್ತ್ರಾಸ್ತ್ರ ನೆರವು ಕೋರಿತ್ತೆಂದು ಅಮೆರಿಕ ಮಾಡಿರುವ ಆರೋಪ ವನ್ನು ಚೀನ ಅಲ್ಲಗಳೆದಿದೆ. ಜತೆಗೆ ತನ್ನ ವಿರುದ್ಧ ಅಮೆರಿಕ, ವ್ಯವಸ್ಥಿತವಾದ ಅಪಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿದೆ.
ಸೋಮವಾರದಂದು ವಾಷಿಂಗ್ಟನ್‌ನಲ್ಲಿ ಮಾಧ್ಯಮ ಗಳ ಜತೆಗೆ ಮಾತನಾಡಿದ ಅಮೆರಿಕದ ಅಧಿಕಾರಿಗಳು, ರಷ್ಯಾವು, ಚೀನದ ಬಳಿ ತನಗೆ ಶಸ್ತ್ರಾಸ್ತ್ರ ಸಹಾಯ ಮಾಡಬೇಕೆಂದು ಕೋರಿಕೆ ಸಲ್ಲಿಸಿದೆ ಎಂದು ತಿಳಿಸಿದ್ದಾರೆ. ಆದರೆ ಈ ಬೇಡಿಕೆಯನ್ನು ಈಗ ಚೀನ ಮುಂದಿಟ್ಟಿದ್ದಲ್ಲ. ಉಕ್ರೇನ್‌ ಮೇಲೆ ದಾಳಿ ನಡೆಸಿದ ಆರಂಭದ ದಿನಗಳಲ್ಲೇ ಈ ಬೇಡಿಕೆ ಇಡಲಾಗಿತ್ತು ಎಂದ ಅವರು ತಿಳಿಸಿದ್ದಾರೆ.

Advertisement

ಇದೇ ವೇಳೆ, ಚೀನಕ್ಕೆ ಎಚ್ಚರಿಕೆ ಸಂದೇಶವನ್ನೂ ರವಾನಿಸಿರುವ ಅಮೆರಿಕ, ರಷ್ಯಾಕ್ಕೇನಾದರೂ ಶಸ್ತ್ರಾಸ್ತ್ರ ಸೇರಿದಂತೆ ಯಾವುದೇ ರೀತಿಯ ಸಹಾಯ ಮಾಡಿದ್ದೇ ಆದಲ್ಲಿ, ತೀವ್ರ ಪ್ರಮಾಣದ ತೊಂದರೆಗಳನ್ನು ಅನು ಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಎಚ್ಚರಿಕೆ: ಈ ಕುರಿತಂತೆ ಮಾತನಾಡಿರುವ ಅಮೆರಿಕದ ರಕ್ಷಣ ಸಚಿವರ ಸಲಹೆಗಾರರಾದ ಜೇಕ್‌ ಸುಲ್ಲಿವನ್‌, ರಷ್ಯಾಕ್ಕೆ ಚೀನ ಮಾತ್ರವಲ್ಲ ಯಾವುದೇ ದೇಶ ಸಹಾಯ ಮಾಡಿದರೂ ಅಮೆರಿಕ ಅದನ್ನು ಸಹಿಸುವು ದಿಲ್ಲ. ರಷ್ಯಾ ಈ ಕೂಡಲೇ ಯುದ್ಧ ನಿಲ್ಲಿಸಬೇಕು ಎಂದು ಇಡೀ ವಿಶ್ವವೇ ಆಗ್ರಹಿಸುತ್ತಿರುವಾಗ ಅವರಿಗೆ ಸಹಾಯ ಮಾಡುವುದು ಸಲ್ಲ. ಹಾಗೊಂದು ವೇಳೆ, ಚೀನ ದೇಶ, ರಷ್ಯಾಕ್ಕೆ ಸಹಾಯ ಮಾಡಿದ್ದೇ ಆದರೆ ಅದು ಮುಂದೆ ಕಷ್ಟದ ಪರಿಸ್ಥಿತಿಯನ್ನು ಎದುರಿಸ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ರಷ್ಯಾ, ಚೀನ ನಿರಾಕರಣೆ: ಅಮೆರಿಕದ ಈ ಮಾತನ್ನು ಚೀನ ಹಾಗೂ ರಷ್ಯಾ ಎರಡೂ ನಿರಾಕರಿಸಿವೆ. ರಷ್ಯಾವಂತೂ “ನಾವು ಚೀನ ಬಳಿ ಶಸ್ತ್ರಾಸ್ತ್ರ ಕೇಳಿಲ್ಲ. ಸೇನಾ ಶಕ್ತಿಯ ವಿಚಾರದಲ್ಲಿ ನಾವು ಇಂದಿಗೂ ಬಲಿಷ್ಠ ರಾಗಿಯೇ ಇದ್ದೇವೆ’ ಎಂದು ಹೇಳಿದೆ.

