ಐದು ವರ್ಷಗಳ ಆಳ್ವಿಕೆಯ ಉತ್ತರಾರ್ಧದಲ್ಲಿರುವ ನರೇಂದ್ರ ಮೋದಿ ಸರಕಾರ ಭಾರೀ ಮಹತ್ವಾಕಾಂಕ್ಷೆಯ ಭಾರತ್‌ಮಾಲಾ ಯೋಜನೆಯನ್ನು ಜಾರಿಗೊಳಿಸಲು ಒಪ್ಪಿಗೆ ನೀಡುವ ಮೂಲಕ ಬೃಹತ್ ಪ್ರಮಾಣದ ಆರ್ಥಿಕ ಸುಧಾರಣೆಯತ್ತ ದಾಪುಗಾಲು ಇಟ್ಟಿದೆ. ಭಾರತ್‌ಮಾಲಾ ಸೇರಿದಂತೆ ಒಟ್ಟು 7 ಲಕ್ಷ ಕೋಟಿ ರೂ. ಮೌಲ್ಯದ ಹೆದ್ದಾರಿ ಯೋಜನೆಯನ್ನು ಜಾರಿಗೊಳಿಸಲು ಸರಕಾರ ಮುಂದಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ 50,000 ಕಿ. ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಿದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮದ ಬಳಿಕ ಈ ಪ್ರಮಾಣದಲ್ಲಿ ರಸ್ತೆ ನಿರ್ಮಾಣವಾಗಲಿರುವುದು ಇದೇ ಮೊದಲು. ಗಡಿ ರಸ್ತೆಗಳು, ಅಂತಾರಾಷ್ಟ್ರೀಯ ಸಂಪರ್ಕ ರಸ್ತೆಗಳು, ಕರಾವಳಿ ಮತ್ತು ಬಂದರು ಸಂಪರ್ಕ ರಸ್ತೆಗಳ ನಿರ್ಮಾಣ, ರಾಷ್ಟ್ರೀಯ ಕಾರಿಡಾರ್‌ಗಳ ಅಭಿವೃದ್ಧಿ ಈ ಮುಂತಾದ ಅಂಶಗಳನ್ನು ಒಳಗೊಂಡಿರುವ ಯೋಜನೆ ಭಾರತ್‌ಮಾಲಾ. ಈ ಯೋಜನೆಯಡಿ ಮೊದಲ ಹಂತದಲ್ಲಿ 20,000 ಕಿ. ಮೀ. ಹೆದ್ದಾರಿ ನಿರ್ಮಾಣವಾಗಲಿದೆ. ಪಶ್ಚಿಮ ಭಾಗವನ್ನು ಪೂರ್ವ ಭಾಗಕ್ಕೆ ಸಂಪರ್ಕಿಸುವ ಕನಸಿನ ಯೋಜನೆ. ಮೊದಲ ಹಂತದ ಯೋಜನೆ ಜಾರಿಗೆ 3ರಿಂದ 5 ವರ್ಷದ ಕಾಲಮಿತಿ ಹಾಕಿಕೊಳ್ಳಲಾಗಿದೆ ಹಾಗೂ 5.5 ಲಕ್ಷ ಕೋ. ರೂ. ಖರ್ಚು ಅಂದಾಜಿಸಲಾಗಿದೆ. ಮಾರುಕಟ್ಟೆಯಿಂದ 2.09 ಲಕ್ಷ ಕೋಟಿ, ಖಾಸಗಿ ಹೂಡಿಕೆಯ ಮೂಲಕ 1.06 ಲಕ್ಷ ಕೋಟಿ, ಕೇಂದ್ರೀಯ ರಸ್ತೆ ನಿಧಿ ಅಥವಾ ಟೋಲ್ ಶುಲ್ಕದ ಮೂಲಕ 2.19 ಲಕ್ಷ ಕೋಟಿ ಸೇರಿದಂತೆ ವಿವಿಧ ಮೂಲಗಳಿಂದ ಸರಕಾರ ಈ ಯೋಜನೆಗೆ ಹಣಕಾಸು ಸಂಗ್ರಹಿಸಲಿದೆ. ಯೋಜನೆಯಡಿ ನಿರ್ಮಾಣವಾಗುವ ರಸ್ತೆ ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿರುತ್ತದೆ. ಪ್ರತಿ ಕಿಮೀಗೆ 13 ಕೋ. ರೂ.ಗಳಂತೆ ಖರ್ಚಾಗಲಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಅಂತರ್‌ರಾಜ್ಯ ರಸ್ತೆ, ರಾಜ್ಯ ರಸ್ತೆಗಳು ಭಾರತ್‌ಮಾಲಾದಡಿ ಬರುತ್ತವೆ.
ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳನ್ನು ಬೆಸೆಯುವ ಸಲುವಾಗಿ 2015ರಲ್ಲಿ ಯೋಜನೆಯನ್ನು ಸಂಕಲ್ಪಿಸಲಾಗಿತ್ತು. ಅನಂತರ ಈ ಯೋಜನೆ ವಿಸ್ತರವಾಗುತ್ತಾ ಹೋಗಿ ಪಂಜಾಬ್-ಜಮ್ಮು- ಕಾಶ್ಮೀರ, ಹಿ. ಪ್ರದೇಶ, ಉತ್ತರಖಂಡ, ಬಿಹಾರ, ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಂ, ಕರ್ನಾಟಕ ರಾಜ್ಯಗಳು ಸೇರ್ಪಡೆಯಾಗಿ ಅಂತಿಮವಾಗಿ ಇಡೀ ದೇಶವನ್ನು ಒಳಗೊಂಡಿದೆ. ಎರಡು ನಿರ್ದಿಷ್ಟ ಕೇಂದ್ರಗಳ ನಡುವೆ ಚತುಷ್ಪಥ ರಸ್ತೆ ನಿರ್ಮಿಸುವುದು ಭಾರತ್‌ಮಾಲಾ ಯೋಜನೆಯ ಮೂಲ ಉದ್ದೇಶ. ವಿಶೇಷವೆಂದರೆ ಭಾರತ್‌ಮಾಲಾದಡಿ ನಿರ್ಮಾಣವಾಗಲಿರುವ ಎಲ್ಲ ರಸ್ತೆಗಳು ಬಹುತೇಕ ಒಂದೇ ರೀತಿ ಇರುತ್ತವೆ. ವರ್ಷಕ್ಕೆ 10,000 ಕಿ. ಮೀ. ರಸ್ತೆ ನಿರ್ಮಿಸುವ ಗುರಿಯಿರಿಸಿಕೊಳ್ಳಲಾಗಿದೆ. ಸರಕು ಸಾಗಣೆಯನ್ನು ತ್ವರಿತಗೊಳಿಸುವ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವುದು ಇದ ರ ಮುಖ್ಯ ಉದ್ದೇಶ. 2014ರಲ್ಲಿ ಅಧಿಕಾರಕ್ಕೆ ಬಂದ ಬೆನ್ನಿಗೆ ಮೋದಿ ಸರಕಾರ ಈ ಮಾದರಿಯ ಹಲವು ಬೃಹತ್ ಯೋಜನೆಗಳನ್ನು ಘೋಷಿಸಿತ್ತು. ಆದರೆ ಈ ಯೋಜನೆಗಳಿಂದ ನಿರೀಕ್ಷಿತ ಫಲಿತಾಂಶ ಇನ್ನೂ ಸಿಕ್ಕಿಲ್ಲ ಎನ್ನುವುದು ಅಷ್ಟೇ ವಾಸ್ತವ. ಇದಕ್ಕೆ ಉದಾಹರಣೆಯಾಗಿ ಬಂದರುಗಳನ್ನು ಬೆಸೆಯಲು ರೂಪಿಸಿದ ಸಾಗರ್‌ಮಾಲಾ ಯೋಜನೆಯನ್ನು ಹೆಸರಿಸಬಹುದು.
