Advertisement

ಸಿರಿಯಾ ಮೇಲೆ ಅಮೆರಿಕ ಬಾಂಬ್‌: 3ನೇ ಮಹಾ ಯುದ್ಧಕ್ಕೆ ನಾಂದಿ?

03:45 AM Apr 08, 2017 | Team Udayavani |

ಟ್ರಿಪೋಲಿ/ವಾಷಿಂಗ್ಟನ್‌: ಸಿರಿಯಾ ಅಧ್ಯಕ್ಷ ಬಷರ್‌ ಅಲ್‌ ಅಸಾದ್‌ ನಡೆಸಿದ ಕೆಮಿಕಲ್‌ ದಾಳಿಗೆ ಪ್ರತ್ಯುತ್ತರವಾಗಿ, ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಅಸಾದ್‌ಗೆ ಸೇರಿದ ಶಯÅತ್‌ ವಾಯುನೆಲೆ ಮೇಲೆ 59ಕ್ಕೂ ಹೆಚ್ಚು ಟಾಮ್‌ಹಾಕ್‌ ಕ್ಷಿಪಣಿಗಳನ್ನು ಉಡ್ಡಯನ ಮಾಡಿರುವ ಅಮೆರಿಕ, ಹೆಚ್ಚು ಕಡಿಮೆ ವಾಯು ನೆಲೆಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿದೆ. 

Advertisement

ವಿಶೇಷವೆಂದರೆ, ಟ್ರಂಪ್‌ ಅಧ್ಯಕ್ಷರಾದ ಮೇಲೆ ಅಮೆರಿಕ ನಡೆಸುತ್ತಿರುವ ಮೊದಲ ಅಂತಾರಾಷ್ಟ್ರೀಯ ಮಟ್ಟದ ದಾಳಿ ಇದು.
ದಾಳಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ. ಆದರೆ, ರಷ್ಯಾ ಮಾಧ್ಯಮಗಳ ಪ್ರಕಾರ, 15 ಮಂದಿ ಸತ್ತಿದ್ದಾರೆ. ನಾಲ್ಕು ಜೆಟ್‌ ವಿಮಾನಗಳು ಮತ್ತು ರನ್‌ವೇ ಹಾಳಾಗಿವೆ. ಈ ವಾರದ ಆರಂಭದಲ್ಲಷ್ಟೇ ಸಿರಿಯಾ ಪಡೆಗಳು, ಈ ವಾಯು ನೆಲೆಯಿಂದಲೇ ಕೆಮಿಕಲ್‌ ಅಸ್ತ್ರ ಪ್ರಯೋಗಿಸಿ ಅಲ್ಲಿನ 80ಕ್ಕೂ ಹೆಚ್ಚು ನಾಗರಿಕರನ್ನೇ ಕೊಂದಿದ್ದವು. ಹೀಗಾಗಿ ಈ ವಾಯುನೆಲೆಯನ್ನೇ ಟಾರ್ಗೆಟ್‌ ಮಾಡಿಕೊಂಡು ಅಮೆರಿಕ ಕ್ಷಿಪಣಿಗಳ ಪ್ರಯೋಗಿಸಿದೆ.

ಅಮೆರಿಕದ ಈ ಕ್ರಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದಾಳಿಯನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕೆಮಿಕಲ್‌ ದಾಳಿಯಲ್ಲಿ ಅದೇ ದೇಶದ ಜನರು ಸತ್ತಿದ್ದಾರೆ, ಜತೆಗೆ ಮುದ್ದಾದ ಮಕ್ಕಳೂ ಅಸುನೀಗಿವೆ. ಹೀಗಾಗಿ ನಾವು ಜನರ ಹಿತರಕ್ಷಣೆಗಾಗಿ ದಾಳಿ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಆದರೆ ರಷ್ಯಾ ಮತ್ತು ಇರಾನ್‌ ಈ ದಾಳಿಯನ್ನು ತೀವ್ರವಾಗಿ ವಿರೋಧಿಸಿವೆ. ಅಲ್ಲದೆ ರಷ್ಯಾ ತುರ್ತಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಕರೆಯಬೇಕು ಎಂದ ಆಗ್ರಹಿಸಿದೆ. “”ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವೊಂದರ ಮೇಲೆ ಅಕ್ರಮ ಆಕ್ರಮಣ,” ಎಂದು ರಷ್ಯಾ ಕರೆದಿದೆ. ಬೇರೊಂದು ದೇಶದ ಗಡಿ ದಾಟಿ ವೈಮಾನಿಕ ದಾಳಿ ನಡೆಸಬಾರದು ಎಂದು ಹೇಳುವ ಮೂಲಕ ಚೀನಾ ಕೂಡ ಈ ದಾಳಿಯನ್ನು ಆಕ್ಷೇಪಿಸಿದೆ. ಸಿರಿಯಾ ಪಡೆಗಳೂ ಈ ದಾಳಿ ಖಂಡಿಸಿದ್ದು, ಬರ್ಬರ ಆಕ್ರಮಣ ಎಂದಿವೆ. ಜತೆಗೆ ಅಮೆರಿಕ ಐಸಿಸ್‌ ಜತೆಗೆ ಸೇರಿಕೊಂಡು ಈ ದಾಳಿ ನಡೆಸಿದೆ ಎಂದು ಆರೋಪಿಸಿವೆ.

