ಹುಬ್ಬಳ್ಳಿ: ಧ್ವಜ ಸಂಹಿತೆ ತಿದ್ದುಪಡಿ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಕೆಲಸವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಾಡುತ್ತಿದೆ. ವಿದೇಶದಲ್ಲಿ ಗಾಂಧಿ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ನಾಥೂರಾಮ್ ಗೋಡ್ಸೆ ಕನಸನ್ನು ನನಸು ಮಾಡುತ್ತಿದ್ದಾರೆ. ರಾಷ್ಟ್ರ-ರಾಷ್ಟ್ರ ನಾಯಕರಿಗೆ ಅವಮಾನ ಮಾಡುವುದು ಬಿಜೆಪಿ ನಾಯಕರಿಗೆ ಹೊಸದೇನಲ್ಲ. ಧ್ವಜ ಸಂಹಿತೆ ತಿದ್ದುಪಡಿಯನ್ನು ಹೋರಾಟದ ಮೂಲಕ ಖಂಡಿಸಲಾಗುವುದು ಎಂದು ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2002ರ ತಿದ್ದುಪಡಿಯಲ್ಲಿ ರಾಷ್ಟ್ರ ಧ್ವಜದ ಕುರಿತು ವಿವರಣಾತ್ಮಕವಾಗಿ ಹೇಳಲಾಗಿದ್ದು, ಕೇವಲ ಖಾದಿಯಿಂದ ಹಾಗೂ ಕೈಯಿಂದ ಮಾಡುವ ಅಂಶವನ್ನು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಕೇಂದ್ರ ಸರಕಾರವು ಖಾದಿ ಮಾತ್ರವಲ್ಲ ಪಾಲಿಸ್ಟರ್ ಬಟ್ಟೆಯಲ್ಲೂ ಮಾಡಬಹುದು ಎಂದು ತಿದ್ದುಪಡಿ ಮಾಡಿದೆ. ಇದು ರಾಷ್ಟ್ರ ವಿರೋಧಿ ಕೃತ್ಯವಾಗಿದೆ. ಕೂಡಲೇ ಈ ತಿದ್ದುಪಡಿ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಈ ಹಿಂದೆಯೂ ರಾಷ್ಟ್ರ ಧ್ವಜವನ್ನು ಪ್ರತಿ ಮನೆ ಮೇಲೆ ಹಾರಿಸಬೇಕು ಎಂದಾಗ ಸಂಘ ಪರಿವಾರದ ನಾಯಕರಾದ ಕೇಶವ ಹೆಡ್ಗೆವಾರ ಹಾಗೂ ಮಾಧವ ಗೋಳವಾಲ್ಕರ ವಿರೋಧಿಸಿದ್ದರು. ಭಗವಾ ಧ್ವಜ ಹಾಕುವಂತೆ ಕರೆ ನೀಡಿದ್ದರು. ಇದರ ಹಿನ್ನೆಲೆಯಿಂದ ಬಂದವರು ರಾಷ್ಟ್ರ ಧ್ವಜದ ಘನತೆಯನ್ನು ಮತ್ತಷ್ಟು ಕಡಿಮೆ ಮಾಡಿದ್ದಾರೆ. ಈಗ ರಾಷ್ಟ್ರ ಧ್ವಜಕ್ಕೆ ಕೈ ಹಾಕಿರುವ ಬಿಜೆಪಿ ಹಾಗೂ ಸಂಘ ಪರಿವಾರ ಮುಂದೆ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಸಡಿಲಗೊಳಿಸುವ ಕೆಲಸ ಮಾಡಲಿದೆ. ಬಿಜೆಪಿಯ ಈ ಕೆಟ್ಟ ಕೆಲಸ ಖಾದಿ ಹಾಗೂ ರಾಷ್ಟ್ರ ಧ್ವಜ ತಯಾರಿಸುವ 1.5 ಕೋಟಿ ಜನರ ದುಡಿಮೆ ಹಾಗೂ ರಾಷ್ಟ್ರಪ್ರೇಮಕ್ಕೆ ಕೊಳ್ಳಿ ಇಡುತ್ತಿದೆ ಎಂದರು.
ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಎಂದು ಓಡಾಡಿದವರು ಇದೀಗ ರಾಷ್ಟ್ರಧ್ವಜಕ್ಕೆ ಕೈ ಹಾಕಿದ್ದಾರೆ. ಕಳೆದ 55 ವರ್ಷಗಳ ಕಾಲ ಸಂಘದ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲಿಲ್ಲ. ಇದೀಗ ತಿದ್ದುಪಡಿ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ. ಇವರ ದೇಶಪ್ರೇಮ ಎಂತಹದ್ದು ಎಂಬುದು ಗೊತ್ತಾಗುತ್ತಿದೆ. ರಾಷ್ಟ್ರಧ್ವಜ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುವುದಿಲ್ಲ. ಇದನ್ನು ಅಂತಿಮ ಹಂತಕ್ಕೆ ತರುವ ಕೆಲಸ ಪಕ್ಷ ಮಾಡಲಿದೆ. ಪ್ರದೇಶ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಈ ಬಗ್ಗೆ ಮುಂದಿನ ಹೋರಾಟ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಾಸಕ ಪ್ರಸಾದ ಅಬ್ಬಯ್ಯ, ಮುಖಂಡರಾದ ಅನಿಲಕುಮಾರ ಪಾಟೀಲ, ರಜತ ಉಳ್ಳಾಗಡ್ಡಿಮಠ, ಹೂವಪ್ಪ ದಾಯಗೋಡಿ, ಶಹಜಮಾನ್ ಮುಜಾಹಿದ್, ರಾಬರ್ಟ್ ದದ್ದಾಪುರಿ, ಸಂಘದ ವ್ಯವಸ್ಥಾಪಕ ಶಿವಾನಂದ ಮಠಪತಿ ಇನ್ನಿತರರಿದ್ದರು.
ಕೆಲಸಗಾರರೊಂದಿಗೆ ಚರ್ಚೆ
ರಾಷ್ಟ್ರಧ್ವಜ ತಯಾರಿಸುವ ಕೇಂದ್ರಕ್ಕೆ ಭೇಟಿ ನೀಡಿದ ಬಿ.ಕೆ. ಹರಿಪ್ರಸಾದ ಅವರು ಕೆಲಸಗಾರರೊಂದಿಗೆ ಚರ್ಚಿಸಿದರು. ನಿತ್ಯ ತಯಾರಿಸುವ ಧ್ವಜಗಳು, ದುಡಿಮೆ ಇತ್ಯಾದಿ ಕುರಿತು ಮಾತುಕತೆ ನಡೆಸಿದರು. ದುಡಿಮೆಗಿಂತ ಸಿಬ್ಬಂದಿ ರಾಷ್ಟ್ರ ಪ್ರೇಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಪ್ಯಾಕಿಂಗ್ ಆಗುವ ಧ್ವಜದ ಇಸ್ತ್ರಿ ಮಾಡಿದರು. ಸ್ಕ್ರೀನ್ ಪೇಟಿಂಗ್ ಅಶೋಕ ಚಕ್ರ ಬರೆದರು.
ಸಂಹಿತೆ ಪ್ರಕಾರ ಗುಣಮಟ್ಟದ ಧ್ವಜ ತಯಾರಿಸುವ ಬೆಂಗೇರಿ ಗ್ರಾಮೋದ್ಯೋಗ ಹಾಗೂ ಇದನ್ನು ನೆಚ್ಚಿ ಕೊಂಡಿರುವ 1200 ಕುಟುಂಬಗಳು ಬೀದಿಗೆ ಬರಲಿವೆ. ಇವರು ದುಡಿಮೆಗಿಂತ ರಾಷ್ಟ್ರ ಧ್ವಜ ತಯಾರಿಸುವ ಮೂಲಕ ದೇಶಸೇವೆಯ ಮಹಾನ್ ಕಾರ್ಯ ಮಾಡುತ್ತಿದ್ದಾರೆ. ಈ ಪವಿತ್ರ ಕೆಲಸಕ್ಕೆ ಅಡ್ಡಿ ಮಾಡುವವರು ದೇಶಭಕ್ತರಲ್ಲ. ಮಾತಿಗೆ ಆತ್ಮನಿರ್ಭರ ಮಾತನಾಡುವ ಪ್ರಧಾನಿ ಪಾಲಿಸ್ಟರ್ ಧ್ವಜಕ್ಕೆ ಬೇಕಾಗುವ ಬಟ್ಟೆಯನ್ನು ಚೀನಾದಿಂದ ತರಿಸುತ್ತಿದ್ದಾರೆ. ಹೆಸರಿಗೆ ಸ್ಕಿಲ್ ಇಂಡಿಯಾ ಆಗಿದ್ದು, ಬಿಜೆಪಿ ದೇಶವನ್ನು ಕಿಲ್ ಇಂಡಿಯಾ ಮಾಡುತ್ತಿದೆ. ಧ್ವಜ ಸಂಹಿತೆಗೆ ವಿರುದ್ಧವಾಗಿ ತಯಾರಿಸುವ ಧ್ವಜ ತಿರಸ್ಕರಿಸಬೇಕು. –
ಬಿ.ಕೆ. ಹರಿಪ್ರಸಾದ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