Advertisement

ಕಾಡ್ಗಿಚ್ಚು ತಡೆಗೆ ವಿಶೇಷ ಕಾರ್ಯಪಡೆ ರಚನೆಗೆ ಅಸ್ತು

03:45 AM Mar 28, 2017 | Team Udayavani |

ವಿಧಾನಪರಿಷತ್ತು: ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಪದೇ ಪದೇ ಹೆಚ್ಚಾಗುತ್ತಿರುವ ಕಾಡ್ಗಿಚ್ಚು ಪ್ರಕರಣಗಳಿಗೆ ಕಡಿವಾಣ ಹಾಕಲು ಅಗ್ನಿಶಾಮಕ ಇಲಾಖೆಯನ್ನೊಳಗೊಂಡಂತೆ ಒಂದು ವಿಶೇಷ ಕಾರ್ಯಪಡೆ ರಚಿಸಲಾಗುವುದು ಕೃಷಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

Advertisement

ಕಾಡ್ಗಿಚ್ಚು ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಅರಣ್ಯ ಸಚಿವರ ಪರವಾಗಿ ಉತ್ತರ ನೀಡಿದ ಕೃಷ್ಣಭೈರೇಗೌಡ, ಕಾಡ್ಗಿಚ್ಚು ಪ್ರಕರಣಗಳು ನಡೆಯದಂತೆ, ಒಂದೊಮ್ಮೆ ಆವಘಡಗಳು ನಡೆದು ಹೋದಾಗ ಅವುಗಳನ್ನು ನಿರ್ವಹಿಸಲು ವಿಶೇಷ ಕಾರ್ಯಪಡೆ ರಚಿಸಲಾಗುವುದು ಎಂದು ಹೇಳಿದರು.ರಾಜ್ಯದಲ್ಲಿ ಒಟ್ಟು 43 ಲಕ್ಷ ಹೆಕ್ಟೇರ್‌ ಅರಣ್ಯ ಪ್ರದೇಶ ಇದ್ದು, ಅದರಲ್ಲಿ ಈ ವರ್ಷ ಕೇವಲ 6 ಸಾವಿರ ಹೆಕ್ಟೇರ್‌ ಅರಣ್ಯ ಕಾಡ್ಗಿಚ್ಚಿಗೆ ನಾಶವಾಗಿದೆ. ಈ ಪೈಕಿ ಬಂಡೀಪುರ ಒಂದರಲ್ಲೇ 4 ಸಾವಿರಕ್ಕೂ ಹೆಚ್ಚು ಪ್ರದೇಶ ಬೆಂಕಿಯಿಂದ ನಾಶ ಆಗಿದೆ. 

ಹಾಗಾಗಿ ಕಾಡ್ಗಿಚ್ಚಿನ ಪರಿಣಾಮವಾಗಿ ಇಡೀ ಕಾಡು ನಾಶ ಆಗಿದೆ ಎಂಬ ಅಭಿಪ್ರಾಯ ಸರಿಯಲ್ಲ. ಹಾಗಂತ ನಾನು ಕಾಡ್ಗಿಚ್ಚ ಪ್ರಕರಣಗಳನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಮೂರು ವರ್ಷಗಳಿಂದ ಸತತ ಬರ ಹಾಗೂ ತೀವ್ರ ಮಳೆ ಕೊರತೆ ಕಾಡ್ಗಿಚ್ಚಿಗೆ ಪ್ರಮುಖ ಕಾರಣ. ಕಿಡಿಗೇಡಿಗಳಿಂದಲೂ ಕೃತ್ಯ ನಡೆದಿದೆ. 15 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದಾಗ್ಯೂ ಸರ್ಕಾರ ಇದನ್ನು ಸಾಕಷ್ಟು ಗಂಭೀರವಾಗಿ ಪರಿಗಣಿಸಿದೆ. ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೇಸಿಗೆಯ ಮುಂದಿನ ಎರಡು ತಿಂಗಳ ನಮ್ಮ ಪಾಲಿಗೆ ಸವಾಲಿನ ತಿಂಗಳುಗಳಾಗಿದ್ದು ಈ ಅವಧಿಯಲ್ಲಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ಕೆಲಸ ಮಾಡುತ್ತೇವೆ ಎಂದು ಸಚಿವರು ಭರವಸೆ ನೀಡಿದರು.

ಉದಯವಾಣಿ ವರದಿ ಪ್ರಸ್ತಾಪ.
ಈ ವೇಳೆ ಮಾತನಾಡಿದ ಬಿಜೆಪಿ ಎಸ್‌.ವಿ. ಸಂಕನೂರು, ಕಳೆದ 20 ವರ್ಷಗಳಲ್ಲೇ ಈ ವರ್ಷ ಅತಿ ಹೆಚ್ಚು ಕಾಡ್ಗಿಚ್ಚು ಘಟನೆಗಳು ನಡೆದಿವೆ. ಬಂಡಿಪುರದಲ್ಲಿ ಈ ವರ್ಷ 19 ಬೆಂಕಿ ಪ್ರಕರಣಗಳು ನಡೆದಿದ್ದರೆ, ಕಪ್ಪತ್ತಗುಡ್ಡದಲ್ಲಿ 20 ಬಾರಿ ಬೆಂಕಿ ಬಿದ್ದಿದೆ. ಅದೇ ರೀತಿ ಕಾಡ್ಗಿಚ್ಚು ಬಗ್ಗೆ ಎಚ್ಚರಿಕೆಯ ಸಂದೇಶ ರವಾನಿಸುವ ಬಗ್ಗೆ ನಾಸಾ ಸಂಸ್ಥೆ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಕುರಿತು “ಉದಯವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳನ್ನು ಉಲ್ಲೇಖೀಸಿ, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.

ವಿಷಯ ಪ್ರಸ್ತಾಪಿಸಿ ಮೊದಲಿಗೆ ಕಾಂಗ್ರೆಸ್‌ನ ಡಾ. ಜಯಮಾಲಾ ರಾಮಚಂದ್ರ ಮಾತನಾಡಿದರು. ಬಳಿಕ ಪ್ರತಾಪಚಂದ್ರ ಶೆಟ್ಟಿ, ಶರಣಪ್ಪ ಮಟ್ಟೂರು, ಪ್ರಸನ್ನಕುಮಾರ್‌, ಕೆ.ಸಿ, ಕೊಂಡಯ್ಯ, ಜೆಡಿಎಸ್‌ನ ಶ್ರೀಕಂಠೇಗೌಡ, ಬಿಜೆಪಿಯ ಕ್ಯಾ. ಗಣೇಶ್‌ ಕಾರ್ಣಿಕ್‌ ಈ ಕುರಿತು ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next