Advertisement

Vijayapura; ಸಿಬ್ಬಂದಿಗಳ ಸೇವಾ ಭದ್ರತೆಗೆ ಸಹಕಾರಿ ಕಾಯ್ದೆಗೆ ತಿದ್ದುಪಡಿ: ಕೆ.ಎನ್ ರಾಜಣ್ಣ

06:32 PM Nov 20, 2023 | keerthan |

ವಿಜಯಪುರ: ಸಹಕಾರಿ ರಂಗದ ಸಿಬ್ಬಂದಿಗಳ ಸೇವಾ ಭದ್ರತೆಗಾಗಿ ಮತ್ತಷ್ಟು ಚೈತನ್ಯದೊಂದಿಗೆ ಸಹಕಾರಿ ಆಂದೋಲನ ಗಟ್ಟಿಗೊಳಿಸಲು ಸಹಕಾರಿ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಸಮಿತಿ ರಚಿಸಲಾಗಿದೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

Advertisement

ಸೋಮವಾರ ನಗರದಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಹಯೋಗದಲ್ಲಿ ನಡೆದ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಹಕಾರಿ ಸಂಸ್ಥೆಗಳ ಸಿಬ್ಬಂದಿಗಳ ಸೇವಾ ಭದ್ರತೆ ಅಗತ್ಯವಾಗಿದ್ದು, ಇದಕ್ಕಾಗಿ ಈಗಿರುವ ಕಾಯ್ದೆಗೆ ತಿದ್ದುಪಡಿ ತರಲು ನಮ್ಮ ಸರ್ಕಾರ ಮುಂದಾಗಿದೆ ಎಂದರು.

ಯಶಸ್ವಿ ಯೋಜನೆ ಮತ್ತೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸಹಕಾರಿ ರಂಗ ಪ್ರವೇಶ ಇಲ್ಲದ ರಂಗವಿಲ್ಲ ಎಂಬಂತೆ ಪೂರಕವಾಗಿ ಸಹಕಾರಿ ರಂಗವನ್ನು ಮುನ್ನೆಡಸಬೇಕು. ಇದಕ್ಕಾಗಿ ಯವ ಸಮೂಹ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸುವುದಕ್ಕಾಗಿ ಸೇವಾ ಮನೋಭಾವದಿಂದ ಸಹಕಾರಿ ರಂಗಕ್ಕೆ ಪ್ರವೇಶಿಸಬೇಕು ಎಂದು ಸಲಹೆ ನೀಡಿದರು.

ಭವಿಷ್ಯದ ಪೀಳಿಗೆಯ ಹಿತದೃಷ್ಟಿಯಿಂದ ಸಹಕಾರಿ ಆಂದೋಲನದ ಮಾದರಿಯಲ್ಲಿ ಬೆಳವಣಿಗೆ ಕಾಣಬೇಕಿದೆ. ಜಾತಿ-ಮತ, ಧರ್ಮ, ರಾಜಕೀಯ ರಹಿತವಾಗಿರುವ ಸಹಕಾರಿ ರಂಗದಲ್ಲಿ ಎಲ್ಲರೂ ಒಂದೇ, ಎಲ್ಲರಿಗಾಗಿ ಎಲ್ಲರೂ ಎಂಬ ತತ್ವ ಸಿದ್ಧಾಂತದಲ್ಲಿ ಸೇವಾ ಮನೋಭಾವದಲ್ಲಿ ಬೆಳೆಸಲಾಗುತ್ತಿದೆ. ಇದಕ್ಕಾಗಿ ಸಹಕಾರಿ ಸಪ್ತಾಹವನ್ನು ದೇಶದಾದ್ಯಂತ ವಿವಿಧ ಅಯಾಮಗಳಿಂದ ಆಚರಿಸಲಾಗಿದೆ.

ಸಹಕಾರಿಗಳು ಸಂಘಟಿತರಾಗುವ ಜೊತೆಗೆ, ಸಹಕಾರಿ ರಂಗಕ್ಕೆ ಯಾರಿಂದಲೇ ಆಗಲಿ ಅಪಾಯ ಎದುರಾಗುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ತಡೆಗಟ್ಟಲು ಮುಂದಾಗಬೇಕು. 1904ರಲ್ಲಿ ಅರಂಭವಾದ ಪತ್ತಿನ ಸಹಕಾರಿ ವ್ಯವಸ್ಥೆ ಇದೀಗ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ ಎಂದರು.

Advertisement

ದೇಶದಲ್ಲಿ ಶೂನ್ಯ ಬಡ್ಡಿದರದ ಅಲ್ಪಾವಧಿ ಸಾಲ ಯೋಜನೆ ಜಾರಿಗೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದಿಂದಾಗಿ ಸಹಕಾರಿ ಸಂಘಗಳ ಸಾಲ ವಸೂಲಾತಿಗೆ ಅನುಕೂಲವಾಗಿದೆ. ಕ್ಷೀರ ಭಾಗ್ಯ ಯೋಜನೆಯಿಂದ ಒಕ್ಕೂಟಗಳ ಬಲವರ್ಧನೆಗೆ ಸಹಕಾರಿ, ಹಾಲು ಉತ್ಪಾದಕರಿಗೆ ಸಹಾಯಧನ ನೀಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಅನುಷ್ಠಾನಕ್ಕೆ ತರಲಾಗಿದೆ. ಇದರೊಂದಿಗೆ ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿ ಸಿದ್ದರಾಯಮ್ಮು ಹಾಗೂ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದರು.

ಭಾರತದಲ್ಲಿ ಸಹಕಾರಿ ವ್ಯವಸ್ಥೆ ಬಲವರ್ಧನೆ ಆಗಿರುವ ಉದ್ದೇಶದಿಂದಲೇ ಇದೀಗ ದೇಶದಲ್ಲಿ 5 ಟ್ರಿಲಿಯನ್ ವ್ಯವಹಾರದ ಗುರಿ ಹೊಂದಲಾಗಿದೆ. ಗ್ರಾಮೀಣ ಭಾಗದ ಜನರ ಆರ್ಥಿಕ ಮಟ್ಟ ಹೆಚ್ಚಳಕ್ಕೆ ಸಹಕಾರಿ ವ್ಯವಸ್ಥೆಯ ವಿವಿಧ ಚಟುವಟಿಕೆಗೆ ಆದ್ಯತೆ ನೀಡುತ್ತಿರುವುದರಿಂದ ದೇಶದ ಜಿಡಿಪಿ ಏರಿಕೆ ಕಾಣಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next