ಹುಬ್ಬಳ್ಳಿ: ಇಲ್ಲಿನ ಗದಗ ರಸ್ತೆ ಆರ್‌ಜಿಎಸ್ ರೈಲ್ವೆ ಕಾಲೋನಿಯ ವಿನೋಬಾನಗರದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಡಾ| ಬಿ.ಆರ್. ಅಂಬೇಡ್ಕರ್ ಪುತ್ಥಳಿಯನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಶನಿವಾರ ಮತ್ತೆ ತೆರವುಗೊಳಿಸಲು ಮುಂದಾದಾಗ ಪೊಲೀಸರು ಮತ್ತು ಸ್ಥಳೀಯರು, ದಲಿತ ಪರ ಸಂಘಟನೆಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.
ಅಂಬೇಡ್ಕರ್ ಪುತ್ಥಳಿ ತೆರವು ಮಾಡಿದರೆ ಅವರಿಗೆ ಅವಮಾನ ಮಾಡಿದಂತೆ. ಯಾವುದೇ ಕಾರಣಕ್ಕೂ ಪುತ್ಥಳಿ ತೆರವುಗೊಳಿಸಲು ಬಿಡುವುದಿಲ್ಲ ಎಂದು ಪೊಲೀಸರ ಕ್ರಮ ಖಂಡಿಸಿ ವಿವಿಧ ದಲಿತಪರ ಸಂಘಟನೆಗಳ ಮುಖಂಡರು, ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಪ್ರತಿಭಟಿಸಿದರು.
ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ನಂತರ ಪೊಲೀಸರು ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ನಡೆಸಿ, ಸೋಮವಾರ ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ವಿವಾದ ಬಗೆಹರಿಸಿಕೊಳ್ಳಲು ನಿರ್ಧರಿಸಿದರು.
ತದನಂತರ ಪರಿಸ್ಥಿತಿ ತಿಳಿಗೊಂಡಿತು. ಕಾಲೋನಿಯಲ್ಲಿ ರೈಲ್ವೆ ಇಲಾಖೆಗೆ ಸೇರಿದ ಮೈದಾನದಲ್ಲಿ ಕಟ್ಟೆ ಕಟ್ಟಿದ್ದ ಸ್ಥಳೀಯರು, ಅಲ್ಲಿ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪಿಸಿದ್ದರು. ಆರ್ ಪಿಎಫ್‌ನವರು ಗುರುವಾರ ಬೆಳಗ್ಗೆ ಅದನ್ನು ತೆರವುಗೊಳಿಸಿ, ತಮ್ಮ ವಶದಲ್ಲಿಟ್ಟುಕೊಂಡಿದ್ದರು. ಇದನ್ನು ವಿರೋಧಿಸಿ ಸ್ಥಳೀಯರು ಹಾಗೂ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದರು.
ಆಗ ಮುಖಂಡರಿಗೆ ಪುತ್ಥಳಿ ಹಿಂದಿರುಗಿಸಲಾಗಿತ್ತು. ಸ್ಥಳೀಯರು ಪುನಃ ಅದೇ ಜಾಗದಲ್ಲಿ ಪುತ್ಥಳಿ ಮರು ಪ್ರತಿಷ್ಠಾಪಿಸಿದ್ದರು. ಶನಿವಾರ ಬೆಳಗ್ಗೆ ಮತ್ತೆ ಆರ್‌ಪಿಎಫ್ ಸಿಬ್ಬಂದಿ ಅದನ್ನು ತೆರವುಗೊಳಿಸಲು ಜೆಸಿಬಿ ತಂದಿದ್ದು ವಿವಾದಕ್ಕೆ ಕಾರಣವಾಯಿತು.
ಸಮತಾ ಸೇನೆಯ ಗುರುನಾಥ ಉಳ್ಳಿಕಾಶಿ ಮಾತನಾಡಿ, ಈ ಭಾಗದಲ್ಲಿ ಸ್ವತ್ಛತೆ ಕಾಪಾಡಿಕೊಳ್ಳಲು ಹಾಗೂ ಡಾ| ಅಂಬೇಡ್ಕರ್ ಅವರ ಮೇಲೆ ಅಭಿಮಾನದಿಂದ ಯಾರೋ ಪುತ್ಥಳಿ ಸ್ಥಾಪಿಸಿದ್ದಾರೆ. ಅದನ್ನು ತೆರವು ಮಾಡುವುದು ಬೇಡ. ಈ ಜಾಗ ಉದ್ಯಾನವನ್ನಾಗಿ ಅಭಿವೃದ್ಧಿಪಡಿಸುವಂತೆ ಸೋಮವಾರ ನೈಋತ್ಯ ರೈಲ್ವೆ ಹಿರಿಯ ಅಧಿಕಾರಿಗಳಿಗೆ ಲಿಖೀತ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲ, ಮಹೇಶ ದಾಬಡೆ, ವಿಜಯ ಕರ ಮೊದಲಾದವರಿದ್ದರು.