Advertisement

ರಾಜನೀತಿ : ಅಮೆರಿಕ ಫ‌ಸ್ಟ್‌ ಅಥವಾ ಜಗತ್ತಿನ ದೊಡ್ಡಣ್ಣ?

09:15 AM Nov 09, 2020 | mahesh |

ಮುಕ್ತ ಜಗತ್ತಿಗೆ ಹೊಸ ನಾಯಕನೊಬ್ಬ ಸಿಕ್ಕಿದ್ದಾನೆ…!
ಸಿಎನ್‌ಎನ್‌ ಸುದ್ದಿಸಂಸ್ಥೆಯ ಒಂದು ಸಾಲಿನ ಒಕ್ಕಣೆ ಇದು. ಡೆಮಾಕ್ರೆಟಿಕ್‌ ಪಕ್ಷದ ಜೋ ಬೈಡೆನ್‌ ಗೆಲ್ಲುತ್ತಿದ್ದಂತೆ, ಅಮೆರಿಕದ ಮಾಧ್ಯಮಗಳೂ ಸಂಭ್ರಮಾಚರಣೆಯಲ್ಲೂ ತೊಡಗಿವೆ. ಎಲ್ಲೋ ಒಂದು ಕಡೆ ಹಳಿ ತಪ್ಪಿರುವ ಅಮೆರಿಕದ ಆರ್ಥಿಕತೆಯನ್ನು ಸರಿ ಮಾಡುವ, ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ಮುಲಾಮು ಹಚ್ಚುವ ಕೆಲಸದ ಹೊರೆ ಬೈಡೆನ್‌ ಮೇಲಿದೆ. ಇದರ ನಡುವೆಯೇ ಇಡೀ ಜಗತ್ತೇ ಹೊಸ ಬದಲಾವಣೆಯ ನಿರೀಕ್ಷೆ ಹೊತ್ತು ಬೈಡನ್‌ರತ್ತ ನೋಡುತ್ತಿದೆ.

Advertisement

ಅದೇನೋ ಗೊತ್ತಿಲ್ಲ, ಟ್ರಂಪ್‌ ಕಾಲಾವಧಿಯ ಇಡೀ ನಾಲ್ಕು ವರ್ಷ ಜಗತ್ತು ಬೇರೊಂದು ರೀತಿಯ ಭಾವನೆಗಳ ತೊಳಲಾಟದಲ್ಲಿತ್ತು. “ಅಮೆರಿಕ ಫ‌ಸ್ಟ್‌’ ಎಂಬ ಟ್ರಂಪ್‌ ಅವರ ಪ್ರೊಟೆಕ್ಷನಿಸಮ್‌ ನೀತಿ ಜಗತ್ತನ್ನು ಅಲುಗಾಡಿಸಿದ್ದೂ ಸುಳ್ಳಲ್ಲ. ಚೀನ ಜತೆಗೆ ವ್ಯಾಪಾರ ಕಿರಿಕ್‌, ಭಾರತದ ಜತೆಗಿನ ಸ್ನೇಹ+ಮುನಿಸು, ಭಾರತದ ಎಚ್‌1ಬಿ ವೀಸಾದಾರರಿಗೆ ಬಾಗಿಲು ಬಂದ್‌ ಮಾಡಿದ ಸಂಗತಿಗಳು ಎಲ್ಲೋ ಒಂದು ಕಡೆ ಇರಿಸುಮುರಿಸಿಗೂ ಕಾರಣವಾಗಿತ್ತು.

