Advertisement

“ಮಧು’ವನ ಕರೆದಿದೆ…ಅಮೆರಿಕ ಟೆಕ್ಕಿಯ ಘರ್‌ ವಾಪ್ಸಿ ಕತೆ

06:00 AM Jun 12, 2018 | |

ಸಿಟಿ ಮೋಹ ಬಿಟ್ಟು ಪರಿಸರವನ್ನು ಅಪ್ಪಿಕೊಂಡವರ ಸರಣಿಗಾಥೆ ಇದು. ಅಮೆರಿಕದಂಥ ಪ್ರತಿಷ್ಠಿತ ದೇಶಗಳಲ್ಲಿ ಟೆಕ್ಕಿಯಾಗಿ ದುಡಿದಿದ್ದ ವ್ಯಕ್ತಿಯೀಗ ರೈತರಿಗೆ ಕಣ್ಣಾಗಿದ್ದಾರೆ. ಹಳ್ಳಿ ಹಳ್ಳಿಗೆ ಹೋಗಿ ಸಾವಯವ ಜಾಗೃತಿ ಮೂಡಿಸಿ, ಐಟಿ ಗೆಳೆಯರ ಜೊತೆ ಸೇರಿ “ಆರ್ಗಾನಿಕ್‌ ಮಂಡ್ಯ’ ಆರಂಭಿಸಿದ್ದಾರೆ…

Advertisement

ನಮ್ಮೂರು ಮಂಡ್ಯ. ಸಾಫ್ಟ್ವೇರ್‌ ಎಂಜಿನಿಯರ್‌ ಆಗಿ ಯುಎಸ್‌ಎ, ಯುಕೆ, ಇಸ್ರೇಲ್‌, ಫಿಲಿಪ್ಪೀನ್ಸ್‌ನಲ್ಲೆಲ್ಲಾ ಕೆಲಸ ಮಾಡಿದ್ದೀನಿ. 2005ರಲ್ಲಿ ಸ್ನೇಹಿತರ ಜೊತೆ ಸೇರಿ ಕ್ಯಾಲಿಫೋರ್ನಿಯಾದಲ್ಲಿ ಸ್ವಂತ ಸಾಫ್ಟ್ವೇರ್‌ ಕಂಪನಿಯನ್ನೂ ತೆರೆದೆ. ಕಂಪನಿ ಕೆಲಸದ ನಿಮಿತ್ತ ಆಗಾಗ ಬೆಂಗಳೂರಿಗೆ ಬರುತ್ತಿದ್ದೆ. ಆಗ ಇಲ್ಲಿನ ಆಟೋ, ಕ್ಯಾಬ್‌ ಡ್ರೈವರ್‌ಗಳನ್ನು, ಹೋಟೆಲ್‌ ಸಪ್ಲೆ„ಯರ್‌ಗಳನ್ನು ಮಾತಾಡಿಸುತ್ತಿದ್ದೆ. ಅವರಲ್ಲಿ ಹೆಚ್ಚಿನವರು ನಮ್ಮ ಮಂಡ್ಯದವರೇ ಇದ್ದರು. ನಾನು ಅವರ ಜೊತೆ ಮಾತಿಗಿಳಿದಾಗ ಗೊತ್ತಾಗಿದ್ದೇನೆಂದರೆ, ಅವರೆಲ್ಲರೂ ರೈತರ ಮಕ್ಕಳು ಅಂತ. “ಸಾರ್‌, ಊರಲ್ಲಿ ಐದೆಕರೆ ಇದೆ/ ಮೂರು ಎಕರೆ ಇದೆ. ಆದ್ರೆ, ಕೃಷಿ ಮಾಡಿ ಬದುಕೋಕೆ ಆಗುತ್ತಾ? ಅದು ಗಿಟ್ಟಲ್ಲ’ ಅನ್ನುತ್ತಿದ್ದರು. ನನಗೆ ಆ ಮಾತುಗಳು ಬಹಳ ಬೇಸರವನ್ನುಂಟು ಮಾಡುತ್ತಿದ್ದವು. ಈ ರೀತಿ ಹಳ್ಳಿ ಬಿಟ್ಟು ಸಿಟಿಗೆ ಬರುವವರ ಸಂಖ್ಯೆ ಬಹಳ ದೊಡ್ಡದಿದೆ. ಹೇಗಾದರೂ ಮಾಡಿ ಅಂಥವರನ್ನು ಪುನಃ ಕೃಷಿಯತ್ತ ಕರೆದೊಯ್ಯಬೇಕು ಅನ್ನಿಸಿತು. 

