Advertisement

ಟೆಂಡರ್‌ ಸರಳೀಕರಣಕ್ಕೆ ಕಾಯ್ದೆಗೆ ತಿದ್ದುಪಡಿ

06:58 AM Dec 15, 2018 | |

ವಿಧಾನಸಭೆ: ಟೆಂಡರ್‌ ಪ್ರಕ್ರಿಯೆ ಸರಳೀಕರಿಸುವುದಕ್ಕಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ ಆಕ್ಟ್)ಗೆ ವಿಧಾನಸಭೆ ಶುಕ್ರವಾರ ಅಂಗೀಕಾರ ನೀಡಿದೆ. ವಿಧೇಯಕ ಮಂಡಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಇ-ಸಂಗ್ರಹಣೆ, ಟೆಂಡರ್‌ ಬುಲೆಟಿನ್‌, ಟೆಂಡರ್‌ ಬುಲೆಟಿನ್‌ ಅಧಿಕಾರಿಗೆ ಸಂಬಂಧಿಸಿದ ನಿಯಮ ಕೈ ಬಿಟ್ಟು, ಸಾರ್ವಜನಿಕ ಲಭ್ಯತೆಗೆ ಇ-ಪೋರ್ಟಲ್‌ ಸ್ಥಾಪಿಸುವುದಕ್ಕಾಗಿ ಈ ವಿಧೇಯಕ ಮಂಡಿಸಲಾಗುತ್ತಿದೆ ಎಂದು ತಿಳಿಸಿದರು. ವಿದ್ಯುನ್ಮಾನ ಹಿಮ್ಮುಖ ಹರಾಜು
(ಆನ್‌ಲೈನ್‌ ಬಿಡ್ಡಿಂಗ್‌ ) ವ್ಯವಸ್ಥೆ ಜಾರಿಗೆ ತರಲಾಗುವುದು. ಟೆಂಡರ್‌ ಕಾಲಾವಧಿಯನ್ನು 30 ದಿನದಿಂದ 15 ದಿನಕ್ಕೆ ಇಳಿಸಲು ಇದರಿಂದ ನೆರವಾಗುತ್ತದೆ ಎಂದು ಸದನಕ್ಕೆ ವಿವರಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ, ಇ-ಟೆಂಡರ್‌ ಆಹ್ವಾನಿಸುವ ಸಂದರ್ಭದಲ್ಲಿ ಕಾಮಗಾರಿ ನಿಗದಿ ಹಾಗೂ ಒಬ್ಬ ವ್ಯಕ್ತಿ ಇಂತಿಷ್ಟು ಕೆಲಸವನ್ನು ಮಾತ್ರ ಮಾಡಬೇಕೆಂಬ ನಿಯಮ ಜಾರಿಗೆ ತನ್ನಿ. ಇಲ್ಲವಾದರೆ ಎಲ್ಲೋ ಕುಳಿತ ವ್ಯಕ್ತಿ ಎಷ್ಟು ಬಾರಿ ಬೇಕಾದರೂ ಟೆಂಡರ್‌ನಲ್ಲಿ ಭಾಗವಹಿಸುವ ಮೂಲಕ ವ್ಯವಸ್ಥೆಯ ದುರ್ಲಾಭ ಪಡೆಯುತ್ತಾನೆ. ಇ ಟೆಂಡರ್‌ ಆದ ಮೇಲೂ ರದ್ದುಗೊಳಿಸುವ ಅಧಿಕಾರ ಇರಬೇಕು ಇಲ್ಲದಿದ್ದರೆ, ಯಾರೂ ಪ್ರಶ್ನೆ ಮಾಡದಂತಾಗುತ್ತದೆ ಎಂದು ಸಲಹೆ ನೀಡಿದರು. ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಎಲ್ಲ ಕಾಮಗಾರಿಗಳನ್ನು ಟೆಂಡರ್‌ ಮೂಲಕವೇ ಕೈಗೆತ್ತಿಕೊಳ್ಳಲು ಸರ್ಕಾರ ಸಿದ್ಧವಿದ್ದರೂ, ಶಾಸಕರ ಒತ್ತಡಕ್ಕೆ ಮಣಿದೇ ನಾವು ಕಾಮಗಾರಿಯನ್ನು ಕೆಆರ್‌ ಐಡಿಎಲ್‌ ಹಾಗೂ ನಿರ್ಮಿತಿ ಕೇಂದ್ರಕ್ಕೆ ನೀಡುತ್ತಿದ್ದೇವೆ. ಈ ಹಿಂದೆ ಪಂಚಾಯತ್‌ ರಾಜ್‌ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಕೆಲಸಗಳನ್ನು ಕೆಆರ್‌ಐಡಿಎಲ್‌ಗೆ ನೀಡುವ ಆದೇಶವನ್ನು ನಾವು ರದ್ದುಪಡಿಸಿದ್ದೇವೆ. ಆದರೆ ಈ ರೀತಿ ಮಾಡುವುದು ನಮ್ಮ ಹಕ್ಕು ಮೊಟಕು ಮಾಡಿದಂತೆ ಎಂದು ಶಾಸಕರು ಭಾವಿಸುತ್ತಾರೆ. ಜತೆಗೆ ಜಿಪಂ ಸದಸ್ಯರು ನಿಯೋಗಗಳ ಮೂಲಕ ಮುಖ್ಯಮಂತ್ರಿ ಭೇಟಿ ಮಾಡಿ ಒತ್ತಡ ತರುತ್ತಿದ್ದಾರೆ. ಹೀಗಾದರೆ ಸುಧಾರಣೆ ತರಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಿಎಂ ಕುಮಾರಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಹೊಸ ಕಾಯ್ದೆ ಜಾರಿಗೆ ತರುತ್ತಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ತಂದಿರುವ ಕಾಯ್ದೆಯನ್ನು ಎಲ್ಲ ರಾಜ್ಯಗಳು ಅಳವಡಿಸಿಕೊಂಡಿವೆ. ರಾಜ್ಯ ಸರ್ಕಾರವೂ ಪಾರದರ್ಶಕತೆ ತರಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಸ್ಪಷ್ಟೀಕರಣ ನೀಡಿದರು. ನಂತರ ಅವರ ಮನವಿಗೆ ಸ್ಪಂದಿಸಿ ಸದನದ ಒಪ್ಪಿಗೆ ನೀಡಲಾಯಿತು.
 

Advertisement

Udayavani is now on Telegram. Click here to join our channel and stay updated with the latest news.

Next