ಈ ಸಂಗತಿಗಳ ನಡುವೆಯೇ ಟ್ರಂಪ್‌ ಕೂಡ ಅಷ್ಟೇ ತಾನು ಜಗತ್ತಿನ ದೊಡ್ಡಣ್ಣನ ರೀತಿ ಬಿಂಬಿಸಿಕೊಳ್ಳಬೇಕು, ಇಡೀ ಜಗತ್ತನ್ನು ತನ್ನ ಮುಷ್ಠಿಯಲ್ಲಿ ಇರಿಸಿಕೊಳ್ಳಬೇಕು ಎಂದ ಮಹತ್ವಾಕಾಂಕ್ಷೆ ತೋರಿಸಿದವರೂ ಅಲ್ಲ. ತನ್ನ ದೇಶದವರಿಗೆ ಉದ್ಯೋಗ ಕೊಡ­ಬೇಕು, ಇಲ್ಲಿನ ಉದ್ಯೋಗ ಕಿತ್ತುಕೊಳ್ಳಲು ಬಿಡಬಾರದು, ವಿದೇಶಿಗರಿಂದಲೇ ಇಲ್ಲಿನವರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಚಿಂತನೆಯಲ್ಲಿದ್ದ ಟ್ರಂಪ್‌, ಈ ವಿಚಾರಕ್ಕಷ್ಟೇ ಹೆಚ್ಚು ಮಹತ್ವ ಕೊಟ್ಟರು. ಇದು ಭಾರತೀಯರು ಸೇರಿದಂತೆ ಅಮೆರಿಕನ್‌ ಡ್ರೀಮ್‌ ಹೊತ್ತವರಿಗೆ ನಿರಾಸೆಗೂ ಕಾರಣವಾಯಿತು.

ಇದಕ್ಕಿಂತ ಹೆಚ್ಚಾಗಿ ಟ್ರಂಪ್‌, ಯುದ್ದೋನ್ಮಾದ ಹೊತ್ತು ತಿರುಗಲಿಲ್ಲ. ಚೀನವನ್ನು ಅಲುಗಾಡಿಸಬೇಕು ಎಂದು ಪ್ರತಿಸ್ಪರ್ಧೆಗೆ ನಿಂತು, ಭಾರತದತ್ತ ನೆರವಿಗೆ ಮುಂದಾದರೂ, ಹಿಂದಿನ ಅಧ್ಯಕ್ಷರಂತೆ, ಇಡೀ ವಿಶ್ವದಗಲಕ್ಕೆ ತನ್ನ ಸೇನೆಯನ್ನು ಕಳುಹಿಸುವುದು, ಅಲ್ಲೊಂದು ಯುದ್ಧ ಮಾಡುವುದನ್ನು ಟ್ರಂಪ್‌ ಮಾಡಲಿಲ್ಲ. ಆದರೆ, ಇರಾನ್‌ ಜತೆ ಒಂದಷ್ಟು ಕಿರಿಕ್‌ ಇದ್ದದ್ದು ಮಾತ್ರ ಸತ್ಯ.

ಟ್ರಂಪ್‌ ಕಾಲದಲ್ಲಿ ಅಮೆರಿಕ ಹಿಂದೆಂದಿಗಿಂತಲೂ ಬೇರೆಯದೇ ರೀತಿಯಲ್ಲಿ ಬೆಳೆದಿದೆ. ಈಗ ಅಲ್ಲಿನ ಜನರಲ್ಲಿ ರಾಷ್ಟ್ರೀಯತೆ ಮೈಗೂಡುತ್ತಿದೆ. ಇದಕ್ಕೆ ಟ್ರಂಪ್‌ ಪ್ರೊಟೆಕ್ಷನಿಸಂ ನೀತಿಯೂ ಕಾರಣವಿರಬಹುದು. ಇದಕ್ಕೆ ವಿರುದ್ಧವಾಗಿ ಹೋಗುವ ಮನಸ್ಸು ಜೋ ಬೈಡೆನ್‌ಗಿದೆಯೇ? ಕಾದು ನೋಡಬೇಕು. ಇದ್ದಕ್ಕಿದ್ದಂತೆ ಅಮೆರಿಕವೇ ಮೊದಲು ಎಂಬ ಟ್ರಂಪ್‌ ನೀತಿಗೆ ವಿರುದ್ಧವಾಗಿ ಹೋಗುವ ದುಸ್ಸಾಹಸವನ್ನು ಬೈಡೆನ್‌ ಮಾಡಲಾರರು. ಸದ್ಯ ಬಂದಿರುವ ರಿಸಲ್ಟ್ ಪ್ರಕಾರ, ಅಮೆರಿಕ ಸಂಪೂರ್ಣವಾಗಿ ಟ್ರಂಪ್‌ ಅವರನ್ನು ಅವಗಣಿಸಿಲ್ಲ ಎಂಬ ಸತ್ಯ ಬೈಡೆನ್‌ಗೆ ಗೊತ್ತಿದೆ. ಅಲ್ಲದೆ, ಸೆನೆಟ್‌ನಲ್ಲಿನ ಬಹುಮತದ ಕೊರತೆಯೂ ಬೈಡನ್‌ಗೆ ಹೊಸ ವಿದೇಶಾಂಗ ನೀತಿ ಮಾಡಿಕೊಳ್ಳಲು ಅಡ್ಡಿಯಾಗುವ ಸಂಭವವೂ ಇದೆ.