  ಕ್ಯಾಲಿಫೋರ್ನಿಯಾದಲ್ಲಿ ಕುಳಿತುಕೊಂಡಿದ್ದರೆ ನನ್ನ ಉದ್ದೇಶ ಈಡೇರುವುದಿಲ್ಲ ಅಂತ ಕಂಪನಿಯನ್ನು ಗೆಳೆಯರಿಗೊಪ್ಪಿಸಿ ಮಂಡ್ಯಕ್ಕೆ ವಾಪಸ್ಸಾದೆ. ಊರಲ್ಲಿ ನಮ್ಮ ಜಮೀನು ಉಳುಮೆ ಮಾಡದೆ ಖಾಲಿ ಬಿದ್ದಿತ್ತು. ಅಲ್ಲಿಯೇ ಕೃಷಿ ಜೀವನ ಶುರುಮಾಡಿದೆ. ಊರವರೆಲ್ಲರೂ “ಸಾಫ್ಟ್ವೇರ್‌ ಬಿಟ್ಟು ಬಂದಿದ್ದಾನಂತೆ. ಇವನಿಗೆಲ್ಲೋ ಹುಚ್ಚಿರಬೇಕು’ ಅಂದುಕೊಂಡರು. ಆದರೆ, ನಾನಂತೂ ಸಾವಯವ ಕೃಷಿ ಮಾಡಿ ತೋರಿಸುತ್ತೇನೆ ಅಂತ ನಿರ್ಧರಿಸಿದ್ದೆ. ರೈತರ ಜೊತೆ ಬೆರೆತೆ, ಹಳ್ಳಿ ಹಳ್ಳಿಗೆ ಹೋಗಿ ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸಿದೆ.

ನನ್ನ ತೋಟ ಈಗ ಸಣ್ಣ ಕಾಡು
ನಮ್ಮ ಜಮೀನಿನಲ್ಲಿ ಈಗ ಹಣ್ಣು, ತರಕಾರಿ, ಸಿರಿಧಾನ್ಯ ಬೆಳೆಸಿದ್ದೇನೆ. ಒಂದು ಮಿನಿ ಕಾಡಿನಂತಿರುವ ತೋಟದಲ್ಲಿ ನವಿಲು ಸೇರಿದಂತೆ 50ಕ್ಕೂ ವಿವಿಧ ಬಗೆಯ ಪಕ್ಷಿಗಳು ಬರುತ್ತವೆ. ನಾಟಿ ಹಸುಗಳನ್ನೂ ಸಾಕಿದ್ದೇನೆ. ನೀವು ಯಾವ ಮಣ್ಣಲ್ಲಿ ಹುಟ್ಟುತ್ತೀರೋ, ಆ ಮಣ್ಣು  ನಿಮ್ಮನ್ನು ಸದಾ ಸೆಳೆಯುತ್ತಿರುತ್ತದೆ. ಎಷ್ಟೇ ದೂರ ಹೋದರೂ, ನಾವು ಯಾವತ್ತಿಗೂ ಮಣ್ಣಿನ ಮಕ್ಕಳೇ. ಆ ಸೆಳೆತದಿಂದ ಅಷ್ಟು ಸುಲಭದಲ್ಲಿ ಕಳಚಿಕೊಳ್ಳಲು ಸಾಧ್ಯವಿಲ್ಲ. ಹಾಗೆ ನಾನು, ಪತ್ನಿ ಹಾಗೂ ಒಬ್ಬ ಮಗಳ ಜೊತೆ ಹಸಿರಿನ ಮಧ್ಯೆ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದೇನೆ. 