ಅಮೆರಿಕ ಹೇಳಿಕೆಯ ಬಗ್ಗೆ ಚೀನದ ವಿದೇಶಾಂಗ ಇಲಾಖೆಯ ವಕ್ತಾರ ಝಾವೊ ಲಿಜಾಂಗ್‌ ಪ್ರತಿಕ್ರಿಯಿಸಿ, “ಚೀನ ಹಾಗೂ ರಷ್ಯಾ ವಿರುದ್ಧ ತಪ್ಪು ಸಂಗತಿಗಳನ್ನು ಇಡೀ ವಿಶ್ವಕ್ಕೆ ಅಮೆರಿಕ ಹರಡುತ್ತಿದೆ’ ಎಂದು ಹೇಳಿದ್ದಾರೆ. ಅಲ್ಲದೆ, ಪೂರ್ವ ಭಾಗದ ರಾಷ್ಟ್ರಗಳ ಮೇಲೆ ತನ್ನ ನಿಯಂತ್ರಣ ಹೇರುವ ಸಲುವಾಗಿ ಉಕ್ರೇನನ್ನು ರಷ್ಯಾ ವಿರುದ್ಧ ಎತ್ತಿಕಟ್ಟುತ್ತಾ ಬಂದ ನ್ಯಾಟೋ ರಾಷ್ಟ್ರಗಳು, ಆ ಎರಡೂ ರಾಷ್ಟ್ರಗಳ ಮಧ್ಯೆ ಸಮರ ನಡೆಯುವಂತೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Advertisement

ಇದನ್ನೂ ಓದಿ:ಹಿಜಾಬ್ ತೀರ್ಪು: ಶಿವಮೊಗ್ಗ,ಮಂಗಳೂರು,ಉಡುಪಿಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ

ರಷ್ಯಾ ಸೇನಾಧಿಕಾರಿ ಸಾವು
ಉಕ್ರೇನ್‌ನ ಮರಿಯೋಪೋಲ್‌ನಲ್ಲಿ ಯುದ್ಧದಲ್ಲಿ ನಿರತ ರಾಗಿದ್ದ ರಷ್ಯಾದ ಭೂಸೇನೆಯ ಗುಪ್ತಚರ ಇಲಾಖೆಯ ಮುಖ್ಯಸ್ಥ (ಜಿಆರ್‌ಯು) ಕ್ಯಾಪ್ಟನ್‌ ಅಲೆಕ್ಸಿ  ಅವರು ಉಕ್ರೇನ್‌ನ ದಾಳಿಗೆ ಮೃತಪಟ್ಟಿದ್ದಾರೆ. ರಷ್ಯಾ ಸೇನೆಯಲ್ಲಿ ಅತೀ ಪ್ರಮುಖ ಅಧಿಕಾರಿಗಳಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದ ಅಲೆಕ್ಸಿ, ಮರಿಯೋಪೋಲ್‌ನಲ್ಲಿ ಟ್ಯಾಂಕರ್‌ನಲ್ಲಿ ಸಾಗುತ್ತಿದ್ದಾಗ, ಉಕ್ರೇನ್‌ ಸೈನಿಕರು ಹಾರಿಸಿದ್ದ ರಾಕೆಟ್‌ ಬಂದು ಅಲೆಕ್ಸಿಯಿದ್ದ ಟ್ಯಾಂಕರ್‌ಗೆ ಬಂದು ಅಪ್ಪಳಿಸಿತು. ಆಗ, ಅಲೆಕ್ಸಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಉಕ್ರೇನ್‌ ಮೇಲೆ ದಾಳಿ ಆರಂಭಿ ಸಿದಾಗಿನಿಂದ ಇಲ್ಲಿಯವರೆಗೆ ರಷ್ಯಾ ತನ್ನ ಸೇನೆಯ 12 ಕಮಾಂಡರ್‌ಗಳನ್ನು ಕಳೆದುಕೊಂಡಿದೆ.

ತಾಯಿ, ಮಗು ಸಾವು
ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಆಕ್ರಮಣ ಅನೇಕ ಮನ ಮಿಡಿಯುವ ಕಥೆಗಳನ್ನು ಹುಟ್ಟು ಹಾಕುತ್ತಿದೆ. ಬುಧವಾರದಂದು ರಷ್ಯಾ ಮರಿಯುಪೋಲ್‌ನ ಹೆರಿಗೆ ಆಸ್ಪತ್ರೆ ಮೇಲೆ ಬಾಂಬ್‌ ದಾಳಿ ನಡೆಸಿತ್ತು. ಆ ವೇಳೆ ಅಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಗರ್ಭಿಣಿಯೊಬ್ಬರು ಗಂಭೀರ ಗಾಯಾಳುವಾಗಿದ್ದರು. ಅವರನ್ನು ತ‌ತ್‌ಕ್ಷಣ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸ ಲಾಗಿತ್ತು. ಆಕೆಯ ಫೋಟೋಗಳು ವೈರಲ್‌ ಆಗಿದ್ದವು. ಆದರೆ ಗರ್ಭಿಣಿಯ ಸೊಂಟದ ಮೂಳೆ ಸಂಪೂರ್ಣವಾಗಿ ಘಾಸಿಗೊಂಡಿದ್ದರಿಂದ ಸಿಜರಿಯನ್‌ ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರಗೆ ತೆಗೆಯಲಾಗಿದೆಯಾದರೂ ಮಗು ಬದುಕಿಲ್ಲ. ತನ್ನ ಮಗು ಬದುಕಿಲ್ಲ ಎಂದು ತಿಳಿದಾಕ್ಷಣ ತಾಯಿ, “ನನ್ನನ್ನೂ ಕೊಂದು ಬಿಡಿ’ ಎಂದು ಜೋರಾಗಿ ಕಿರುಚಿದಳು. ತೀವ್ರವಾಗಿ ಘಾಸಿಗೊಂಡಿದ್ದ ಆಕೆ ಕೆಲವು ಕ್ಷಣದಲ್ಲೇ ಉಸಿರು ನಿಲ್ಲಿಸಿದಳೆಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

