Advertisement
ಈ ಬಾರಿಯ ನಮ್ಮ “ವೀಕೆಂಡ್ ವಿತ್ ಗೈಸ್’ನಲ್ಲಿ ನಾವು ನೋಡಹೊರಟಿದ್ದು ಅಂಬೋಲಿ ಫಾಲ್ಸ್ ಅನ್ನು. ನನ್ನ ರೂಮ್‌ಮೇಟ್‌ಗಳನ್ನು ಹುರಿದುಂಬಿಸಿ, ಜಲಪಾತ ನೋಡಲು ಹೊರಟಿದ್ದೆ. ಬೆಳಗಾವಿಯ ನನ್ನ ಚಡ್ಡಿ ದೋಸ್ತ್ನ ಆಮಂತ್ರಣ ಇದ್ದಿದ್ದರಿಂದ, ಅಲ್ಲಿಗೆ ಹೋಗಲು ಕಾತರಿಸುತ್ತಿದ್ದೆ. ಈ ಫಾಲ್ಸ್‌ನ ಸೌಂದರ್ಯ ವರ್ಣನೆ ಬಗ್ಗೆ ಕೇಳಿ ಕೇಳಿ ನನಗೆ ಹುಚ್ಚೇ ಹಿಡಿದಂತಾಗಿತ್ತು. ನನಗೂ ಅದನ್ನು ಅದನ್ನು ನೋಡುವ ಆಸೆ ಇಮ್ಮಡಿಯಾಗಿ, ಗೆಳೆಯರನ್ನೂ ಜತೆಗೂಡಿಸಿಕೊಂಡೆ.ಗಡಿ ದಾಟಿ ಸ್ವಲ್ಪ ದಾರಿ ಕ್ರಮಿಸಿದೆವು. ಪ್ರಕೃತಿಯ ಆ ಸೌಂದರ್ಯ ಸವಿಯುವುದೇ ಒಂದು ರೀತಿಯ ಆನಂದ. ಹಚ್ಚ ಹಸಿರಿನ ಕಂಗೊಳಿಸುವ ಆ ರಮಣೀಯ ದೃಶ್ಯ ಕಣ್ಮನಗಳಿಗೆ ಹಿತ. ಪಶ್ಚಿಮ ಘಟ್ಟಗಳ ಸಾಲಿನಂತೆ ಭಾಸವಾಗುವ ಆ ನಿಸರ್ಗ ಸೌಂದರ್ಯ ನೋಡುತ್ತಿದ್ದರೆ, ಎಲ್ಲೋ ಕಳೆದುಹೋದಂಥ ಅನುಭವ. ನಳ ನಳಿಸುವ ಆ ಬೆಟ್ಟದ ನಿಸರ್ಗದ ಮಡಿಲಲ್ಲಿ ಸಾಗುವಾಗ ಹಕ್ಕಿಗಳ ಇಂಪಾದ ಸ್ವರ ಎದೆಗೂಡಿನಲ್ಲಿ ಪುಟ್ಟ ನಾದ ಜಲಪಾತವನ್ನೇ ಸೃಷ್ಟಿಸಿತ್ತು. ಹಕ್ಕಿಗಳಂತೆ ನಾವೂ ಹಾರಾಡಬೇಕೆನಿಸಿತು.
Related Articles
ದೊಡ್ಡ ಬೆಟ್ಟ ಗುಡ್ಡಗಳ ಭವ್ಯವಾದ ಹಸಿರು, ಮಳೆಯಲ್ಲಿ ಇನ್ನೂ ಆಕರ್ಷಕವಾಗಿ ತೋರುತ್ತಿತ್ತು. ಸುಂಯ್ಯನೆ ಬೀಸುವ ತಣ್ಣನೆ ಗಾಳಿ, ಸಣ್ಣನೆ ಮಳೆ ಮೈಯಲ್ಲಿ ನಡುಕ ಹುಟ್ಟಿಸಿತು. ಚಲಿಸುವ ದಾರಿ ಮಧ್ಯದಲ್ಲಿ ಒಂದು ಚಿಕ್ಕ ಟೀ- ಕಾಫೀ ಸ್ಟಾಲ್ ನಮ್ಮನ್ನು ಸೆಳೆಯಿತು. ಅಲ್ಲಿಯ ತನಕ ಓಡುತ್ತಿದ್ದ ಗಾಡಿ ಕೂಲ್ ಆಯಿತು. ನಮ್ಮ ದೇಹ ಆ ಕಾಫಿಯಿಂದ ಬೆಚ್ಚಗಾಯಿತು. ಕಾಫಿಯ ಸ್ವಾದ ಅನುಭವಿಸುತ್ತಾ, “ಮಳೆಯಲಿ ಜೊತೆಯಲಿ’ ಎನ್ನುತ್ತಾ ನಮ್ಮ ಪಯಣ ಫಾಲ್ಸ್‌ನತ್ತ ಸಾಗಿತು.