ಆರ್ಗಾನಿಕ್‌ ಮಂಡ್ಯ
ಐಟಿ ಗೆಳೆಯರ ಜೊತೆ ಸೇರಿ, 2015ರಲ್ಲಿ “ಆರ್ಗಾನಿಕ್‌ ಮಂಡ್ಯ ಪ್ರೈ.ಲಿ.’ ಶುರುಮಾಡಿದೆ. ಜೊತೆಗೇ ಆರಂಭವಾಗಿದ್ದು, ಬೆಂಗಳೂರು- ಮೈಸೂರು ರಸ್ತೆಯಲ್ಲಿರುವ ಆರ್ಗಾನಿಕ್‌ ಸೂಪರ್‌ ಮಾರ್ಕೆಟ್‌ ಹಾಗೂ ಆರ್ಗಾನಿಕ್‌ ರೆಸ್ಟೋರೆಂಟ್‌. ಸಾವಯವ ಕೃಷಿಕರಿಂದ ಬೆಳೆಗಳನ್ನು ಖರೀದಿಸಿ ಗ್ರಾಹಕರಿಗೆ ತಲುಪಿಸುತ್ತೇವೆ. ರೈತರಿಗೆ ಸೂಕ್ತ ಬೆಲೆ ಸಿಗುವುದಲ್ಲದೆ, ಗ್ರಾಹಕರಿಗೆ ವಿಷಮುಕ್ತ ಆಹಾರ ನೀಡುತ್ತಿರುವ ತೃಪ್ತಿ ಇದೆ. 5-6 ಸಾವಿರ ಬಗೆಯ ದಿನೋಪಯೋಗಿ ಸಾವಯವ ಪದಾರ್ಥಗಳು ಸಿಗುತ್ತವೆ. ಮಂಡ್ಯ ಮತ್ತು ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌, ರಾಜರಾಜೇಶ್ವರಿ ನಗರ, ಕಸ್ತೂರಿ ನಗರ ಮತ್ತು ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಆರ್ಗಾನಿಕ್‌ ಮಂಡ್ಯ ಸೂಪರ್‌ ಮಾರ್ಕೆಟ್‌ಗಳಿವೆ.

Advertisement

ಇಲ್ಲಿ ಯಾರೂ ಬಾಸ್‌ಗಳು ಇರೋಲ್ಲ!
ನಾನು ಸಾಫ್ಟ್ವೇರ್‌ ವೃತ್ತಿಯನ್ನು ಬಹಳಷ್ಟು ಎಂಜಾಯ್‌ ಮಾಡಿದ್ದೇನೆ. ಅಂದುಕೊಂಡಿದ್ದೆಲ್ಲವನ್ನು ಅಲ್ಲಿಯೂ ಸಾಧಿಸಿದ್ದೇನೆ. ಆದರೆ, ಅದೊಂಥರಾ ಭ್ರಮಾಲೋಕ. ಜೀವನದಲ್ಲಿ ಎಲ್ಲವೂ ದುಡ್ಡಿನಿಂದಲೇ ಸಿಗುತ್ತದೆ ಎಂದು ನಂಬಿಕೊಂಡಿರುತ್ತೇವೆ. ನಮಗೆ ನಾವೇ ಬೇಲಿ ಹಾಕಿಕೊಂಡು, ಸೋಮ- ಶುಕ್ರವಾರದವರೆಗೆ ಒತ್ತಡದಿಂದಲೇ ದುಡಿಯುತ್ತೇವೆ. ಯಾರ್ಯಾರಧ್ದೋ ಕೈ ಕೆಳಗೆ ದುಡಿಯಬೇಕು. ಆದರೆ, ಕೃಷಿಯಲ್ಲಿ ಹಾಗಲ್ಲ. ಪರಿಸರಕ್ಕೆ, ಮನಸ್ಸಿಗೆ ಹತ್ತಿರವಾದ ದುಡಿಮೆ ಇದು. ಇಲ್ಲಿ ಯಾರೂ ಬಾಸ್‌ಗಳು ಇರೋದಿಲ್ಲ. ನಮಗೆ ನಾವೇ ಬಾಸ್‌!

ಮಧುಚಂದನ್‌
ನಿರೂಪಣೆ: ಪ್ರಿಯಾಂಕ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next