Advertisement
ಅಂಬೋಲಿಯ ವರ್ಣನೆ ಪದಗಳಿಗೆ ನಿಲುಕದ್ದು. ಕ್ಷೀರಧಾರೆಯಂತೆ ಧುಮ್ಮಿಕ್ಕುವ ಜಲಪಾತ, ಸುತ್ತಲೂ ಹಸುರ ಹಾಸಿಗೆ, ಇನ್ನೇನು ತಲೆಗೆ ತಾಕುತ್ತವೆಯೇನೊ ಎನ್ನುವಂತೆ ತೇಲುವ ಮೋಡಗಳು, ಮಂಜು ಕವಿದ ವಾತಾವರಣ ಇಷ್ಟು ಸಾಕಲ್ಲವೇ ಪ್ರವಾಸಿಗರು ಮಾರುಹೋಗಲು. ವರ್ಷ ಪೂರ್ತಿಯೂ ಇಲ್ಲಿಗೆ ಪ್ರವಾಸಿಗರು ಆಗಮಿಸುತ್ತಾರೆ. ಜೂನ್ ತಿಂಗಳಿನಿಂದ ಅಕ್ಟೋಬರ್‌ವರೆಗೂ ಇಲ್ಲಿಗೆ ಭೇಟಿ ನೀಡಲು ಹೆಚ್ಚು ಸೂಕ್ತವಾದ ಸಮಯ. ಅಂಬೋಲಿ ಪ್ರವಾಸದೊಂದಿಗೆ ಅದರ ಸುತ್ತಮುತ್ತಲಿನ ಇನ್ನೂ ಏಳೆಂಟು ಸುಂದರ ತಾಣಗಳಿಗೆ ಭೇಟಿ ನೀಡಬಹುದು. ಇದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಸ್ಥಳಗಳನ್ನೂ ನೋಡಿದಂತಾಗುತ್ತದೆ.
ಅಂಬೋಲಿಯಿಂದ 28 ಕಿ.ಮೀ. ದೋರದಲ್ಲಿ ಸಾವಂತವಾಡಿ ರೈಲು ನಿಲ್ದಾಣವಿದೆ. 68 ಕಿ.ಮೀ. ದೂರದಲ್ಲಿ ಬೆಳಗಾವಿ ನಗರವಿದ್ದು ಅಲ್ಲಿಗೆ ಬಸ್, ರೈಲು, ವಿಮಾನ ಯಾನದ ಸೌಲಭ್ಯವಿದೆ. ಅಲ್ಲದೇ ಗೋವಾ ಕೂಡ ಇಲ್ಲಿಂದ 70 ಕಿ.ಮೀ. ದೋರದಲ್ಲಿದ್ದು, ಅಂಬೋಲಿ ತಲುಪಲು ಯಾವುದೇ ತೊಂದರೆ ಇಲ್ಲ. ಬೆಳಗಾವಿಯಿಂದ ಸಾವಂತವಾಡಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತಲುಪಿ ಅಲ್ಲಿಂದ ಅಂಬೋಲಿಗೆ ಮಹಾರಾಷ್ಟದ ಬಸ್‌ಗಳಿಂದ ತೆರಳಬೇಕಾಗುತ್ತದೆ. ಸ್ವಂತ ಮತ್ತು ಬಾಡಿಗೆ ವಾಹನಗಳನ್ನು ಹೊಂದಿದ್ದರೆ ಒಂದೇ ದಿನದಲ್ಲಿ ಆರೇಳು ಸ್ಥಳಗಳನ್ನು ಕಣ್ತುಂಬಿಕೊಳ್ಳಬಹುದು. ಎಲ್ಲ ಸ್ಥಳಗಳಿಗೂ ತಲುಪಲು ಉತ್ತಮವಾದ ರಸ್ಥೆ ಇದ್ದು, ಪ್ರಯಾಣಕ್ಕೆ ಯಾವುದೇ ಅಡೆತಡೆ ಉಂಟಾಗದು.