ಭಾರತ್‌ಮಾಲಾ ಯೋಜನೆ ಘೋಷಣೆಯಾಗುತ್ತಿದ್ದಂತೆ ಕೈಗಾರಿಕೋದ್ಯಮ ವಲಯದಿಂದ ಸಕಾರಾತ್ಮಕ ಪ್ರತಿಸ್ಪಂದನ ವ್ಯಕ್ತವಾಗಿದೆ. ಹಲ ಕೈಗಾರಿಕೋದ್ಯಮಿಗಳು ಈ ಯೋಜನೆಯಿಂದ ದೇಶದ ಆರ್ಥಿಕ ಬೆಳವಣಿಗೆ ಇನ್ನೊಂದು ಮಜಲು ತಲುಪುವ ಭವಿಷ್ಯ ನುಡಿದಿದ್ದಾರೆ. ರಸ್ತೆಗಳೇ ಒಂದು ದೇಶದ ಆರ್ಥಿಕ ಭವಿಷ್ಯವನ್ನು ರೂಪಿಸುವ ಪ್ರಧಾನ ಅಂಶ. ಹೀಗಾಗಿ ಭಾರತ್‌ಮಾಲಾ ಯೋಜನೆ ಕೈಗಾರಿಕೋದ್ಯಮ ವಲಯಕ್ಕೆ ಅತಿ ಮುಖ್ಯವಾಗಿದೆ. ಹೆದ್ದಾರಿಗಳು ಅಭಿವೃದ್ಧಿಯಾದಂತೆಲ್ಲ ಹೊಸ ಹೊಸ ಕೈಗಾರಿಕಾ ಕಾರಿಡಾರ್‌ಗಳು ನಿರ್ಮಾಣವಾಗುತ್ತವೆ ಮತ್ತು ಈ ಮೂಲಕ ಹೊಸ ನಗರಗಳು ತಲೆ ಎತ್ತುತ್ತವೆ. ಹೆಚ್ಚೆಚ್ಚು ಜನರಿಗೆ ಉದ್ಯೋಗ ದೊರಕುತ್ತದೆ. ಭಾರತ್‌ಮಾಲಾ ನೇರವಾಗಿ 14.2 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸಲಿದ್ದರೆ ಪರೋಕ್ಷವಾಗಿ ಇದ ಕ್ಕಿಂತ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಉಕ್ಕು, ಸಿಮೆಂಟ್, ಪೈಂಟ್ ಮತ್ತಿತರ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಉದ್ದಿಮೆಗಳಲ್ಲಿ ಹೆಚ್ಚಿನ ಚಟುವಟಿಕೆ ನಡೆಯಲಿದೆ ಎನ್ನುವುದು ಉದ್ಯಮಿಗಳ ಅಭಿಮತ.
ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೇರಿದ ಮೋದಿ ಸರಕಾರದಿಂದ ತ್ವರಿತವಾದ ಆರ್ಥಿಕ ಅಭಿವೃದ್ಧಿಯನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆಯನ್ನು ಪೂರ್ಣವಾಗಿ ಈಡೇರಿಸಲು ಸಾಧ್ಯವಾಗಿಲ್ಲ. ಅದರಲ್ಲೂ ನೋಟು ರದ್ದು ಮತ್ತು ಜಿಎಸ್ಟಿ ಜಾರಿಯಾದ ಬಳಿಕ ಆರ್ಥಿಕ ಹಿಂಜರಿತ ತಲೆದೋರಿದ್ದು, ಜತೆಗೆ ನಿರುದ್ಯೋಗ ಸಮಸ್ಯೆಯೂ ಹೆಚ್ಚಾಗಿದೆ. ಇಂತಹ ಸಂಕಷ್ಟದಿಂದ ದೇಶವನ್ನು ಪಾರು ಮಾಡಲು ಭಾರತ್‌ಮಾಲಾದಂತಹ ಬೃಹತ್ ಯೋಜನೆಯೊಂದರ ಅಗತ್ಯವಿದೆ. ದೀರ್ಘಾವಧಿಯಲ್ಲಿ ಇದರಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು.