Advertisement

ವೈದ್ಯರ ಕರೆ ತರಲೂ ಬಳಕೆಯಾಗ್ತಿದೆ ಆಂಬ್ಯುಲೆನ್ಸ್‌

10:21 AM Dec 16, 2018 | Team Udayavani |

ಕಲಬುರಗಿ: ರೋಗಿಗಳನ್ನು ಅವರಿದ್ದ ಸ್ಥಳದಿಂದ ಆಸ್ಪತ್ರೆ ವರೆಗೂ ಸಾಗಿಸುವ 108 ಆಂಬ್ಯುಲೆನ್ಸ್‌ ಕಾರ್ಯಾಚರಣೆಗೆ ಬಂದ ನಂತರ ಜಿಲ್ಲಾಸ್ಪತ್ರೆ ಹಾಗೂ ತಾಲೂಕಾಸ್ಪತ್ರೆ ಜತೆಗೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿದ್ದ ಆಂಬ್ಯುಲೆನ್ಸ್‌ಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿವೆ.

Advertisement

ವಿಭಾಗೀಯ ಕೇಂದ್ರ ಸ್ಥಾನವಾಗಿರುವ ಮಹಾನಗರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ಆಂಬ್ಯುಲೆನ್ಸ್‌ಗಳಿವೆ. ಅದರಲ್ಲಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಾಣಂತಿ ಹಾಗೂ ನವಜಾತ ಶಿಶುವನ್ನು ಅವರ ಸ್ಥಳಗಳಿಗೆ ಬಿಟ್ಟು ಬರುವ ನಗು ಮಗು ಆಂಬ್ಯುಲೆನ್ಸ್‌ನಲ್ಲಿ ಮಾತ್ರ ವೆಂಟಿಲೇಟರ್‌ ಹಾಗೂ ಸುಸಜ್ಜಿತ ವ್ಯವಸ್ಥೆಯಿದೆ. ಉಳಿದ ಮೂರು ಆಂಬ್ಯುಲೆನ್ಸ್‌ಗಳಲ್ಲಿ ಒಂದರಲ್ಲಿ ಮಾತ್ರ ವೆಂಟಿಲೇಟರ್‌ ಸೌಲಭ್ಯವಿದೆ. ಉಳಿದೆರಡು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿವೆ.

ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಡಿ ತಾಲೂಕಾಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಜಿಲ್ಲೆಯಾದ್ಯಂತ ಒಟ್ಟು 37 ಆಂಬ್ಯುಲೆನ್ಸ್‌ಗಳಿವೆ. ಆದರೆ ಇವುಗಳಲ್ಲಿ ಏಳು ಕೆಟ್ಟು ನಿಂತಿವೆ. ಕಾರ್ಯನಿರ್ವಹಣೆಯ 30 ಆಂಬ್ಯುಲೆನ್ಸ್‌ಗಳಲ್ಲಿ ಎಂಟು ಆಂಬ್ಯುಲೆನ್ಸ್‌ಗಳಿಗೆ ಮಾತ್ರ ವೆಂಟಿಲೇಟರ್‌ ಸೌಲಭ್ಯವಿದೆ. ಉಳಿದ 22 ಆಂಬ್ಯುಲೆನ್ಸ್‌ಗಳು ಈಗಿನ ವೇಗತೆ -ದಕ್ಷತೆ ಹಾಗೂ ಇತರ ಸೌಲಭ್ಯಗಳನ್ನು ಹೊಂದಿಲ್ಲ.
 
ವೈದ್ಯರಿಗೆ ಬಳಕೆ: ಇಲ್ಲಿನ ಜಿಲ್ಲಾಸ್ಪತ್ರೆ ಆಂಬ್ಯುಲೆನ್ಸ್‌ಗಳನ್ನು ತುರ್ತು ಚಿಕಿತ್ಸೆ ಸಲುವಾಗಿ ನಗರದ ಬಸವೇಶ್ವರ ಆಸ್ಪತ್ರೆ ಹಾಗೂ ಇತರ ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸಲು ಬಳಕೆ ಮಾಡಲಾಗುತ್ತಿದೆ. ಆಂಬ್ಯುಲೆನ್ಸ್‌ಗಳು ಅಷ್ಟೊಂದು
ಸುಸಜ್ಜಿತವಾಗದಿರುವುದನ್ನು ನೋಡಿದಾಗ ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. ತುರ್ತು ಚಿಕಿತ್ಸೆಗಾಗಿ ರಾತ್ರಿ ಸಮಯದಲ್ಲಿ ವೈದ್ಯರನ್ನು ಕರೆ ತರಲು ಆಂಬ್ಯುಲೆನ್ಸ್‌ ಬಳಕೆಯಾಗುತ್ತಿದೆ ಎನ್ನುವ ಅಂಶ ಈ ಸಂದರ್ಭದಲ್ಲಿ ಕಂಡು ಬಂತು. ಆಸ್ಪತ್ರೆ ಆಡಳಿತಾಧಿಕಾರಿಗಳ ನಿರ್ದೇಶನ ಮೇರೆಗೆ ಆಂಬ್ಯುಲೆನ್ಸ್‌ನು ರಾತ್ರಿ ಸಮಯದಲ್ಲಿ ವೈದ್ಯರ ಮನೆಗೆ ಕರೆದುಕೊಂಡು ಬರಲಾಗುತ್ತಿದೆ ಎಂದು ಚಾಲಕರು ವಿವರಣೆ ನೀಡುತ್ತಾರೆ.

ಶ್ರದ್ಧಾಂಜಲಿಗೆ ಉಪಯೋಗ: ಕಡು ಬಡುವರು ಹಾಗೂ ನಿರ್ಗತಿಕರು ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ ಅಂತವರ ಶವ ಸಾಗಿಸುವ ಶ್ರದ್ಧಾಂಜಲಿ ವಾಹನ ಹೆಚ್ಚು ಉಪಯೋಗವಾಗುತ್ತಿದೆ. ಈ ವಾಹನ ಶವವನ್ನು ಅವರ ಮನೆಗೆ ಹಚ್ಚಿ ಬರುತ್ತಿದೆ. ವಾಹನದ ಬಣ್ಣ ಕಪ್ಪಾಗಿದೆ.

ಆಧುನಿಕ ಮಾದರಿ ಅಂದರೆ ವೇಗ ಹಾಗೂ ಇತರ ಸುಸಜ್ಜಿತ ಸೌಲಭ್ಯಗಳು ತಮ್ಮ ಆಂಬ್ಯುಲೆನ್ಸ್‌ಗಳಲ್ಲಿ ಇಲ್ಲ. ಆದರೆ ನಗು ಮಗು ಆಂಬ್ಯುಲೆನ್ಸ್‌ಗಳು ಸುಸಜ್ಜಿತವಾಗಿವೆ. ಏಳು ಸಂಪೂರ್ಣ ಕೆಟ್ಟು ಹೋಗಿವೆ. 22 ಆಂಬ್ಯುಲೆನ್ಸ್‌ಗಳಲ್ಲಿ ಇನ್ನೂ ಕೆಲವು ದುರಸ್ತಿಗೆ ಬಂದಿವೆ. ಎರಡು ಸುಸಜ್ಜಿತ ಹಾಗೂ ಆಧುನಿಕತೆಯ ಎರಡು ಆಂಬ್ಯುಲೆನ್ಸ್‌ಗಳಿಗೆ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
 ಡಾ| ಮಾಧವರಾವ್‌ ಪಾಟೀಲ, ಡಿಎಚ್‌ಒ, ಕಲಬುರಗಿ

Advertisement

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next