ನಂಗರ್ತ ಫಾಲ್ಸ್ ಅಂಬೋಲಿಯಿಂದ 10 ಕಿ.ಮೀ. ದೂರದಲ್ಲಿದೆ. ಕವಳೇಶೇಟ್ ಪಾಯಿಂಟ್ ಈ ಕಣಿವೆಯೊಂದರಲ್ಲೇ ಒಟ್ಟು ಏಳು ಜಲಪಾತಗಳು ಧುಮ್ಮಿಕ್ಕುತ್ತವೆ. ಇದನ್ನು ರಿವರ್ಸ್ ಫಾಲ್ಸ್ ಎಂತಲೂ ಕರೆಯುತ್ತಾರೆ. ಹಿರಣ್ಯಕೇಶಿ ದೇವಾಲಯ, ಬಾಬಾ ಫಾಲ್ಸ್, ಸಿ ವಿವ್ ಪಾಯಿಂಟ್, ಮಹದೇವ ಗಡ್ ಪಾಯಿಂಟ್, ಪರೀಕ್ಷಿತ್ ಪಾಯಿಂಟ್ ಪ್ರಮುಖ ಸ್ಥಳಗಳಾಗಿವೆ. ಅಲ್ಲದೇ ಇಲ್ಲಿಂದ ಅರಬೀ ಸಮುದ್ರ ಮತ್ತು ಕೊಂಕಣ ಕೊಂಕಣ ಕರಾವಳಿಯ ವಿಹಂಗಮ ನೋಟ ಕಾಣಸಿಗುತ್ತದೆ.
Related Articles
ಅಂಬೋಲಿ ಮತ್ತು ಕವಳೇಶೇಟ್ ಪಾಯಿಂಟ್ ಬಳಿ ಅನೇಕ ಗೂಡಂಗಡಿಗಳಿವೆ. ಇಲ್ಲಿ ಬಿಸಿ ಬಿಸಿ ವಡಾಪಾವ್, ಆಮ್ಲೆಟ್, ಎಗ್‌ಬುರ್ಜಿ, ಮ್ಯಾಗಿ, ಚಹಾ ಮತ್ತು ತಂಪು ಪಾನೀಯ ದೊರೆಯತ್ತದೆ. ತಂಗಲು ಅಂಬೋಲಿ ಗ್ರಾಮದ ಅಕ್ಕ ಪಕ್ಕ ವಿಶಲಿಂಗ್ ವುಡ್, ಡಾರ್ಕ್ ಫಾರೆಸ್ಟ್ ರೀಟ್ರೀಟ್, ಸಿಲ್ವರ್ ಸ್ಪ್ರಿಂಗ್ ಸೇರಿದಂತೆ ಹಲವಾರು ಖಾಸಗಿ ಹೊಟೇಲ್, ರೆಸ್ಟಾರೆಂಟ್‌ಗಳು ಇವೆ. ಮಳೇಗಾಲದಲ್ಲಿ ಜಿಗಣೆಗಳ ಕಾಟವಿರುತ್ತದೆ. ಜಲಪಾತಗಳಲ್ಲಿ ನೀರಿನ ಹರಿವು ಹೆಚ್ಚಾಗಿರುತ್ತದೆ. ಕಲ್ಲುಬಂಡೆಗಳು ಪಾಚಿಗಟ್ಟಿ ಜಾರುವುದರಿಂದ ಮೋಜಿಗಿಂತ ಸುರಕ್ಷತೆಗೆ ಆದ್ಯತೆ ಹೆಚ್ಚು ನೀಡುವುದು ಒಳ್ಳೆಯದು. ಬೆಚ್ಚನೆ ಉಡುಪು, ರೈನ್ ಕೋಟ್, ಕೊಡೆ ಅಗತ್ಯವಾಗಿ ಇರಲೇಬೇಕು.
Advertisement
-ಎಸ್. ಹರ್ಲಾಪುರ