Advertisement

ಜೀವನದಲ್ಲಿ ವಿಶ್ವಾಸ ಕಳೆದುಕೊಂಡರೆ ಸಾಧನೆ ಅಸಾಧ್ಯ: ನಟ ಅಮೀರ್‌ಖಾನ್‌

01:13 PM Feb 12, 2021 | Team Udayavani |

ಹುಬ್ಬಳ್ಳಿ: ಜೀವನದಲ್ಲಿ ಕಲಿಕೆಯಲ್ಲಿ ತೊಡಗಿದರೆ ಮಾತ್ರ ಹೊಸತನ್ನು ತಿಳಿದುಕೊಳ್ಳಲು ಸಾಧ್ಯ. ವಿಶ್ವಾಸ ಕಳೆದುಕೊಂಡರೆ ಸಾಧನೆ ಅಸಾಧ್ಯ. ಮಾಡುವ ಕಾರ್ಯದಲ್ಲಿ ಒಂದು ಹೊಸತು ಇರುತ್ತದೆ ಎನ್ನುವ ಭರವಸೆಯೇ ನೀರಿನ ಕುರಿತು ಮಾಡುತ್ತಿರುವ ಕಾರ್ಯ ಯಶಸ್ವಿಯಾಗಲು ಕಾರಣವಾಯಿತು ಎಂದು ಬಾಲಿವುಡ್‌ ನಟ ಹಾಗೂ ಪಾನಿ ಫೌಂಡೇಶನ್‌ ಸಂಸ್ಥಾಪಕ ಅಮೀರ್‌ಖಾನ್‌ ಹೇಳಿದರು.

Advertisement

ದೇಶಪಾಂಡೆ ಫೌಂಡೇಶನ್‌ ವತಿಯಿಂದ ಗುರುವಾರ ಆಯೋಜಿಸಿದ್ದ “ಗ್ರಾಮೀಣ ಪ್ರದೇಶದ ಜನರ  ಅಭಿವೃದ್ಧಿಗೆ ದೂರದೃಷ್ಟಿ ಯೋಜನೆ’ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಕಾರ್ಯವನ್ನು ಗುರಿ ಮುಟ್ಟುವ ಉದ್ದೇಶದಿಂದಲೇ ಆರಂಭಿಸಬೇಕು. ಯಶಸ್ಸು ಪಡೆಯದಿದ್ದರೆ ಅದರಿಂದ ಹೊಸತೊಂದನ್ನು ಕಲಿತಿರುತ್ತೇವೆ. ಸರಕಾರ ಅಥವಾ ಒಂದು ಎನ್‌ ಜಿಒದಿಂದ ಪರಿವರ್ತನೆ ಅಸಾಧ್ಯ.  ಜನರ ಸಹಕಾರ, ಪಾಲ್ಗೊಳ್ಳುವಿಕೆ ಇದ್ದರೆ ಮಾತ್ರ ಯಾವುದಾದರೂ ಒಂದು ಯೋಜನೆ ಯಶಸ್ವಿಯಾಗಲು ಸಾಧ್ಯವಾಗುತ್ತದೆ.

ಪಾನಿ ಫೌಂಡೇಶನ್‌ ಆರಂಭಿಸಿದ ಕಾರ್ಯಕ್ಕೆ ಜನ ಬೆಂಬಲ ದೊರೆಯಿತು. ನೀರಿನ ಅಭಾವ, ಮುಂದೆ ಆಗಲಿರುವ ಸಮಸ್ಯೆಯನ್ನು ಮನಮುಟ್ಟುವಂತೆ ತಿಳಿಸುವಲ್ಲಿ ಯಶಸ್ವಿಯಾದೆವು. ಜನರಿಗೆ ಅದು ವಾಸ್ತವ ಎನ್ನಿಸಿ ಪಾನಿಯೊಂದಿಗೆ ಕೈ ಜೋಡಿಸಿದರು. ಮೊದಲ ಹಂತದಲ್ಲಿ ಜನರ ಮನಸ್ಸು ಪರಿವರ್ತನೆಯಲ್ಲಿ ದೊರೆತ ಯಶಸ್ಸು ನಂತರದ 45 ದಿನಗಳ ಶ್ರಮದಾನ ಬಹಳಷ್ಟು ಪರಿಣಾಮಕಾರಿಯಾಗಿತ್ತು. ಪಶ್ಚಿಮ ಮಹಾರಾಷ್ಟ್ರ, ವಿದರ್ಭ ಮತ್ತು ಮರಾಠವಾಡದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸ್ವಯಂ ಪ್ರೇರಣೆಯಿಂದ ಕಠಿಣ ಪರಿಶ್ರಮ ಫಲ ನೀಡಿತು.