Advertisement
ಮಂಜಿನ ಪರದೆ…ಅಂಬೋಲಿಯ ಆ ಹಾದಿ ಸಂಪೂರ್ಣವಾಗಿ ದಟ್ಟ ಮಂಜಿನಿಂದ ಆವೃತವಾಗಿತ್ತು. ಆ ಮಂಜಿನ ಪರದೆಯೊಳಗೆ ನುಸಳಿಕೊಂಡು ಸಾಗುವುದೇ ಒಂದು ಸಾಹಸ. ಬೈಕಿನ ಹೆಡ್‌ಲೈಟ್ ಮುಂದೆ ದಾರಿ ತೋರಲು ಹರಸಾಹಸಪಡುತ್ತಿತ್ತು. ಮುಂದೆ ಬರುತ್ತಿದ್ದ ಗಾಡಿಗಳು ಕಣ್ಣಿಗೆ ಕಾಣಿಸುತ್ತಲೇ ಇರಲಿಲ್ಲ. ನಿಧಾನವಾಗಿ ಚಲಿಸುವುದು ಅನಿವಾರ್ಯವೇ ಆಯಿತು. ರೈಡಿಂಗ್ ಅಂತ ಹುಚ್ಚು ಸಾಹಸ ಮಾಡಲು ಹೋದರೆ ಅಷ್ಟೇ ಗತಿ. ಅದು ಅಮೃತಧಾರೆ…
ಸ್ವಲ್ಪ ದೂರದಿಂದಲೇ ನೀರಿನ ಜುಳು ಜುಳು ನಾದ ನಮ್ಮ ಕಿವಿಗೆ ಅಂಬೋಲಿಗೆ ಆಹ್ವಾನ ನೀಡಿತು. ಬಹುದಿನಗಳ ಮಹದಾಸೆ ಈಡೇರುವ ಕ್ಷಣ ಬಂದೇಬಿಟ್ಟಿತ್ತು. ಈ ಎರಡು ಕಣ್ಣಿನಲ್ಲಿ ಆ ಅಗಾಧ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದು ಕಷ್ಟದ ಮಾತೇ ಆಯಿತು. ವರುಣದೇವ ನಿಜಕ್ಕೂ ಜಲವರ್ಣದಲ್ಲಿ ಚಿತ್ತಾರ ಬಿಡಿಸಿದ್ದ. ಮೈಮನದಲ್ಲಿ ರೋಮಾಂಚನದ ಪುಳಕ. ಮಿಟುಕಿಸುವ ಕ್ರಿಯೆಯನ್ನೇ ಕಣ್ರಪ್ಪೆ ಮರೆತುಬಿಟ್ಟಿತು. ಮನಸ್ಸಂತೂ ಸಂತನಂತೆ ಧ್ಯಾನಸ್ಥ. ಧುಮ್ಮಿಕ್ಕುವ ನೀರು ಕೆಳಗೆ ಮೆಟ್ಟಿಲುಗಳ ಮೂಲಕ ರಸ್ತೆಯತ್ತ ಹರಿಯುತ್ತಿತ್ತು. ಜಲಪಾತವನ್ನು ಕಣ್ತುಂಬಾ ಸವಿಯಲು, ಮೆಟ್ಟಿಲುಗಳಿಗೆ ಗ್ಯಾಲರಿ ಮಾಡಿದ್ದಾರೆ. ಅಲ್ಲಿ ನಿಂತು ಸ್ನಾನ ಮಾಡುತ್ತಾ, ಹಿಗ್ಗಿದೆವು. ಅದು ಸಾವಿರಾರು ಸೆಲ್ಫಿಗಳ ಜನ್ಮಸ್ಥಳ!
ಅಂಬೋಲಿ ಜಲಪಾತವು ಮಹಾರಾಷ್ಟ್ರ ಹಾಗೂ ಕರ್ನಾಟಕದ ಮಧ್ಯೆ ಇರುವ ಕಾರಣ, ಎರಡೂ ರಾಜ್ಯಗಳ ಪ್ರವಾಸಿಗರು, ಪ್ರಕೃತಿ ಪ್ರೇಮಿಗಳು ಅಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಈ ಬಾರಿ ಮಳೆಯೂ ಹೆಚ್ಚು ಬಂದಿದ್ದರಿಂದ, ಅಂಬೋಲಿ ಮೈತುಂಬಿ, ದಿನದಲ್ಲಿ ಸಾವಿರಾರು ಫೋಟೋಗಳಿಗೆ ಪೋಸು ಕೊಡುತ್ತಿತ್ತು. ಸೂರ್ಯಾಸ್ತದ ವರೆಗೂ ಎಂಜಾಯ್ ಮಾಡುತ್ತಾ, ಕತ್ತಲು ಆವರಿಸುತ್ತಾ ಬಂದಹಾಗೆ, ಸೆಲ್ಫಿಗಳನ್ನು ತೆಗೆಯುತ್ತಾ, ವಿದಾಯ ಹೇಳಿದೆವು. ಮರಳಿ, ಅದೇ ಮಳೆಯನ್ನೇ ಸೀಳಿಕೊಂಡು ನಮ್ಮ ಗೂಡನ್ನು ತಲುಪಿದೆವು. ಲೋಕನಗೌಡ ಎಸ್.ಡಿ.