ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದಂತೆ ಗೃಹ ಜ್ಯೋತಿ, ಗೃಹಲಕ್ಷ್ಮೀ, ಅನ್ನ ಭಾಗ್ಯ,ಯುವ ನಿಧಿ ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಗ್ಯಾರಂಟಿ ಯೋಜನೆಗಳನ್ನು ಒಂದೊಂದೇ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ.
ಈ ನಡುವೆ ಗ್ಯಾರೆಂಟಿ ಭಾಗ್ಯಗಳಿಗೆ ಅಗತ್ಯ ದಾಖಲೆಗಳನ್ನು ನೀಡಲು ನಾಗರಿಕರು ಆಧಾರ್ ಕಾರ್ಡ್, ಕುಟುಂಬ ಪಡಿತರ ಚೀಟಿ, ಪಾನ್ ಕಾರ್ಡ್ ಮೊದಲಾದ ಅಗತ್ಯ ದಾಖಲೆಗಳನ್ನು ಸಿದ್ಧ ಪಡಿಸಿ ಕೊಳ್ಳಲು ಹಾತೊರೆಯುತ್ತಿರುವ ದೃಶ್ಯಗಳು ಸಾಮಾನ್ಯ ವಾಗಿವೆ.
ಸರ್ಕಾರದ ಎಲ್ಲಾ ಯೋಜನೆಗಳಿಗೆ ಮುಖ್ಯ ವಾಗಿ ಬೇಕಾಗಿರುವ ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆ ಜೋಡಣೆ, ಸರಿಯಾದ ವಿಳಾಸ ಮೊದಲಾದ ದಾಖಲಾತಿಗಳು ಸರಿಯಾಗಿರಬೇಕು. ಈ ಹಿನ್ನೆಲೆಯಲ್ಲಿ ನವೀಕೃತ ಆಧಾರ್ ಕಾರ್ಡ್ ಪಡೆದು ಕೊಳ್ಳಲು ಬ್ಯಾಂಕ್‌ಗಳು ಹಾಗೂ ಸೈಬರ್ ಸೆಂಟರ್‌ಗಳಲ್ಲಿ ಜನರು ಮುಗಿ ಬೀಳುತ್ತಿರುವುದು ಕಂಡು ಬರುತ್ತಿದೆ. ನಗರದ ಬ್ಯಾಂಕ್ ಆಫ್ ಬರೋಡದಲ್ಲಿ ಮಂಗಳವಾರ ಬೆಳಗಿ ನಿಂದಲೇ ಜನ ಕಾದು ನಿಂತು ಬ್ಯಾಂಕ್ ತೆರೆಯುವ ವೇಳೆಗೆ ಟೋಕನ್ ಪಡೆದು ತಮ್ಮ ಆಧಾರ್ ಕಾರ್ಡ್ ಗಳನ್ನು ನವೀಕರಿಸಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಹೆಚ್ಚಳ: ಇನ್ನು ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಳಿಗೆ ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿ ಅಗತ್ಯವಾಗಿ ರುವುದರಿಂದ ಹೊಸ ಪಡಿತರ ಚೀಟಿಗಾಗಿ ಅರ್ಜಿ ಗಳನ್ನು ಸಲ್ಲಿಸುವುದು ಹೆಚ್ಚಾಗಿದೆ. ಗೃಹ ಜ್ಯೋತಿ ಯೋಜನೆಗೆ ಪ್ರತಿ ಫಲಾನುಭವಿಯು ತನ್ನ ಕಸ್ಟಮರ್ ಐಡಿ ಅಥವಾ ಅಕೌಂಟ್ ಐಡಿ ಅನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕಿದ್ದು, ಈ ಪ್ರಕ್ರಿಯೆ ಮಾಡಿಸಲು ಅಲೆದಾಟ ಶುರುವಾಗಿದೆ. ಇನ್ನು ಯುವ ನಿಧಿಗಾಗಿ ಪಡೆಯುವ ನಿರುದ್ಯೋಗ ಭತ್ಯೆ ಪಡೆಯಲು ಪದವಿ ವ್ಯಾಸಂಗ ಪತ್ರ, ಆಧಾರ್, ವಾಸ ದೃಢೀಕರಣ ಮೊದಲಾದ ದಾಖಲೆಗಳನ್ನು ಹವಣಿಸಿಟ್ಟುಕೊಳ್ಳಬೇಕಿದೆ. ಶಕ್ತಿ ಯೋಜನೆ ಯಡಿಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯ ಪಡೆಯಲು ಪೂರಕವಾಗುವ ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕಿದೆ.
