Advertisement

ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಹಿಂಪಡೆಯಿರಿ

12:28 PM May 18, 2020 | Suhan S |

ಧಾರವಾಡ: ಎಪಿಎಂಸಿ ಕಾಯ್ದೆಗೆ ತರಾತುರಿಯಲ್ಲಿ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಸರಕಾರದ ನಿರ್ಧಾರದ ಹಿಂದೆ ಕಾಣದ ಕೈಗಳ ಕೈವಾಡವಿದ್ದು, ಎಪಿಎಂಸಿ ತಿದ್ದುಪಡಿ ಸುಗ್ರೀವಾಜ್ಞೆ ಹಿಂಪಡೆಯಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್‌. ನೀರಲಕೇರಿ ಆಗ್ರಹಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಶೇ.90 ರೈತರ ಬೆಂಬಲವಿದೆ ಎಂಬುದು ಸತ್ಯವೇ ಅಲ್ಲ. ಇದು ದುರುದ್ದೇಶ ಎಂದು ಜನತೆಗೆ ಅರ್ಥವಾಗದೇ ಇರಲು ಸಾಧ್ಯವಿಲ್ಲ. ಕೋವಿಡ್ ಹೊಡೆತಕ್ಕೆ ಜನ ತತ್ತರಿಸಿ ಮನೆಯಲ್ಲಿರುವ ಸಮಯದಲ್ಲಿ ಇಂತಹ ನಿರ್ಣಯ ತೆಗೆದುಕೊಂಡಿರುವುದು ಸಮಯಸಾಧಕ ಕ್ರಮವಾಗಿದೆ ಎಂದಿ ದೂರಿದ್ದಾರೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ ಅಪಾಯಕಾರಿ ಬೆಳವಣಿಗೆ. ಇದು ರೈತರ ಉದ್ಧಾರಕ್ಕಲ್ಲ ಎನ್ನುವುದು ರೈತರಿಗೂ ಗೊತ್ತಾಗಿದೆ. ಸ್ವಾರ್ಥಕ್ಕಾಗಿ ರೈತರ ಹಿತವನ್ನು ಬಲಿ ಕೊಡಲು ಸರಕಾರ ಹೊರಟಿರುವುದು ಸಾಬೀತಾಗಿದೆ. ಇಂತಹ ಕ್ರಮದಿಂದ ಸರಕಾರವನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ. ಈಗಲೂ ಕಾಲ ಮಿಂಚಿಲ್ಲ. ಮುಂದಿನ ದಿನಗಳಲ್ಲಿ ರೈತರಿಂದ ಗಂಭೀರ ಸ್ವರೂಪದ ಪ್ರತಿಭಟನೆ ಕೈಗೊಳ್ಳುವ ಮೊದಲೇ ಈ ನಿರ್ಧಾರದಿಂದ ಸರಕಾರ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ವಿತ್ತ ಮಂತ್ರಿಗಳು ಮೂರನೇ ಹಂತದಲ್ಲಿ ಪ್ರೋತ್ಸಾಹ ಘೋಷಣೆ ಮಾಡಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ವಿಷಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ “ಅನ್ನದಾತನ ಬೆನ್ನಿಗೆ ನಿಂತ ಮೋದಿ ಸರಕಾರ’ ಹೇಳಿಕೆ ವ್ಯರ್ಥವಾದದ್ದು ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next