Advertisement

ಆ್ಯಂಬುಲೆನ್ಸ್‌,ವಿ.ಐ.ಪಿ.ವಾಹನಕ್ಕಿಲ್ಲ  ಪ್ರತ್ಯೇಕ ಪ್ರವೇಶ ದ್ವಾರ

06:30 AM Oct 23, 2018 | Team Udayavani |

ಕೋಟ: ನ್ಯಾಯಾಧೀಶರು, ವಿ.ಐ.ಪಿ.ಗಳು ಸೇರಿದಂತೆ ಆ್ಯಂಬುಲೆನ್ಸ್‌ ಮುಂತಾದ ತುರ್ತು ಸೇವೆಯ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗೇಟ್‌ನಲ್ಲಿ ಪ್ರತ್ಯೇಕ ಲೈನ್‌ನ ವ್ಯವಸ್ಥೆ ಮಾಡಬೇಕು. ಸಂಚಾರಕ್ಕೆ ಯಾವುದೇ ಅಡೆ-ತಡೆ ಇರಬಾರದು ಎನ್ನುವ ನ್ಯಾಯಾಲಯದ ಆದೇಶವಿದೆ. ಆದರೆ  ಸಾಸ್ತಾನದ ನವಯುಗ ಟೋಲ್‌ ಪ್ಲಾಜಾದಲ್ಲಿ ಈ ವ್ಯವಸ್ಥೆ ಇಲ್ಲ. ಹೀಗಾಗಿ ವಾಹನ ದಟ್ಟಣೆಯ ಸಂದರ್ಭ ಸಾಕಷ್ಟು ಸಮಸ್ಯೆಯಾಗುತ್ತಿದೆ.

Advertisement

ರೋಗಿಯ ಜೀವದ ಜತೆ ಚೆಲ್ಲಾಟ
ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ರೋಗಿಯ ಜೀವ ಉಳಿಸುವ ನಿಟ್ಟಿನಲ್ಲಿ ಒಂದೊಂದು ನಿಮಿಷ  ಕೂಡ ಅಮೂಲ್ಯವಾಗಿರುತ್ತದೆ. ಆದರೆ ಸಾಸ್ತಾನದಲ್ಲಿ ವಾಹನ ದಟ್ಟನೆ ಸಂದರ್ಭ ಆ್ಯಂಬುಲೆನ್ಸ್‌ಗಳು ಇತರ ವಾಹನಗಳ ಹಿಂದೆ ದಾರಿ ಮಾಡಿಕೊಂಡು ಹೋಗಬೇಕು. ಇದರಿಂದ ನಿಮಿಷಗಟ್ಟಲೆ ಕಾಯ ಬೇಕಾದ ಪರಿಸ್ಥಿತಿ ಇದೆ ಹಾಗೂ ರೋಗಿಯ ಜೀವಕ್ಕೂ ಅಪಾಯವಿದೆ.

ನಿತ್ಯ ಪರದಾಟ
ವಾಹನ ದಟ್ಟನೆ ಹೆಚ್ಚಿದ್ದಾಗ ಆ್ಯಂಬುಲೆನ್ಸ್‌ಗಳು ಯಾವ ಲೈನ್‌ ಮೂಲಕ ಪ್ರವೇಶಿಸಬೇಕು ಎನ್ನುವ ಗೊಂದಲಕ್ಕೆ ಸಿಲುಕುತ್ತದೆ. ಕೆಲವೊಮ್ಮೆ  ಒಂದು ಮಾರ್ಗದಲ್ಲಿ  ಅರ್ಧ ದೂರಕ್ಕೆ ಸಾಗಿ ಟ್ರಾಫಿಕ್‌ ಜಾಮ್‌ ಆದಾಗ  ಪುನಃ ಹಿಂದಕ್ಕೆ ಬಂದು ಬೇರೆ ಮಾರ್ಗ ಅನುಸರಿಸುತ್ತವೆ. ಟೋಲ್‌ನ ಸಿಬಂದಿಗಳು ಇಂತಹ ಸಂದರ್ಭಗಳಲ್ಲಿ ದಾರಿ ಮಾಡಿಕೊಡಲು ಶ್ರಮಿಸುತ್ತಾರೆ.

ಫಾಸ್ಟ್‌  ಟ್ಯಾಗ್‌ ಮುಚ್ಚಿದ 
ಮೇಲೆ ಬೇರೆ ವ್ಯವಸ್ಥೆ ಇಲ್ಲ

ಟೋಲ್‌ಗೇಟ್‌ ಆರಂಭಿಸುವಾಗ ಕಾನೂನು ಪಾಲಿಸಿ ಅನುಮತಿ ಪಡೆಯುವ ಸಲುವಾಗಿ ಫಾಸ್ಟ್‌ಟ್ಯಾಗ್‌ ಮಾರ್ಗವನ್ನು ವಿ.ಐ.ಪಿ. ಲೈನ್‌ ಎಂದು ತೋರಿಸಲಾಗಿತ್ತು ಹಾಗೂ ಅಲ್ಲಿಯೇ ಆ್ಯಂಬುಲೆನ್ಸ್‌ ಮುಂತಾದ ವಾಹನಗಳಿಗೆ ಅವಕಾಶ ನೀಡಲಾಗಿತ್ತು. ನಾಲ್ಕೈದು ತಿಂಗಳ ಅನಂತರ ಈ ಮಾರ್ಗದಲ್ಲಿ ಫಾಸ್ಟ್‌ ಟ್ಯಾಗ್‌  ಕಾರ್ಯಚರಣೆ ಆರಂಭಗೊಂಡಿತು ಮತ್ತು ಇತರ ವಾಹನಗಳ ಸಂಚಾರ ತಡೆಯಲಾಯಿತು.

ಹಂಪ್ಸ್‌ಗಳನ್ನು ತೆರವುಗೊಳಿಸಬೇಕು ಹಾಗೂ ವಿ.ಐ.ಪಿ. ವಾಹನಗಳಿಗೆ ಬೇರೆ ವ್ಯವಸ್ಥೆ ಮಾಡಬೇಕು ಎಂದು ಹೆದ್ದಾರಿ ಜಾಗೃತಿ ವೇದಿಕೆ ಸೆ.20ರಂದು ನವಯುಗ ಕಂಪನಿಗೆ ಮನವಿ ಮಾಡಿತ್ತು.ಆದರೆ ಇದುವರೆಗೆ ಕ್ರಮಕೈಗೊಂಡಿಲ್ಲ.

Advertisement

ಹಂಪ್ಸ್‌ಗಳಿಂದ ಅಪಾಯ
ಈ ಟೋಲ್‌ಗೇಟ್‌ನ ಎರಡು ಕಡೆಗಳಲ್ಲಿ ದೊಡ್ಡದಾದ ವೇಗ ನಿಯಂತ್ರಕ (ಹಂಪ್ಸ್‌)ಗಳನ್ನು ಹಾಕಲಾಗಿದೆ.  ಇದರಿಂದ ಆ್ಯಂಬುಲೆನ್ಸ್‌ನಲ್ಲಿರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ ಹಾಗೂ  ಹೊರಗಡೆಯಿಂದ ಬರುವ  ಆ್ಯಂಬುಲೆನ್ಸ್‌  ವಾಹನಗಳು ಹಮ್ಸ್‌ಗಳನ್ನು ಗಮನಿಸದೆ  ಹೆಚ್ಚಿನ ಅಪಾಯ ಎದುರಾದ ಉದಾಹರಣೆ ಇದೆ.