ಅಂತಹವರೆಗೆ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿ ನೀಡಬೇಕಾಗುತ್ತದೆ. ಜೂನ್ 15ರಿಂದ ಜಾರಿಯಾಗ ಲಿರುವ ಗೃಹಲಕ್ಷ್ಮೀ ಯೋಜನೆಗೆ ಕುಟುಂಬದ ಯಜಮಾಣಿಗೆ 2 ಸಾವಿರ ರೂ ನೀಡಲಾಗುವುದು ಎನ್ನುವ ಗ್ಯಾರಂಟಿಗೆ ಮನೆ ಯಜಮಾನರು ಯಾರು ಎನ್ನುವ ಚರ್ಚೆ ಎಲ್ಲೆಡೆ ಕಂಡು ಬರುತ್ತಿದೆ. ಅವಿಭಕ್ತ ಕುಟುಂಬಗಳಲ್ಲಿ ಅತ್ತೆ ಸೊಸೆಯರ ನಡುವೆ ಫಲಾ ನುಭವಿಗಳು ಯಾರು ಎನ್ನುವ ತಿಕ್ಕಾಟಗಳೂ ಸಹ ನಡೆ ಯುತ್ತಿವೆ. ಮಹಿಳೆ ಯರಿಗೆ ಉಚಿತ ಬಸ್ ಪ್ರಯಾಣ ಎಂದು ಹೇಳಿರುವುದರಿಂದ ಬೆಂಗಳೂರಿನಲ್ಲಿರುವ ತನ್ನ ತವರು ಮನೆಗೆ ಹೋಗಲು ನಿಮ್ಮಿಂದ ಹಣ ಪಡೆಯ ಬೇಕಿಲ್ಲ.
ಇನ್ನು ಅಂದುಕೊಂಡಾಗ ಹೋಗಿ ಬರುತ್ತೇನೆ ಎಂದು ಪತ್ನಿ ಎಚ್ಚರಿಕೆ ನೀಡಿದ್ದನ್ನು ನಗರದ ಪತಿ ಮಹಾಶಯರೊಬ್ಬರು ಹೇಳಿ ಕೊಂಡಿದ್ದಾರೆ. ಒಟ್ಟಿನಲ್ಲಿ ಸರ್ಕಾರದ ಈ ಭಾಗ್ಯಗಳು ಜನಸಾಮಾನ್ಯರಿಗೆ ಸದ್ಬಳಕೆ ಯಾಗಲಿವೆಯಾ ಅಥವಾ ದುರ್ಬಳಕೆಯಾಗಿ ಸಂಸಾರ ಹಾಗೂ ಸರ್ಕಾರಕ್ಕೆ ಹೊರೆಯಾಗಲಿದೆಯಾ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ.
ಯಾರು ಫಲಾನುಭವಿಗಳು ಎನ್ನುವ ಚರ್ಚೆ ? : ಜುಲೈ 1ರಿಂದ ಜಾರಿಯಾಗಲಿರುವ ಗೃಹ ಜ್ಯೋತಿ ಯೋಜನೆಗೆ 200 ಯೂನಿಟ್‌ಗಳ ವರೆಗೆ ವಿದ್ಯುತ್ ಉಚಿತವಾಗಿ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸ ಬೇಕು. ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದರೆ, ಒಂದು ಆರ್‌ಆರ್ ಸಂಖ್ಯೆಗೆ ಮಾತ್ರ ಸೌಲಭ್ಯ ಕಲ್ಪಿಸುವುದಾಗಿ ಹೇಳಿರುವುದರಿಂದ ಬಾಡಿಗೆ ಮನೆಯಲ್ಲಿರು ವವರು ಈ ಸೌಲಭ್ಯಗಳಿಂದ ವಂಚಿತರಾಗುವ ಸಂಭವವಿದ್ದು, ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ಚರ್ಚೆ ಆರಂಭವಾಗಿದೆ. ಸರ್ಕಾರ ಬಾಡಿಗೆದಾರರಿಗೂ ಯೋಜನೆ ಅನ್ವಯಿಸುತ್ತದೆ ಎನ್ನುವ ಹೇಳಿಕೆ ನೀಡಿದ್ದರೂ ಮಾಪಕಗಳ ಗೊಂದಲಗಳಿಂದ ಸೌಲಭ್ಯಗಳು ಕೈ ತಪ್ಪುವ ಆತಂಕ ಎದುರಾಗಿದೆ.
ಗ್ಯಾರಂಟಿ ಯೋಜನೆಗೆ ಸಜ್ಜು : ಗೃಹ ಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್‌ಗಳ ವರೆಗೆ ಉಚಿತ ಎನ್ನುವ ಘೋಷಣೆಯಿಂದಾಗಿ ಯೋಜನೆಯ ಸ್ವರೂಪ ತಿಳಿಯದೇ ಇರುವ ಬಹಳಷ್ಟು ಮಂದಿ ತಾವು ತಿಂಗಳಲ್ಲಿ ಬಳ ಸುತ್ತಿದ್ದ 50 ಯೂನಿಟ್ ಬದಲಾಗಿ 200 ಯೂನಿಟ್ ಬಳಸಬಹುದೆಂದು ಎಲೆಕ್ಟ್ರಿಕಲ್ ವಸ್ತುಗಳನ್ನು ಕೊಳ್ಳುವ ದೃಶ್ಯಗಳೂ ಕಂಡು ಬರುತ್ತಿವೆ. ಅಡಿಗೆ ಅನಿಲ ದುಬಾರಿ ಎಂದು ಎಲೆಕ್ಟ್ರಿಕ್ ಸ್ಟೋವ್, ನೀರು ಕಾಯಿಸಲು ವಾಟರ್ ಹೀಟರ್, ಫ್ಯಾನ್ ಮೊದಲಾದ ವಸ್ತುಗಳ ಖರೀದಿಯೂ ಜೋರಾಗಿದೆ.
– ಡಿ.ಶ್ರೀಕಾಂತ