ದಾಳಿ ನಡೆಸುವ 30 ನಿಮಿಷಗಳ ಮುನ್ನ ಅಮೆರಿಕ ರಷ್ಯಾಗೆ ಈ ಬಗ್ಗೆ ಮಾಹಿತಿ ನೀಡಿತ್ತು. ಆದರೆ ದಾಳಿಗೆ ಪರವಾನಗಿ ಪಡೆದಿರಲಿಲ್ಲ. ಇದು ರಷ್ಯಾಗೆ ಸಿಟ್ಟು ತರಿಸಿದೆ. ಇದಷ್ಟೇ ಅಲ್ಲ, ಅಸಾದ್‌ ಜತೆಗೆ ಈಗಲೂ ಸ್ನೇಹದಿಂದ ಇರುವ ರಷ್ಯಾ, ಈ ದಾಳಿಯನ್ನು ಒಪ್ಪಲು ತಯಾರಿಲ್ಲ. ಹೀಗಾಗಿಯೇ ಅಮೆರಿಕದ ಜತೆ ಸಿರಿಯಾ ವಿಚಾರವಾಗಿ ಮಾಡಿಕೊಂಡಿದ್ದ ವಾಯು ದಾಳಿಗೆ ಸಂಬಂಧಿಸಿದ ಒಪ್ಪಂದವೊಂದನ್ನು ಮುರಿದಿದೆ. ಮೂಲಗಳ ಪ್ರಕಾರ, ಈ ವಾಯು ನೆಲೆಯ ಪಕ್ಕದಲ್ಲಿಯೇ ರಷ್ಯಾ ಕೂಡ ತನ್ನ ವಾಯುನೆಲೆ ನಿರ್ಮಿಸಿಕೊಂಡಿದೆ. ಮಹತ್ವದ ಬೆಳವಣಿಗೆಯಲ್ಲಿ ರಷ್ಯಾ ತನ್ನ ಸಮರ ನೌಕೆ, ಅಡ್ಮಿರಲ್‌ ಗೋರ್ಬಚೇವ್‌ ಅನ್ನು ಬ್ಲಾಕ್‌ಸೀ ಕಡೆಯಿಂದ ಸಿರಿಯಾದತ್ತ ತಿರುಗಿಸಿದ್ದು, ಒಂದು ರೀತಿಯಲ್ಲಿ ಯುದ್ಧ ಸನ್ನದ್ಧ ಪರಿಸ್ಥಿತಿ ಉಂಟಾಗಿದೆ.

