Advertisement
ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಭಾರತೀಯ ಪ್ರತಿಭೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿ, ಹುರಿದುಂಬಿಸಿದ ಪರಿ ಇದು. ಮಂಗಳನ ಅಂಗಳದಲ್ಲಿ ನಾಸಾದ ಪರ್ಸಿವಿಯರೆನ್ಸ್ ರೋವರನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಶ್ರಮಿಸಿದ ಡಾ| ಸ್ವಾತಿ ಮೋಹನ್ ಮತ್ತು ತಂಡವನ್ನು ವರ್ಚುವಲ್ ಸಂವಾದದಲ್ಲಿ ಅಭಿನಂದಿಸಿದ ಬೈಡೆನ್, ಅಮೆರಿಕದ ಆಯಕಟ್ಟಿನ ಹುದ್ದೆಗಳಲ್ಲಿ ಭಾರತೀಯರೇ ಇರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
“ನಾನು ಈಗಲೂ ಕನಸಿನಲ್ಲೇ ಇದ್ದೇನೆ. ನಾವು ಒಗ್ಗಟ್ಟಾಗಿ ಮಹಾನ್ ಗುರಿ ತಲುಪಿದಾಗ ನಮ್ಮ ಫಲಿತಾಂಶ ನೋಡಿ ಅಚ್ಚರಿಯಾಗುತ್ತಿದೆ’ ಎಂದು ಡಾ| ಸ್ವಾತಿ ಮೋಹನ್ ಟ್ವೀಟ್ ಮಾಡಿ, ಬೈಡೆನ್ ಜತೆಗಿನ ಸಂವಾದದ ವೀಡಿಯೋ ಹಂಚಿಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷರ ಮುಂದೆ ಬೆಂಗಳೂರು ಮೂಲದ ಸ್ವಾತಿ ತಮ್ಮ ಬಾಹ್ಯಾಕಾಶ ವಿಜ್ಞಾನ ಲೋಕ ಪಯಣದ ಕಥೆಯನ್ನೂ ಹೇಳಿಕೊಂಡಿದ್ದಾರೆ. “ಜನಪ್ರಿಯ ಟಿವಿ ಶೋ ಸ್ಟಾರ್ ಟ್ರೆಕ್ ವೀಕ್ಷಿಸುತ್ತ ಬಾಹ್ಯಾಕಾಶ ವಿಜ್ಞಾನದೆಡೆ ಕುತೂಹಲ ಬೆಳೆಯಿತು. ಅಂದು ವೀಕ್ಷಿಸಿದ ದೃಶ್ಯಗಳು ನನ್ನೊಳಗಿವೆ. ಪ್ರಸ್ತುತ ಸಹೋದ್ಯೋಗಿಗಳೊಂದಿಗೆ ಒಗ್ಗಟ್ಟಿನಲ್ಲಿ ಕೆಲಸ ಮಾಡುತ್ತ, ನಿತ್ಯ ಹೊಸತನ್ನು ಕಲಿಯುತ್ತಿದ್ದೇನೆ’ ಎಂದು ತಿಳಿಸಿದರು.
Related Articles
“ಭಾರತೀಯ ಮೂಲದ ಅಮೆರಿಕನ್ನರೇ ಇಲ್ಲಿ ಹೆಚ್ಚಿನ ಹುದ್ದೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ನೀವು (ಡಾ| ಸ್ವಾತಿ), ಉಪಾಧ್ಯಕ್ಷೆ (ಕಮಲಾ ಹ್ಯಾರಿಸ್), ನನ್ನ ಭಾಷಣ ರಚನೆಕಾರ ವಿನಯ್ ರೆಡ್ಡಿ… ನಾನು ಏನು ಹೇಳಲಿ! ನಿಮಗೆಲ್ಲ ತುಂಬು ಧನ್ಯವಾದಗಳು. ನೀವೆಲ್ಲ ನಿಜಕ್ಕೂ ಅಸಾಧಾರಣ ವ್ಯಕ್ತಿಗಳು’ ಎಂದು ಶ್ಲಾಘಿಸಿದರು.
Advertisement