Advertisement

ಅಮೆರಿಕ ಫ‌ಲಿತಾಂಶ: ಮುಂದೇನು?

12:53 AM Nov 06, 2020 | mahesh |

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಮುಗಿಯುವ ಮುನ್ನವೇ ಹಾಲಿ ಅಧ್ಯಕ್ಷ ಟ್ರಂಪ್‌ ಕಾನೂನು ಸಮರದ ಕಹಳೆ ಊದಿದ್ದಾರೆ. ಈಗಾಗಲೇ ಮಿಚಿಗನ್‌, ಪೆನ್ಸಿಲ್ವೇನಿಯಾ ಮತ್ತು ಜಾರ್ಜಿಯಾದಲ್ಲಿ ರಿಪಬ್ಲಿಕನ್‌ ಪಕ್ಷ ಕೋರ್ಟ್‌ ಮೆಟ್ಟಿಲೇರಿದೆ. ಮೇಲ್‌ ಮೂಲಕ ಚಲಾವಣೆಯಾದ ಮತಗಳ ಎಣಿಕೆ ನಿಲ್ಲಿಸುವಂತೆ ಮನವಿಯನ್ನೂ ಮಾಡಲಾಗಿದೆ. ಕೋರ್ಟ್‌ನಲ್ಲಿ ಏನಾಗಬಹುದು? ಇದು ಫ‌ಲಿತಾಂಶದ ಮೇಲೆ ಪರಿಣಾಮ ಬೀರಬಹುದೇ ಎಂಬ ಮಾಹಿತಿ ಇಲ್ಲಿದೆ.

Advertisement

ಸುಪ್ರೀಂ ಕೋರ್ಟ್ ‌ಅಂಗಳದಲ್ಲಿ ಚೆಂಡು?
ಪ್ರಾಂತ್ಯಗಳ ಮಟ್ಟದಲ್ಲಿ ಕೋರ್ಟ್‌ ಮೆಟ್ಟಿಲೇರಿದ ಪ್ರಕರಣ ಗಳು, ಅನಂತರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರುತ್ತವೆ. 2000ದಲ್ಲಿ ಫ್ಲೋರಿಡಾದ ಫ‌ಲಿತಾಂಶ ಪ್ರಕಟವಾದಾಗಲೂ ಇದೇ ರೀತಿಯಾಗಿತ್ತು. ಆಗ ಮರು ಎಣಿಕೆಗೆ ಕೋರ್ಟ್‌ ತಡೆಯಾಜ್ಞೆ ತಂದ ಕಾರಣ ರಿಪಬ್ಲಿಕನ್‌ ಜಾರ್ಜ್‌ ಡಬ್ಲ್ಯು ಬುಷ್‌ ಅವರು 537 ಮತಗಳ ಅಂತರದಿಂದ ಡೆಮಾಕ್ರಾಟ್‌ನ ಗೋರ್‌ರನ್ನು ಸೋಲಿಸಿದ್ದರು. ಈ ಬಾರಿಯ ಬೆಳವಣಿಗೆಗಳು ಕೂಡ ಅಮೆರಿಕ ಚುನಾವಣೆಯ ಕ್ಲೈಮ್ಯಾಕ್ಸ್‌ ಅನ್ನು ನ್ಯಾಯಾಲಯವೇ ನಿರ್ಧರಿಸುತ್ತದೋ ಎಂಬ ಅನುಮಾನ ಮೂಡಿಸಿದೆ. ಈಗಾಗಲೇ ಟ್ರಂಪ್‌ ನಾಮನಿರ್ದೇಶಿತ ಆ್ಯಮಿ ಕೋನೆ ಬ್ಯಾರೆಟ್‌ ಅವರೇ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಇದು ಸುಪ್ರೀಂ ಕೋರ್ಟ್‌ನಲ್ಲಿ ಟ್ರಂಪ್‌ಗೆ ಪ್ಲಸ್‌ ಪಾಯಿಂಟ್‌ ಆಗುವ ಸಾಧ್ಯತೆಗಳಿವೆ. ವಿಸ್ಕಾನ್ಸಿನ್‌ನಲ್ಲಿ ಮೇಲ್‌ ಮೂಲಕ ಚಲಾವಣೆಯಾದ ಮತಗಳನ್ನು ಎಣಿಕೆ ಮಾಡಲು ಇರುವ ಕಾಲಾವಕಾಶವನ್ನು 6 ದಿನಗಳ ಕಾಲ ವಿಸ್ತರಿಸಬೇಕೆಂದು ಡೆಮಾಕ್ರಾಟ್‌ಗಳು ಕಳೆದ ವಾರ ಸುಪ್ರೀಂಗೆ ಮನವಿ ಮಾಡಿದ್ದರು. ಆದರೆ ಕೋರ್ಟ್‌ ಅದನ್ನು ಪುರಸ್ಕರಿಸಿರಲಿಲ್ಲ. ಆದರೆ, ಪೆನ್ಸಿಲ್ವೇನಿಯಾ ಮತ್ತು ನಾರ್ತ್‌ ಕೆರೊಲಿನಾದಲ್ಲಿ ಎಲೆಕ್ಷನ್‌ ದಿನದ ಬಳಿಕವೂ ಮತ ಎಣಿಕೆಗೆ ನ್ಯಾಯಾಲಯ ಅನುಮತಿ ನೀಡಿದೆ.

ತಜ್ಞರು ಏನೆನ್ನುತ್ತಾರೆ?
“ಚುನಾವಣೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಟ್ರಂಪ್‌ ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಕೋರ್ಟ್‌ಗೆ ಅಂತಹ ಪುರಾವೆ ಸಿಕ್ಕಿದರಷ್ಟೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವ ಸಾಧ್ಯತೆಯಿದೆ’ ಎಂದು ಚುನಾವಣ ಕಾನೂನು ತಜ್ಞ ನೆಡ್‌ ಫೋಲೆ ಹೇಳಿದ್ದಾರೆ. ಇನ್ನು ಟ್ರಂಪ್‌ ಆರೋಪಿಸಿರುವಂತೆ ಅಕ್ರಮ ನಡೆದಿಲ್ಲ. ಇದನ್ನು ಅವರದ್ದೇ ರಾಷ್ಟ್ರೀಯ ಭದ್ರತಾ ಅಧಿಕಾರಿಗಳೇ ಸ್ಪಷ್ಟಪಡಿಸಿರುವ ಕಾರಣ ಸಾಕ್ಷ್ಯವಿಲ್ಲದೇ ಕೋರ್ಟ್‌ನಲ್ಲಿ ಏನೂ ನಡೆಯುವುದಿಲ್ಲ ಎನ್ನುತ್ತಾರೆ ಸೈಮನ್‌ ಮಾರ್ಕ್‌Õ. ಒಂದು ವೇಳೆ ಬೈಡೆನ್‌ ಅವರು ಪೆನ್ಸಿಲ್ವೇನಿಯಾ ಸಹಾಯವಿಲ್ಲದೇ 270 ಎಲೆಕ್ಟೋರಲ್‌ ಮತಗ ಳನ್ನು ಪಡೆದಿದ್ದೇ ಆದಲ್ಲಿ, ಆ ಪ್ರಾಂತ್ಯದಲ್ಲಿ ಕಾನೂನು ಸಮರದ ಪ್ರಶ್ನೆಯೇ ಎದುರಾಗುವುದಿಲ್ಲ ಎಂದೂ ತಜ್ಞರು ಹೇಳಿದ್ದಾರೆ.

ಫ‌ಲಿತಾಂಶ ವಿಳಂಬ ಆಗುತ್ತಿರುವುದೇಕೆ?
ನಮ್ಮ ದೇಶದಲ್ಲಿ “ಇಂಥ ದಿನ ಮತ ಎಣಿಕೆ’ ಎಂದು ಘೋಷಿಸಿದರೆ ಮುಗಿಯಿತು, ಅಂದು ಸಂಜೆಯ ವೇಳೆಗೆ ಸಂಪೂರ್ಣ ಚಿತ್ರಣ ಹೊರಬಿದ್ದು, ರಾತ್ರಿಯೊಳಗೆ ಫ‌ಲಿತಾಂಶ ಘೋಷಣೆಯಾಗಿ ರುತ್ತದೆ. ಆದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನವೂ ಮುಗಿದಿದೆ, ರಿಸಲ್ಟ್ ದಿನವೂ ದಾಟಿ ಹೋಯಿತು. ಆದರೆ ಇನ್ನೂ ಏಕೆ ಪೂರ್ಣ ಪ್ರಮಾಣದಲ್ಲಿ ಫ‌ಲಿತಾಂಶ ಹೊರ ಬಿದ್ದಿಲ್ಲ. ಇಷ್ಟೊಂದು ವಿಳಂಬವಾಗಲು ಕಾರಣವೇನು ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಅದಕ್ಕೆ ಉತ್ತರ ಇಲ್ಲಿದೆ.

ಒಂದೊಂದು ಪ್ರಾಂತ್ಯಕ್ಕೆ ಒಂದೊಂದು ರೂಲ್‌: ಅಮೆರಿಕದಲ್ಲಿ ಪ್ರತಿಯೊಂದು ಪ್ರಾಂತ್ಯವೂ ಮತ ಎಣಿಕೆಗೆ ಸಂಬಂಧಿಸಿ ತಮ್ಮದೇ ಆದ ಪ್ರತ್ಯೇಕ ಕಾನೂನುಗಳನ್ನು ಹೊಂದಿವೆ. ಕೆಲವು ರಾಜ್ಯಗಳಲ್ಲಿ ಇಮೇಲ್‌ ಮೂಲಕ ಚಲಾವಣೆಯಾದ ಮತಗಳನ್ನು ಎಣಿಕೆ ದಿನದ ಮುನ್ನವೇ ಎಣಿಸಲಾಗುತ್ತದೆ. ಇನ್ನು ಕೆಲವೆಡೆ, ಫ‌ಲಿತಾಂಶದ ದಿನ ದಾಟಿದ ಬಳಿಕವೂ ಇಂಥ ಮತಗಳ ಎಣಿಕೆಗೆ ಅವಕಾಶವಿರುತ್ತದೆ.

Advertisement

ಎಲ್ಲೆಲ್ಲಿ ಹೇಗಿದೆ?: ಫ್ಲೋರಿಡಾದಲ್ಲಿ ಚುನಾವಣೆಗೂ 22 ದಿನಗಳ ಮುನ್ನವೇ ಮೇಲ್‌ ಮತಗಳ ಎಣಿಕೆ ನಡೆಯುತ್ತದೆ. ಮಿಚಿಗನ್‌, ಪೆನ್ಸಿಲ್ವೇನಿಯಾ ಮತ್ತು ವಿಸ್ಕನ್ಸಿನ್‌ಗಳಲ್ಲಿ ಎಣಿಕೆಯ ದಿನ ಮುಗಿದ ಬಳಿಕ ಮೇಲ್‌ ಮತಗಳ ಎಣಿಕೆ ನಡೆ ಯು ತ್ತದೆ. ಅರಿಜೋನಾದಲ್ಲಿ ಅ.7ರಂದೇ ಇಂಥ ಮತಗಳು ತಲುಪಿದ್ದು ಅ.20ರಿಂದಲೇ ಮತ ಎಣಿಕೆ ಆರಂಭ ವಾಗಿದೆ. ಓಹಾಯೋದಲ್ಲಿ ಅ.6ರಂದು ಮತಗಳ ಪ್ರೊಸೆಸಿಂಗ್‌ ಶುರುವಾಗಿದ್ದು, ನ.13ರ ವರೆಗೆ ಮತಗಳನ್ನು ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ.

