ಮುಂಬಯಿ: ಕಾಂದಿವಲಿ ಪಶ್ಚಿಮದ ಫತೇಹ್‌ಭಾಗ್‌ನ ಶತಾಬ್ದಿ ಆಸ್ಪತ್ರೆ ಯಲ್ಲಿ ಬುಧವಾರ ಬೆಳಗ್ಗೆ ಸಂವಿಧಾನ ಶಿಲ್ಪಿ, ಭಾರತರತ್ನ ಡಾ| ಬಿ. ಆರ್. ಅಂಬೇಡ್ಕರ್ ಅವರ 130ನೇ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.
ಉತ್ತರ ಮುಂಬಯಿ ಸಂಸದ ಗೋಪಾಲ್ ಸಿ. ಶೆಟ್ಟಿ ಅವರು ಆಸ್ಪತ್ರೆ ಆವರಣದಲ್ಲಿನ ಡಾ| ಬಿ. ಆರ್. ಅಂಬೇಡ್ಕರ್ ಪ್ರತಿಮೆಗೆ ಹಾರಾರ್ಪಣೆಗೈದು ಮಾತನಾಡಿ, ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಡಾ| ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ಕಾರಣ ನಾವು ಇಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಸ್ಪೃಶ್ಯತೆಯಿಂದ ಮುಕ್ತರಾಗಿ ಸ್ವತಂತ್ರರಾಗಿ ಬದುಕುತ್ತಿದ್ದೇವೆ. ಉದ್ಯಮ, ವೈಯಕ್ತಿಕ ಅಥವಾ ಸಾಮಾಜಿಕ ನ್ಯಾಯಕ್ಕಾಗಿ ಧೈರ್ಯಶಾಲಿಗಳಾಗಿ ದಿಟ್ಟತನದಿಂದ ಹೋರಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಯಾವತ್ತೂ ಹಿಂಜರಿಯಬಾರದು. ವಿಷಯ ಸತ್ಯವಾಗಿದ್ದರೆ ಅದನ್ನು ಎಂದೂ ಮುಚ್ಚಿಡದೆ, ಸಹಿಸಿ ಸುಮ್ಮನಿರಬಾರದು. ನಿರ್ಭೀತರಾಗಿ ಎದೆಗಾರಿಕೆಯಿಂದ ಪ್ರತಿಭಟಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಿದಾಗ ಮಾತ್ರ ಗೆಲುವು ನಮ್ಮದಾಗುತ್ತದೆ ಎಂದು ತಿಳಿಸಿ, ಇತ್ತೀಚೆಗೆ ದಹಿಸರ್‌ನ ಹೊಟೇಲ್‌ಗೆ ನುಗ್ಗಿ ಹೊಟೇಲ್ ಮಾಲಕರ ಮೇಲೆ ಮಾರಣಾಂತಿಕ ಹಲ್ಲೆಗೈದು ಕರ್ತವ್ಯ ಲೋಪವೆಸಗಿದ ಪಾನಮತ್ತ ಪೊಲೀಸರೊಬ್ಬರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ರವೀಂದ್ರ ಎಸ್. ಶೆಟ್ಟಿ ಮತ್ತು ಎರ್ಮಾಳ್ ಹರೀಶ್ ಶೆಟ್ಟಿ ಅವರ ಸಮಯ ಪ್ರಜ್ಞೆಯನ್ನು ಅಭಿನಂದಿಸಿದರು.
ಅಧಿಕಾರಿಗಳ ಕರ್ತವ್ಯಗಳನ್ನು ಪ್ರಾಮಾ ಣಿಕರಾಗಿ ಮಾಡಲು ಜನತೆ ಸಹಕರಿಸಬೇಕೇ ಹೊರತು ಜನರ ಮೇಲೆ ನಿಯಂತ್ರಣ ಸಾಧಿಸಲು ಅಧಿಕಾರಿಗಳಿಗೆ ಅವಕಾಶ ನೀಡಬಾರದು. ಇದರಿಂದ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರ ಬಹುದು. ಅಂಬೇಡ್ಕರ್ ಅವರಿಗೆ ಭಾರತದ ಪರಮೋಚ್ಚ ನಾಗರಿಕ ಪುರಸ್ಕಾರ ಭಾರತರತ್ನ ನೀಡಿ ಗೌರವಿಸಿದಂತೆ, ನಮ್ಮ ಆಸುಪಾಸಿನಲ್ಲಿ ಸಾಮಾಜಿಕ ಕಾಳಜಿಯೊಂದಿಗೆ ತಮ್ಮಿಂದಾದ ಸಾಧನೆಗೈದ ಸಾಧಕರಿಗೂ ಸ್ಥಾನೀಯ ಜಿಲ್ಲಾಡಳಿತ, ಜನಪ್ರತಿನಿಧಿಗಳು ಗೌರವ ನೀಡಿದಾಗ ಅವರಲ್ಲಿ ಸೇವಾ ಉತ್ಸಾಹ ಇಮ್ಮಡಿಗೊಂಡು ಅವರು ಮತ್ತಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಕ ವಾಗುತ್ತದೆ. ಸ್ವತಂತ್ರ ಕಾರ್ಮಿಕ ವರ್ಗದ ಸಂವಿಧಾನಾತ್ಮಕ ನಿಯಮಗಳನ್ನು ರಚಿಸಲು ಅಂಬೇಡ್ಕರ್ ಅವರು ಸಮರ್ಥರಾಗಿ ಶ್ರಮಿಸಿದ ಪರಿಣಾಮವಾಗಿ ನಾವು ಇಂದು ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತಿದೆ ಎಂದು ಅವರು ತಿಳಿಸಿದರು.
ಅಭಿನಂದನೆ
ಶಾಸಕ ಸುನೀಲ್ ರಾಣೆ, ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಗಣೇಶ್ ಕಾಂಕರ್, ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ, ವಿನೋದ್ ಶೆØಲಾರ್, ಬಂಟ್ಸ್ ಸಂಘ ಮುಂಬಯಿ ಜತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆ, ಇಂಡಿಯನ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ವಲಯ 10ರ ಕಾರ್ಯಾಧ್ಯಕ್ಷ ಡಾ| ಸತೀಶ್ ಶೆಟ್ಟಿ ಉಪಸ್ಥಿತರಿದ್ದು ವಲಯ 10ರ ಮಾಜಿ ಕಾರ್ಯಾಧ್ಯಕ್ಷ ರವೀಂದ್ರ ಎಸ್. ಶೆಟ್ಟಿ ಕರ್ನಿರೆ ಇವರಿಗೆ “ಧೈರ್ಯವಂತ ಸಾಧಕ ಮೆಚ್ಚುಗೆ ಗೌರವ’ ಪ್ರದಾನ ಮಾಡಿ ಅಭಿನಂದಿಸಿದರು.
ಚಿತ್ರ- ವರದಿ: ರೋನ್ಸ್ ಬಂಟ್ವಾಳ್