Advertisement

ನಾವು ಅಂಬೇಡ್ಕರ್‌ ದಾರಿ ತುಳಿಯಲೇ ಇಲ್ಲ

03:54 PM Apr 15, 2017 | Team Udayavani |

ಕಲಬುರಗಿ: ಭಾರತದಲ್ಲಿ ಇನ್ನೂ ಮಡಿ, ಮೈಲಿಗೆ, ಜಾತಿ ವ್ಯವಸ್ಥೆ ನಿಂತಿಲ್ಲ. ನೀರನ್ನು ದೇವರೆಂದು ಪೂಜಿಸುವ ದೇಶದಲ್ಲಿ ದಲಿತರಿಗೆ ಈಗಲೂ ಕರೆ, ಬಾವಿಗಳ, ನಲ್ಲಿಗಳಲ್ಲಿನ ನೀರನ್ನು ಮುಟ್ಟಲು ಅವಕಾಶ ನೀಡುತ್ತಿಲ್ಲ.. ಇದೆಲ್ಲವನ್ನು ನೋಡಿದರೆ ಅಕ್ಷರಸ್ಥರಾದರೂ ನಾವಿನ್ನೂ ಬಾಬಾಸಾಹೇಬರು ಬಯಸಿದ ದಾರಿ ತುಳಿಯಲೇ ಇಲ್ಲವಲ್ಲ ಎಂದು ಧಾರವಾಡದ ಆಹಾರ ಮತ್ತು ನಾಗರಿಕ ಸರಬರಾಜು ಜಿಲ್ಲಾಧಿಕಾರಿ ಸದಾಶಿವ ಮರ್ಜಿ ಕಳವಳ ವ್ಯಕ್ತಪಡಿಸಿದರು. 

Advertisement

ಗುವಿವಿಯಲ್ಲಿ ಶುಕ್ರವಾರ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಡಾ| ಬಿ.ಆರ್‌.ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ವಿಶ್ವ ಮಾನವ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ 126ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

1926ರಿಂದ ತಾವು ಬದುಕಿದ್ದ ದಿನದವರೆಗೆ ನಮ್ಮೊಳಗಿನ ಹಲವಾರು ಬೇಧಗಳನ್ನು ಹೋಗಲಾಡಿಸಲು, ದಲಿತರ, ಹಿಂದುಳಿದ ವರ್ಗಗಳ ಜೊತೆಯಲ್ಲಿಯೇ ಮೇಲ್ವರ್ಗದವರಿಗೂ ಹಲವು ಹಕ್ಕುಗಳನ್ನು ದಯಪಾಲಿಸುವ ಮೂಲಕ ಮಾನವತಾವಾದಿ ಹಾದಿ ತುಳಿದಿದ್ದರು.

ಅಲ್ಲದೆ, ದಲಿತರ, ಅಸ್ಪೃಶ್ಯರ, ಶೋಷಿತರ ಏಳಿಗೆಗಾಗಿ ಶ್ರಮಿಸಿದರು. ಅಷ್ಟೇ ಅಲ್ಲದೆ, ನೀರಿಗಾಗಿ, ದೇವಸ್ಥಾನ ಪ್ರವೇಶಕ್ಕಾಗಿ, ಕೆರೆ ಮುಟ್ಟುವುದಕ್ಕಾಗಿ ಹೋರಾಟಗಳನ್ನು ಮಾಡಿದರು. ಯಾವುದು ನಮ್ಮ ಹಕ್ಕು ಎನ್ನುವುದನ್ನು ಪರಿಚಯ ಮಾಡಿಕೊಟ್ಟರು. ಅಂತಹ ಚೇತನದ ಹಾದಿಯಲ್ಲಿಯುವಕರು ಮುನ್ನಡೆಯಬೇಕು.

ಅದನ್ನು ಬಿಟ್ಟು ಅವರು ಕವಲು ದಾರಿಯಲ್ಲಿ ಹೋಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಆಡಳಿತ ಕುಲಸಚಿವ ಪ್ರೊ| ದಯಾನಂದ ಅಗಸರ್‌ ಮಾತನಾಡಿ, ನಮ್ಮ ಇಂದಿನ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಜಾತಿ ತಾರತಮ್ಯವಿಲ್ಲದೆ, ಮೇಲು ಕೀಳು ಇಲ್ಲದೆ ಎಲ್ಲ ವರ್ಗಗಳ ಹಿತವನ್ನು ಬಯಸುವ ಸರಕಾರಗಳು, ವ್ಯಕ್ತಿಗಳು, ರಾಜಕಾರಣಿಗಳ ಹಾಗೂ ಯುವ ಸಮೂಹದ ಅವಶ್ಯಕತೆ ಇದೆ.

Advertisement

ಅದನ್ನು ನಿರ್ಮಾಣ ಮಾಡುವತ್ತ, ಅದನ್ನು ಸಾಧ್ಯ ಮಾಡುವತ್ತ ನಮ್ಮ ಚಿತ್ತವನ್ನು ನಡೆಬೇಕಿದೆ ಎಂದರು. ಡಾ| ಬಿ.ಆರ್‌.ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ| ಎಸ್‌.ಪಿ.ಮೇಲ್ಕೇರಿ ಮಾತನಾಡಿ, ಅಂಬೇಡ್ಕರ್‌ ಆಶಯಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ, ಅದಕ್ಕಾಗಿ ನಾವು ಅವರ ದಾರಿ ಅನುಸರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಮೌಲ್ಯಮಾಪನ ಕುಲಸಚಿವ ಡಾ| ಸಿ.ಎನ್‌.ಪಾಟೀಲ, ವಿತ್ತಾಧಿಕಾರಿ ಡಾ| ರಾಜನಾಳ್ಕರ್‌ ಲಕ್ಷ್ಮಣ, ಸಿಂಡಿಕೇಟ್‌ ಸದಸ್ಯ ಈಶ್ವರ ಇಂಗಿನ್‌, ವಿದ್ಯಾವಿಷಯಕ ಪರಿಷತ್‌ ಸದಸ್ಯ ವೆಂಕಪ್ಪ ಓಂಕಾರ, ಡಾ| ಪ್ರಕಾಶ ಕರಿಯಜ್ಜನವರ್‌, ಪ್ರೊ| ಸಿದ್ದಪ್ಪ, ಪ್ರೊ| ಶ್ರೀರಾಮುಲು ಹಾಗೂ ಇತರರು ಇದ್ದರು. ಜಗನ್ನಾಥ ಪ್ರಾರ್ಥನಾ ಗೀತೆ ಹಾಡಿದರು. ಪ್ರಕಾಶ ಹದ್ದನೂಕರ್‌ ನಿರೂಪಿಸಿದರು. ಡಾ| ದೇವಿಂದ್ರಪ್ಪ ತೇಲ್ಕಾರ್‌ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next