ಫ್ರಾನ್ಸ್‌, ಜರ್ಮನಿ, ಬ್ರಿಟನ್‌ ಬೆಂಬಲ
ಅಮೆರಿಕದ ಈ ದಾಳಿಯನ್ನು ಬಹುತೇಕ ಪಾಶ್ಚಿಮಾತ್ಯ ದೇಶಗಳು ಮತ್ತು ಸೌದಿ ಅರೆಬಿಯಾ ಬೆಂಬಲಿಸಿವೆ. ಫ್ರಾನ್ಸ್‌, ಜರ್ಮನಿ ದಾಳಿಗೆ ನೇರವಾಗಿ ಅಸಾದ್‌ ಅವರೇ ಕಾರಣ ಎಂದಿದ್ದರೆ, ಬ್ರಿಟನ್‌ ಅಮೆರಿಕದ ದಾಳಿಯನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಹೇಳಿದೆ. ಟರ್ಕಿ ದೇಶ ಇದೊಂದು ಧನಾತ್ಮಕ ಕ್ರಮ ಎಂದಿದೆ. ಸೌದಿ ಅರೇಬಿಯಾ ಟ್ರಂಪ್‌ ಅವರ ಧೈರ್ಯದ ಕ್ರಮ ಎಂದು ಬಣ್ಣಿಸಿದ್ದರೆ, ಇಸ್ರೇಲ್‌, ಸಿರಿಯಾದ ಇನ್ನೂ ಕೆಲವು ಭಾಗಗಳಲ್ಲಿ ದಾಳಿ ನಡೆಸುವ ಅಗತ್ಯವಿದೆ ಎಂದಿದೆ. ಕೆಮಿಕಲ್‌ ಅಸ್ತ್ರಗಳ ಬಳಕೆಯನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ ಎಂದು ಜಪಾನ್‌ ಹೇಳಿದೆ.

Advertisement

3ನೇ ಮಹಾ ಯುದ್ಧಕ್ಕೆ ನಾಂದಿ?
ಸಿರಿಯಾದ ಮೇಲೆ ಅಮೆರಿಕ ಮಾಡಿರುವ ಈ ದಾಳಿ 3ನೇ ಮಹಾಯುದ್ಧಕ್ಕೆ ನಾಂದಿಯೇ? ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ  ಈ ಬಗ್ಗೆಯೂ ಚರ್ಚೆ ನಡೆದಿದೆ. ಈಗಾಗಲೇ ರಷ್ಯಾ ಮತ್ತು ಅಮೆರಿಕ ಸಂಬಂಧ ತೀರಾ ಹದಗೆಟ್ಟಿರುವ ಹಂತಕ್ಕೆ ಬಂದಿದ್ದು, ಈ ದಾಳಿ ನಂತರ ಸಂಪೂರ್ಣವಾಗಿ ಹಾಳಾಗಿದೆ. ಅಲ್ಲದೆ ಹಾಮ್ಸ್‌ನಲ್ಲಿರುವ ಏರ್‌ಬೇಸ್‌ನಲ್ಲಿ ರಷ್ಯಾ ಕೂಡ ತನ್ನ ಅಸ್ತಿತ್ವ ಇರಿಸಿಕೊಂಡಿದ್ದು, ಅದರ ವಾಯು ಸೇನೆಗೆ ಹಾನಿಯಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ರಷ್ಯಾ ಬ್ಲಾಕ್‌ ಸೀಯಿಂದ ತನ್ನ ಸಮರ ನೌಕೆಯನ್ನು ಸಿರಿಯಾದತ್ತ ತಂದು ನಿಲ್ಲಿಸಿದೆ ಎಂದು ಹೇಳಲಾಗಿದೆ.

ಭಾರತದ ಮೇಲೇನು ಪರಿಣಾಮ?
ಸಿರಿಯಾದ ಮೇಲಿನ ಅಮೆರಿಕದ ದಾಳಿಯಿಂದ ಭಾರತಕ್ಕೆ ನಷ್ಟವೂ ಇಲ್ಲ, ಲಾಭವೂ ಇಲ್ಲ. ಆದರೆ ಈ ದಾಳಿ ತರುವಾಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರದಲ್ಲಿ ಭಾರಿ ಏರಿಕೆಯಾಗಿದ್ದು, ಇದರಿಂದ ಕೊಂಚ ಅಡ್ಡ ಪರಿಣಾಮ ಉಂಟಾಗಬಹುದು ಎಂದು ಹೇಳಲಾಗಿದೆ. ಆದರೂ, ಭಾರತ ನೇರವಾಗಿ ಸಿರಿಯಾದ ಜತೆ ತೈಲ ವಿಚಾರ ಕುರಿತು ಸಂಬಂಧವೇನೂ ಹೊಂದಿಲ್ಲ. ಅಲ್ಲದೆ ಸಿರಿಯಾ ಕೂಡ ಒಪೆಕ್‌ನ ಸದಸ್ಯ ರಾಷ್ಟ್ರವಲ್ಲ. ಹೀಗಾಗಿ ಭಾರತದ ಮೇಲೆ ಅಷ್ಟೇನೂ ಪರಿಣಾಮ ಉಂಟಾಗದು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next