ಇದನ್ನೂ ಓದಿ :ಸಕಲರ ಆರೋಗ್ಯಕ್ಕೆ ಅಗ್ಗದ ಡಯಾಲಿಸಿಸ್  

ಮೊದಲ ವರ್ಷದಿಂದಲೇ ಪಾನಿಯ ಕಾರ್ಯಕ್ಕೆ ಬಹಳಷ್ಟು ಯಶಸ್ಸು ಲಭಿಸಿತು. ಸತ್ಯಮೇವ ಜಯತೆ ಯೋಜನೆ ಬಹಳಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಲಭಿಸಿತು. ಪ್ರತ್ಯೇಕವಾಗಿ ಒಂದು ವಿಷಯ ತಿಳಿದುಕೊಂಡು ಅದರ ಬಗ್ಗೆಯೇ ಕಾರ್ಯಕ್ರಮ ನಡೆಸಿದವು. ತಳಮಟ್ಟದಿಂದ ಕೆಲಸ ಮಾಡಿದ ಪರಿಣಾಮ ಗ್ರಾಮೀಣ ಪ್ರದೇಶಗಳ ಜನರನ್ನು ತಲುಪಲು ಸಾಧ್ಯವಾಯಿತು. ಜನರೊಂದಿಗೆ ಸಂಪರ್ಕ ಬೆಳೆಸುವುದು, ಸ್ಪೂರ್ತಿ ಹೊಂದುವಂತೆ ಮಾಡಲು ಸಂಪರ್ಕ ಕಲ್ಪಿಸುವುದು ನನ್ನ ಮುಖ್ಯ ಕೆಲಸವಾಗಿತ್ತು. ನೀರಿನ ಮಹತ್ವದ ಬಗ್ಗೆ ಜನಾಂದೋಲನ ರೂಪಿಸಲಾಯಿತು. ಸಮಸ್ಯೆಯನ್ನು ವೈಜ್ಞಾನಿಕ ಅಧ್ಯಯನ  ಮಾಡಿದೆವು ಎಂದು ಪಾನಿ ಫೌಂಡೇಶನ್‌ ಕಾರ್ಯದ ಕುರಿತು ವಿವರಿಸಿದರು.

Advertisement

ದೇಶಪಾಂಡೆ ಫೌಂಡೇಶನ್‌ ಸಂಸ್ಥಾಪಕ ಗುರುರಾಜ ದೇಶಪಾಂಡೆ ಮಾತನಾಡಿ, ಜನ ನಿಶ್ಚಿತ ಆದಾಯಕ್ಕೆ  ಸೀಮಿತರಾಗಿರುವ ಕಾರಣ ಬದಲಾವಣೆಗೆ ಬೇಗ ಹೊಂದಿಕೊಳ್ಳುವುದಿಲ್ಲ. ಇನ್ನೊಂದು ಕಾರ್ಯ ಇರುವುದನ್ನು ಕಳೆದು ಹಾಕುತ್ತದೆ ಎನ್ನುವ ಭಯ ಅವರಲ್ಲಿರುತ್ತದೆ. ಆದರೆ ಕೆಲವರು ಇದನ್ನು ಮೀರಿ  ಧೈರ್ಯದಿಂದ ಮುನ್ನುಗ್ಗಿ ಯಶಸ್ಸು ಕಾಣುತ್ತಾರೆ. ಏನಾದರು ಮಾಡಬೇಕು ಎನ್ನುವ ಆಸೆ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಗ್ರಾಮಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು  ಹಮ್ಮಿಕೊಂಡಿದ್ದೇವೆ. ಎಸ್‌ಬಿಐ, ಎಚ್‌ ಡಿಎಫ್‌ಸಿ ಸಹಯೋಗದಲ್ಲಿ ಮಾಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಪಾನಿ ಸಂಸ್ಥೆ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next