ನಂಜನಗೂಡು: ತಾಲೂಕಿನ ಜನತೆ ಸೇವೆಗಾಗಿ ಸುಸಜ್ಜಿತ ಮೂರು ಆ್ಯಂಬುಲೆನ್ಸ್ ವಾಹನ ನೀಡಲಾಗಿದೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು. ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಮೂರು ಆ್ಯಂಬುಲೆನ್ಸ್ ವಾಹನಗಳನ್ನು ಸೇವೆಗೆ ಸಮರ್ಪಿಸಿದ ಶಾಸಕರು, ಇದೇ ವೇಳೆ 30 ಲಕ್ಷ ರೂ. ಮೌಲ್ಯದ ಔಷಧವನ್ನು ಸಾರ್ವಜನಿಕ ಆಸ್ಪತ್ರೆಗೆ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು, ಸರ್ಕಾರದಿಂದ 40 ಲಕ್ಷ ರೂ. ಬೆಲೆಯ ಆ್ಯಂಬುಲೆನ್ಸ್ ವಾಹನ ಮಂಜೂರಾಗಿದೆ. ಜೊತೆಗೆ ತಮ್ಮ ಶಾಸಕ ನಿಧಿಯಿಂದ 30 ಲಕ್ಷ ರೂ ಮೊತ್ತದ ವಾಹನವನ್ನು ತಾಲೂಕಿನ ಜನತೆಗಾಗಿ ತಾವು ನೀಡುತ್ತಿದ್ದೇನೆ. ಮೂರನೇ ಆ್ಯಂಬುಲೆನ್ಸ್ ವಾಹನವನ್ನು ಕೈಗಾರಿಕಾ ಕೇಂದ್ರದ ಕೊಟ್ಟಕೇನಲ್ ಸಂಸ್ಥೆ ನೀಡುತ್ತಿದೆ.
ತಗಡೂರು, ಹುಲ್ಲಹಳ್ಳಿ ಆಸ್ಪತ್ರೆ ಹಾಗೂ ನಂಜನಗೂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ತಲಾ ಒಂದು ಆ್ಯಂಬುಲೆನ್ಸ್‌ಗಳು ಕಾರ್ಯನಿರ್ವಹಿಸಲಿವೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆ ಆಡಳಿತ ವೈದ್ಯರಾದ ಡಾ ಸುರೇಶ್, ಡಿಎಚ್‌ಒ ಪ್ರಸಾದ, ಟಿಎಚ್‌ಒ ಈಶ್ವರ್, ನಗರಸಭಾ ಅಧ್ಯಕ್ಷ ಮಹದೇವ ಸ್ವಾಮಿ, ಜಿಪಂ ಮಾಜಿ ಸದಸ್ಯ ಚಿಕ್ಕರಂಗನಾಯಕ ಮತ್ತಿತರರಿದ್ದರು.
ಇದನ್ನೂ ಓದಿ;- ದಸರಾ ಹಿನ್ನೆಲೆ : ಗೋವಾದಲ್ಲಿ ಗಗನಕ್ಕೇರಿದ ಚೆಂಡು ಹೂವಿನ ದರ
ನಕಲಿ ಕ್ಲಿನಿಕ್ ಮೇಲೆ ಕ್ರಮ ಕೈಗೊಳ್ಳಿ: ಹರ್ಷವರ್ಧನ್ ನಂಜನಗೂಡು: ತಾಲೂಕಿನಲ್ಲಿ ಬೀಡು ಬಿಟ್ಟರುವ ನಕಲಿ ವೈದ್ಯರ ಮೇಲೆ ತಕ್ಷಣ ಕ್ರಮ ಜರುಗಿಸಬೇಕು ಎಂದು ಶಾಸಕ ಬಿ. ಹಷವರ್ಧನ್ ಅವರು ಜಿಲ್ಲಾ ವೈದ್ಯಾಧಿಕಾರಿ ಪ್ರಸಾದ್ ಅವರಿಗೆ ಸೂಚಿಸಿದರು. ತಾಲೂಕಿನ ಅನೇಕ ಕಡೆ ನಕಲಿ ವೈದ್ಯರು ಎಗ್ಗಿಲ್ಲದೆ ಸೇವೆ ಸಲ್ಲಿಸುತ್ತಿರುವ ಕುರಿತು ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಶಾಸಕರು, ತಾಲೂಕಿನಲ್ಲಿ ತಕ್ಷಣ ಅಂಥಹ ವೈದ್ಯರ ಮೇಲೆ ಕ್ರಮ ಕೈಗೊಳ್ಳಬೇಕು.
ಕೆಲ ದಿನಗಳ ಹಿಂದೆ ಹುರಾ ಗ್ರಾಮದಲ್ಲಿ ತಾಲೂಕು ಆಡಳಿತ ದಾಳಿ ನಡೆಸಿ ನಕಲಿ ಕ್ಲಿನಿಕ್ ಬಾಗಿಲು ಮುಚ್ಚಿಸಿತ್ತು. ಆದರೆ, ಮೂರೇ ದಿನದಲ್ಲಿ ಮತ್ತೆ ಆ ಕ್ಲಿನಿಕ್ ಬಾಗಿಲು ತೆರೆದಿದೆ. ಇದರ ಹಿಂದೆ ಭಾರೀ ಅವ್ಯವಹಾರ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಇಂದೇ ನಕಲಿ ವೈದ್ಯರ ವಿರುದ್ಧ ಕ್ರಮ ಜರುಗಿಸಬೇಕು. ಅಂಥಹ ಕ್ಲಿನಿಕ್‌ಗಳ ಬಾಗಿಲು ತೆರೆಯದಂತೆ ನೀವೇ ನೊಡಿಕೊಳ್ಳಬೇಕು ಎಂದು ಪ್ರಸಾದ್ ಅವರಿಗೆ ನಿರ್ದೇಶನ ನೀಡಿದರು.