ಹೆದರಿ ಓಡುತ್ತಿವೆ ಪ್ರಾಣಿಗಳು
ಯುದ್ಧಪೀಡಿತ ಉಕ್ರೇನ್‌ನಲ್ಲಿ ರಷ್ಯಾದ ದಾಳಿಯಿಂದ ತಪ್ಪಿಸಿಕೊಳ್ಳಲು ಬೇರೆ ರಾಷ್ಟ್ರಗಳಿಗೆ ತೆರಳುತ್ತಿದ್ದಾರೆ. ಆದರೆ ಅಲ್ಲಿನ ಮೃಗಾಲಯಗಳಲ್ಲಿರುವ ಪ್ರಾಣಿಗಳ ಕಷ್ಟ ಹೇಳತೀರದು. ಎಲ್ಲೆಡೆ ಬೀಳುತ್ತಿರುವ ಶೆಲ್‌, ರಾಕೆಟ್‌ಗಳ ಸದ್ದಿನಿಂದಾಗಿ ಪ್ರಾಣಿಗಳು ಹೆದರಿ ದಿಕ್ಕಾಪಾಲಾಗಿ ಓಡಲಾರಂಭಿಸಿವೆ. ಅವುಗಳನ್ನು ನಿರ್ವಹಣೆ ಮಾಡುತ್ತಿರುವವರು ದಿನದ 24 ಗಂಟೆಯೂ ಅವುಗಳ ಜತೆಯೇ ಇದ್ದು ನೋಡಿಕೊಳ್ಳಬೇಕಾಗಿರುವ ಪರಿಸ್ಥಿತಿ ಬಂದೊದಗಿದೆ. ಕೆಲವು ಮೃಗಾಲಯಗಳು ತಮ್ಮಲ್ಲಿರುವ ಪ್ರಾಣಿಗಳನ್ನು ಬೇರೆಡೆ ಸ್ಥಳಾಂತರ ಮಾಡಲೂ ಪ್ರಯತ್ನಿಸುತ್ತಿವೆ. ಇನ್ನೊಂದತ್ತ ಅವುಗಳಿಗೆ ಆಹಾರ ಒದಗಿಸುವುದೂ ಕಷ್ಟವಾಗಿದೆ.

ಸಮರಾಂಗಣದಲ್ಲಿ
– ಹೆಚ್ಚುವರಿ ಶಸ್ತ್ರಾಸ್ತ್ರಗಳನ್ನು ಒದಗಿಸುವಂತೆ ಚೀನಕ್ಕೆ ಮನವಿ ಸಲ್ಲಿಸಿದ ರಷ್ಯಾ: ಅಮೆರಿಕ ಹೇಳಿಕೆ.
-ರಷ್ಯಾ, ಉಕ್ರೇನ್‌ ನಡುವಿನ ಶಾಂತಿ ಮಾತುಕತೆ ಚಾಲ್ತಿಯಲ್ಲಿದ್ದಾಗಲೇ ಕೀವ್‌ ನಗರದ ಮೇಲೆ ರಷ್ಯಾದ ದಾಳಿ – 2 ಸಾವು.
-ಇತ್ತೀಚೆಗೆ ಮರಿಯುಪೋಲ್‌ನಲ್ಲಿರುವ ಮಕ್ಕಳ ಆಸ್ಪತ್ರೆಯ ಮೇಲೆ ಬಾಂಬ್‌ ದಾಳಿಯಾದಾಗ ಗಾಯಗೊಂಡಿದ್ದ ಗರ್ಭಿಣಿ ಮಹಿಳೆ ಮತ್ತುಆಕೆಯ ಮಗು ಸಾವು.
-ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ತೈಲದ ಪ್ರಮಾಣವನ್ನು ಹೆಚ್ಚಿಸಲು ಕೇಂದ್ರ ಸರಕಾರ ಚಿಂತನೆ.
ಮರಿಯುಪೋಲ್‌ನಲ್ಲಿ ಉಕ್ರೇನ್‌ ಸೇನೆ ನಡೆಸಿದ ದಾಳಿಗೆ ರಷ್ಯಾದ ಸೇನಾಧಿಕಾರಿ ಅಲೆಕ್ಸಿ ಸಾವು

Advertisement

Udayavani is now on Telegram. Click here to join our channel and stay updated with the latest news.

Next