ನ್ಯಾಯಾಲಯದ ಆದೇಶದ ಉಲ್ಲಂಘನೆ 
ಟೋಲ್‌ ಪ್ಲಾಜಾಗಳಲ್ಲಿ ನ್ಯಾಯಾ ಧೀಶರು ಮತ್ತು ವಿ.ಐ.ಪಿ.ಗಳು ಗಂಟೆಗಟ್ಟಲೆ ಕಾಯಬೇಕು ಹಾಗೂ ಗುರುತಿನ ದಾಖಲೆಗಳನ್ನು ತೋರಿಸಬೇಕಾಗಿರುವುದು ಮುಜುಗರಕ್ಕೀಡಾಗುವ ಸನ್ನಿವೇಶ ಎದುರಾಗುತ್ತದೆ. ಆದ್ದರಿಂದ ಹೆದ್ದಾರಿಗಳ ಟೋಲ್‌ ಪ್ಲಾಜಾಗಳಲ್ಲಿ ಇವರಿಗೆ ಪ್ರತ್ಯೇಕ ಲೈನ್‌ ವ್ಯವಸ್ಥೆ ಮಾಡಬೇಕು ಮತ್ತು  ಈ ಆದೇಶ ದೇಶದಾದ್ಯಂತ ಅನ್ಯಯವಾಗುತ್ತದೆ ಎಂದು  ಮದ್ರಾಸ್‌ ಹೆ„ಕೋರ್ಟ್‌ನ ಹುಲುವಾಡಿ ಜಿ.ರಮೇಶ್‌ ಮತ್ತು ಎಂ.ವಿ.ಮುರುಳಿಧರ್‌ ಅವರಿದ್ದ  ದ್ವಿಸದಸ್ಯ ಪೀಠ  2018 ಆಗಸ್ಟ್‌ನಲ್ಲಿ ಖಡಕ್‌ ಆದೇಶ ನೀಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ಗೆ  ಇದನ್ನು  ಪಾಲಿಸುವಂತೆ  ಸೂಚಿಸಿತ್ತು. ಆದ್ದರಿಂದ ಇದೀಗ ಸಾಸ್ತಾನದಲ್ಲಿ ಪ್ರತ್ಯೇಕ ವ್ಯವಸ್ಥೆ ಇಲ್ಲದಿರುವುದು ನ್ಯಾಯಾಲಯದ ಆದೇಶದ ಉÉಲಂಘನೆಯಾಗಿದೆ.

ಮುಕ್ತ ವ್ಯವಸ್ಥೆ ಮಾಡಿ 
ಸಾಸ್ತಾನ ಟೋಲ್‌ನಲ್ಲಿ ಆ್ಯಂಬುಲೆನ್ಸ್‌ಗಳಿಗೆ ಪ್ರತ್ಯೇಕ ಮುಕ್ತ ಪ್ರವೇಶದ ವ್ಯವಸ್ಥೆ ಇಲ್ಲ. ಹೀಗಾಗಿ ವಾಹನ ದಟ್ಟನೆ  ಸಂದರ್ಭ ಸಾಕಷ್ಟು ಸಮಸ್ಯೆಯಾಗುತ್ತಿದೆ. ಕೆಲೆವೊಮ್ಮೆ ನಾಲ್ಕೈದು ನಿಮಿಷಗಳ ಕಾಲ ಪರದಾಡಿದ ಉದಾಹರಣೆ ಇದೆ ಹಾಗೂ ಹಮ್ಸ್‌  ಇರುವುದರಿಂದ  ರೋಗಿಗಳಿಗೆ ಸಮಸ್ಯೆ ಆಗುತ್ತದೆ.ಸಂಬಂಧಪಟ್ಟವರು  ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು.
– ನಾಗರಾಜ್‌ ಪುತ್ರನ್‌ ಕೋಟ, 
ಜೀವನ್‌ಮಿತ್ರ ಆ್ಯಂಬುಲೆನ್ಸ್‌

ಸಮಸ್ಯೆಯ ಅರಿವಿದೆ
ಸಾಸ್ತಾನದಲ್ಲಿನ ಸಮಸ್ಯೆಯ ಕುರಿತು ನಮಗೆ ಅರಿವಿದೆ ಹಾಗೂ  ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆ್ಯಂಬುಲೆನ್ಸ್‌ಗಳು ಮುಕ್ತವಾಗಿ ಸಂಚರಿಸುವಂತೆ ವ್ಯವಸ್ಥೆ ಮಾಡಲು ಶೀಘ್ರ ಕ್ರಮಕೈಗೊಳ್ಳಲಾಗುವುದು.
– ಶಿವು,ನವಯುಗ ಟೋಲ್‌ ಮ್ಯಾನೇಜರ್‌

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next