ಮೇಲ್‌ ಮತಗಳಿಂದಾಗಿಯೂ ವಿಳಂಬ: ಈ ಬಾರಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಬಹುತೇಕ ಪ್ರಾಂತ್ಯಗಳು ಮತದಾರರಿಗೆ ಇಮೇಲ್‌ ಮೂಲಕವೇ ಹಕ್ಕು ಚಲಾಯಿಸುವಂತೆ ಕೋರಿಕೊಂಡಿ ದ್ದವು. ಅದರಂತೆ ಹೆಚ್ಚಿನ ಮತದಾರರು ಮೇಲ್‌ ಮೂಲಕ ಮತ ಚಲಾಯಿಸಿದ್ದಾರೆ. ಆದರೆ ಮತ ಪತ್ರಗಳ ಎಣಿಕೆಗೂ ಇಮೇಲ್‌ ಮೂಲಕ ಚಲಾವಣೆಯಾದ ಮತಗಳ ಎಣಿಕೆಗೂ ಬಹಳಷ್ಟು ವ್ಯತ್ಯಾಸವಿದೆ. ಮೇಲ್‌ ಮತಗಳ ಪರಿಶೀಲನೆ ಹಾಗೂ ಎಣಿಕೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಈ ಬಾರಿ ಹೆಚ್ಚು ಮತಗಳು ಈ ವಿಧಾನದಲ್ಲೇ ಚಲಾವಣೆಯಾಗಿರುವ ಕಾರಣ ಫ‌ಲಿತಾಂಶ ವಿಳಂಬವಾಗುತ್ತಿದೆ.

ಎಲೆಕ್ಟೋರಲ್‌ ಕಾಲೇಜು ಮತಗಳೇ ನಿರ್ಣಾಯಕ
ಅಮೆರಿಕದಲ್ಲಿ ಒಟ್ಟಾರೆ ಎಷ್ಟು ಜನರ ಮತಗಳು ಯಾರ ಪರ ಚಲಾವಣೆಯಾಗಿವೆ ಎನ್ನುವುದರ ಮೇಲೆ ಅಧ್ಯಕ್ಷರ ಆಯ್ಕೆ ನಡೆಯುವುದಿಲ್ಲ. ಎಲೆಕ್ಟೋರಲ್‌ ಕಾಲೇಜಿನ(ಎಲೆಕ್ಟರ್‌ಗಳು) 538 ಮತಗಳ ಪೈಕಿ ಯಾರಿಗೆ ಹೆಚ್ಚು ಮತ ಒಲಿಯುತ್ತದೋ ಅವರೇ ಅಧ್ಯಕ್ಷರಾಗುತ್ತಾರೆ. 2016ರಲ್ಲಿ ದೇಶಾದ್ಯಂತ ಅತೀ ಹೆಚ್ಚು ಮತಗಳನ್ನು (ಪಾಪ್ಯುಲರ್‌ ವೋಟ್‌) ಪಡೆದಿದ್ದು ಡೆಮಾಕ್ರಾಟ್‌ನ ಹಿಲರಿ ಕ್ಲಿಂಟನ್‌ ಅವರು. ಆದರೂ, ಅತೀ ಹೆಚ್ಚು (304) ಎಲೆಕ್ಟೋರಲ್‌ ಮತ ಪಡೆದ ಟ್ರಂಪ್‌ ಅವರೇ ಅಧ್ಯಕ್ಷರಾಗಿದ್ದು. ಈ ವರ್ಷ ಡಿ.14ರಂದು ಎಲೆಕ್ಟರ್‌ಗಳು ಸಭೆ ಸೇರಿ ಮತ ಚಲಾಯಿಸುತ್ತಾರೆ. ಕಾಂಗ್ರೆಸ್‌ನ ಎರಡೂ ಛೇಂಬರ್‌ಗಳು ಸೇರಿ ಜ.6ರಂದು ಮತ ಎಣಿಕೆ ನಡೆಸುತ್ತವೆ. ಸಾಮಾನ್ಯವಾಗಿ ಪ್ರತಿ ಪ್ರಾಂತ್ಯದ ಗವರ್ನರ್‌ಗಳು ತಮ್ಮ ಫ‌ಲಿತಾಂಶವನ್ನು ಪ್ರಮಾಣೀಕರಿಸಿ, ಅದರ ಮಾಹಿತಿಯನ್ನು ಕಾಂಗ್ರೆಸ್‌ಗೆ ನೀಡುತ್ತಾರೆ. ಒಂದು ವೇಳೆ ಕಾಂಗ್ರೆಸ್‌ನಲ್ಲೇ ಭಿನ್ನಮತ ಕಾಣಿಸಿಕೊಂಡರೆ ಆಗಲೂ ವಿವಾದವನ್ನು ಸುಪ್ರೀಂ ಕೋರ್ಟ್‌ ಬಗೆಹರಿಸಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next