Advertisement

ಅಂಬಿಗರ ಚೌಡಯ್ಯ ಜಯಂತಿ ಮೊಟಕು

06:32 AM Jan 22, 2019 | Team Udayavani |

ಕಲಬುರಗಿ: ನಡೆದಾಡುವ ದೇವರು, ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.

Advertisement

ನಗರದ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಮಧ್ಯಾಹ್ನ 2:00ಕ್ಕೆ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ 12:00ಕ್ಕೆ ಗಂಜ್‌ ಪ್ರದೇಶದ ನಗರೇಶ್ವರ ಬಾಲ ವಿಕಾಸ ಮಂದಿರದಿಂದ ಸೂಪರ್‌ ಮಾರ್ಕೆಟ್ ಮಾರ್ಗವಾಗಿ ಜಗತ್‌ ವೃತ್ತದ ಮೂಲಕ ರಂಗ ಮಂದಿರಕ್ಕೆ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ನಡೆಯಿತು. ರಂಗ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮಡು, ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಚಪ್ಪ, ತೊನಸನಹಳ್ಳಿ ಎಸ್‌. ಗ್ರಾಮದ ಅಲ್ಲಮಪ್ರಭು ಪೀಠಾಧಿಪತಿ ಮಲ್ಲಣ್ಣಪ್ಪ ಮಹಾಸ್ವಾಮಿ, ಗುಲಬರ್ಗಾ ವಿಶ್ವವಿದ್ಯಾಲಯದ ಶ್ರೀನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ನಿರ್ದೇಶಕ ಡಾ| ಎಚ್.ಟಿ. ಪೋತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ಕಾಂಗ್ರೆಸ್‌ ಮುಖಂಡ, ಕೋಲಿ ಸಮಾಜದ ನಾಯಕ ತಿಪ್ಪಣ್ಣಪ್ಪ ಕಮಕನೂರು, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಅವ್ವಣ್ಣ ಮ್ಯಾಕೇರಿ ಆಗಮಿಸಿದ್ದರು. ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ವಿಷಯ ತಿಳಿಯುತ್ತಿದ್ದಂತೆ ಕಾರ್ಯಕ್ರಮವನ್ನು ಮೊಟಕುಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು. ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ. ನಂತರ ಡಾ| ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.

ಚೌಡಯ್ಯ ಭಾವಚಿತ್ರ ಮೆರವಣಿಗೆ
ಚಿತ್ತಾಪುರ: ತಾಲೂಕು ಆಡಳಿತದ ವತಿಯಿಂದ ಬೆಳಗ್ಗೆ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ನಿಮಿತ್ತ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮಹಿಳೆಯರು ಕುಂಭಕಳಸ ಹೊತ್ತು ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಮಾಡಲಾಯಿತು.

ತಹಶೀಲ್ದಾರ್‌ ಮಲ್ಲೇಶಾ ತಂಗಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಒಂಟೆ ಮೇಲೆ ಚೌಡಯ್ಯನವರ ಚಿತ್ರವಿಟ್ಟು ನಡೆಸಿದ ಮೆರವಣಿಗೆ ಆಕರ್ಷಕವಾಗಿತ್ತು. ಡೊಳ್ಳು ಕುಣಿತ ನೋಡುಗರ ಮನ ರಂಜಿಸಿತು.

Advertisement

ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದ ಹತ್ತಿರ ಇರುವ ಧ್ವಜಕಟ್ಟೆಯಲ್ಲಿ ಹಾಗೂ ಲಾಡ್ಜಿಂಗ್‌ ಕ್ರಾಸ್‌ನಲ್ಲಿ ಹೊಸದಾಗಿ ನಿರ್ಮಿಸಿರುವ ಧ್ವಜಕಟ್ಟೆಯಲ್ಲಿ ಕೋಲಿ ಸಮಾಜದ ಅಧ್ಯಕ್ಷರು, ಮುಖಂಡರು ಧ್ವಜಾರೋಹಣ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next