Advertisement

ಆದರೆ ಟ್ರಂಪ್‌ ಅವರ ಅಮೆರಿಕ ಫ‌ಸ್ಟ್‌ ನೀತಿಗೆ ವಿರುದ್ಧವಾಗಿ ಎನ್ನುವುದಕ್ಕಿಂತ, ಪರ್ಯಾಯವಾಗಿ ಬೈಡೆನ್‌ ತಮ್ಮದೇ ಆದ ಹೊಸ ನೀತಿ ರೂಪಿಸಿಕೊಳ್ಳಬಹುದು. ಸದ್ಯ ಚುನಾವಣೆಯಲ್ಲಿ ತಮ್ಮ ಕೈಹಿಡಿದಿರುವ ಭಾರತೀಯರಿಗೆ ಟ್ರಂಪ್‌ ಹಾಕಿದ್ದ ತಡೆಗಳನ್ನು ತೆಗೆಯಬಹುದು. ಈಗಾಗಲೇ ಬಂದಿರುವ ಸುದ್ದಿಗಳಂತೆ ಬೈಡೆನ್‌ ಭಾರತದ 5 ಲಕ್ಷ ಮಂದಿಗೆ ಪೌರತ್ವ ಕೊಡುವ ಸಾಧ್ಯತೆ ಇದೆ. ಅಂದರೆ, ಆದ್ಯತೆ ಮೇರೆಗೆ ಎಚ್‌1ಬಿ ವೀಸಾದ ಸೌಲಭ್ಯ ನೀಡುವ ಮೂಲಕ ಬೈಡೆನ್‌, ಹೊಸ ಸ್ನೇಹ ಕೂಟ ರಚಿಸಿಕೊಳ್ಳುವತ್ತ ಹೆಜ್ಜೆ ಹಾಕಬಹುದು.

ಇವೆಲ್ಲದರ ಹೊರತಾಗಿ, ಬೈಡೆನ್‌ ಅವರ ಭಾರತ ನೀತಿ ಹೇಗಿರಬಹುದು ಎಂಬ ಯೋಚನೆಗಳೂ ಈಗಾಗಲೇ ನಮ್ಮವರ ತಲೆಯಲ್ಲಿ ನುಸುಳಿವೆ. ಅದು, ಧನಾತ್ಮಕವಾಗಿರುತ್ತದೆಯೋ ಅಥವಾ ನೇತ್ಯಾತ್ಮಕವಾಗಿರುತ್ತದೆಯೋ ಎಂಬ ಬಗ್ಗೆ ಚರ್ಚೆಯಗಳೂ ನಡೆಯುತ್ತಿವೆ. ಇದಕ್ಕೆ ಕಾರಣ, ಟ್ರಂಪ್‌ ಮತ್ತು ಪ್ರಧಾನಿ ಮೋದಿ ನಡುವೆ ಇದ್ದ ಸ್ನೇಹ. ಈ ಹಿಂದೆ ಅಮೆರಿಕ ಪ್ರವಾಸದ ವೇಳೆ “ಹೌಡಿ ಮೋದಿ’ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, “ಅಬ್‌ ಕೀ ಬಾರ್‌ ಟ್ರಂಪ್‌ ಸರ್ಕಾರ್‌’ ಎಂಬ ಘೋಷಣೆ ಮಾಡಿದ್ದರು. ಈ ಮೂಲಕ ಟ್ರಂಪ್‌ ಅವರನ್ನೇ ಎರಡನೇ ಅವಧಿಗೂ ಅನುಮೋದಿಸಿದ್ದರು. ಆದರೆ ಈಗ ಟ್ರಂಪ್‌ಗೆ ಬದಲಾಗಿ ಬೈಡೆನ್‌ ಆರಿಸಿಬಂದಿದ್ದಾರೆ. ಮೋದಿ ಮತ್ತು ಟ್ರಂಪ್‌ ನಡುವಿನ ಗಾಢ ಸ್ನೇಹದ ವಿಚಾರ ಬೈಡೆನ್‌ಗೆ ಗೊತ್ತಿಲ್ಲದೇ ಇರುವ ಸತ್ಯವೇನಲ್ಲ. ಜತೆಗೆ, ಭಾರತದಲ್ಲಿರುವುದು ಬಲಪಂಥೀಯ ಹಿನ್ನೆಲೆಯುಳ್ಳ ಬಿಜೆಪಿ ಸರಕಾರ. ಆದರೆ ಈಗ ಅಮೆರಿಕದಲ್ಲಿ ಸ್ಥಾಪಿತವಾಗುತ್ತಿರುವುದು ಸಮಾಜವಾದಿ ಹಿನ್ನೆಲೆಯುಳ್ಳ, ಒಂದಷ್ಟು ಎಡಪಂಥೀಯ ಧೋರಣೆಗಳನ್ನು ಪ್ರತಿಪಾದಿಸುವ ಡೆಮಾಕ್ರೆಟಿಕ್‌ ಸರಕಾರ. ಈ ಎರಡೂ ಸರಕಾರಗಳ ನಡುವೆ ಸಮನ್ವಯವಾಗುತ್ತದೆಯೇ ಎಂಬ ಪ್ರಶ್ನೆಗಳೂ ಎದ್ದಿವೆ.

ಇದಕ್ಕೆ ಉತ್ತರಗಳೂ ಸಿಕ್ಕಿವೆ. ಟ್ರಂಪ್‌ ಅವರ ಭಾರತೀಯರ ಒಲವು ಕೇವಲ ತೋರ್ಪಡಿಕೆಗೆ ಮಾತ್ರ ಇತ್ತು ಎಂಬ ಆರೋಪಗಳೂ ಇವೆ. ಇದಕ್ಕೆ ಕಾರಣ ಟ್ರಂಪ್‌ ಅವರ ಭಾರತದ ಕುರಿತ ವ್ಯಾಪಾರ ನೀತಿ ಹಾಗೂ ಚುನಾವಣ ಸಂದರ್ಭದಲ್ಲಿ ಭಾರತದ ಕುರಿತು ಅವರಾಡಿದ ಮಾತುಗಳು. ಆದರೆ, ಬೈಡೆನ್‌ ವಿಚಾರದಲ್ಲಿ ಈ ರೀತಿ ಆಗುವುದಿಲ್ಲ, ಬೈಡೆನ್‌ ಸಜ್ಜನ ಮತ್ತು ಪ್ರಬುದ್ಧ ರಾಜಕಾರಣಿ ಎಂದೇ ಹೆಸರುವಾಸಿಯಾಗಿದ್ದಾರೆ. ಒಬಾಮ ಅಧ್ಯಕ್ಷರಾಗಿದ್ದ ಕಾಲದಲ್ಲಿ ಭಾರತದ ಜತೆ ಅಣು ಒಪ್ಪಂದವೇರ್ಪಡಲು ಪ್ರಮುಖ ಕಾರಣ ಬೈಡೆನ್‌ ಅವರೇ ಕಾರಣ. ಜತೆಗೆ ಆಗಿನ ಅದೆಷ್ಟೇ ಒಪ್ಪಂದಗಳು ಏರ್ಪಡಲೂ ಬೈಡೆನ್‌ ಅವರ ಶ್ರಮವಿತ್ತು ಎಂದು ವಿದೇಶಿ ವ್ಯವಹಾರಗಳ ತಜ್ಞರು ಹೇಳುತ್ತಾರೆ. ಹೀಗಾಗಿ ಬೈಡೆನ್‌ ಬಂದಾಕ್ಷಣ ಭಾರತದ ಪಾಲಿಗೆ ಸಮಸ್ಯೆಯಾಗುತ್ತದೆ, ನೇತ್ಯಾತ್ಮಕ ಪರಿಣಾಮಗಳಾಗುತ್ತವೆ ಎಂದು ಭಾವಿಸಬೇಕಾಗಿಲ್ಲ ಎಂಬ ಮಾತುಗಳಿವೆ.

ಇದಕ್ಕೆ ಪೂರಕವಾಗಿ, ಭಾರತ ಸರಕಾರ, ಅಮೆರಿಕದ ಹೊಸ ಸರಕಾರದೊಂದಿಗೆ ಮಾತುಕತೆ ಮತ್ತು ಸಮನ್ವಯ ಸಾಧಿಸಿಕೊಳ್ಳಲು ಈಗಿನಿಂದಲೇ ತಯಾರಿ ನಡೆಸುತ್ತಿದೆ. ಹಿಂದಿನ ವಿದೇಶಾಂಗ ಕಾರ್ಯದರ್ಶಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್‌ ಡೆಮಾಕ್ರೆಟಿಕ್‌ ಹಲವಾರು ಸಂಸದರ ಜತೆ ಒಡನಾಟ ಹೊಂದಿದ್ದಾರೆ. ಮೂಲಗಳ ಪ್ರಕಾರ, ಈಗಾಗಲೇ ಕೇಂದ್ರ ಸರಕಾರ, ಒಂದು ಹಂತದ ಮಾತುಕತೆಯನ್ನೂ ಆರಂಭಿಸಿದೆ. ಅತ್ತ ಬೈಡೆನ್‌ ಕೂಡ ಪ್ರಚಾರದ ವೇಳೆಯಲ್ಲೇ ಭಾರತವನ್ನು ತಮ್ಮ ನಂಬುಗೆಯ ಮತ್ತು ವಿಶ್ವಾಸಾರ್ಹ ಪಾಲುದಾರ, ಸ್ನೇಹಿತ ಎಂದು ಹೇಳಿರುವುದು, ಭಾರತೀಯ ಮೂಲದ ಕಮಲಾ ಹ್ಯಾರೀಸ್‌ ಉಪಾಧ್ಯಕ್ಷೆಯಾಗುತ್ತಿರುವುದು ಭಾರತದ ಮಟ್ಟಿಗೆ ಸಮಸ್ಯೆಯಾಗಲಾರದು ಎನ್ನಲಾಗುತ್ತಿದೆ. ಇವೆಲ್ಲದರ ನಡುವೆ, ಬೈಡೆನ್‌ ಅವರಿಂದಾಗಿ ಟ್ರಂಪ್‌ ಅವಧಿಯಲ್ಲಿ ಕೆಲವು ಮುಸ್ಲಿಂ ದೇಶಗಳಿಗೆ ಹೇರಿರುವ ನಿಷೇಧ ತೆರವಾಗಬಹುದು. ಪಾಕಿಸ್ಥಾನಕ್ಕೂ ಹೊಸ ಸರಕಾರ ಕಿವಿಯಾಗಬಹುದು, ಚೀನ ಜತೆಗಿನ ಅಮೆರಿಕ ಸಂಬಂಧ ಸುಧಾರಿಸಬಹುದು, ರಷ್ಯಾ ಜತೆಗಿನ ಸಂಬಂಧ ಇನ್ನಷ್ಟು ಹದಗೆಡಬಹುದು, ಇರಾನ್‌, ಮಧ್ಯಪ್ರಾಚ್ಯಗಳ ಜತೆಗಿನ ಸಂಬಂಧವೂ ಉತ್ತಮವಾಗಬಹುದು, ಹವಾಮಾನ ಒಪ್ಪಂದ ಪುನಃಸ್ಥಾಪನೆಯಾಗಬಹುದು, ಯುರೋಪ್‌ ಜತೆಗಿನ ಸಂಬಂಧ ಇನ್ನಷ್ಟು ಗಟ್ಟಿಯಾಗಬಹುದು….

ಸೋಮಶೇಖರ ಸಿ. ಜೆ.

Advertisement

Udayavani is now on Telegram. Click here to join our channel and stay updated with the latest news.

Next