ಚಿಕ್ಕೋಡಿ: ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಚಿಕ್ಕೋಡಿ ನ್ಯಾಯಾಲಯದಲ್ಲಿ ವಾದ ಮಾಡಲು ಬಂದಾಗ ಅವರನ್ನು ಆರೈಕೆ ಮಾಡಿದ ತಾಲೂಕಿನ ಕರೋಶಿ ಗ್ರಾಮದ ವೃದ್ದೆ ಜಿಗನಬಿ ಬಾಪುಲಾಲ್ ಪಟೇಲ (108) ಮಂಗಳವಾರ ರಾತ್ರಿ ವಿಧಿವಶರಾದರು.
ಮೃತ ಶತಾಯುಷಿ ಜಿಗನಬಿ ಅವರಿಗೆ ಐದು ಜನ ಮಕ್ಕಳಲ್ಲಿ ಹಿರಿಯ ಪುತ್ರ ನಿಧನರಾಗಿದ್ದು, ಓರ್ವ ಪುತ್ರ, ಮೂವರು ಪುತ್ರಿಯರು ಇದ್ದಾರೆ.
1927ರಲ್ಲಿ ಮಹಾರಾಷ್ಟ್ರದ ಔರವಾಡ ಗ್ರಾಮದ ದೇವಸ್ಥಾನದ ಜಮೀನು ಕುರಿತು ದೇವಸ್ತಾನ ಸಮಿತಿ ಹಾಗೂ ಪಟೇಲ ನಡುವೆ ವ್ಯಾಜ್ಯ ನಡೆದಿತ್ತು. ಅಂದಿನ ಬಾಂಬೆ ಹೈಕೋರ್ಟ್ ಸುಪ್ರಸಿದ್ಧ ನ್ಯಾಯವಾದಿ ಡಾ.ಅಂಬೇಡ್ಕರ್ ಅವರು ಶತಯುಷಿ ಜಗನಬಿ ಮನೆಯಲ್ಲಿ ವಾಸವಾಗಿದ್ದರು. ಅಂದು 9 ವರ್ಷದ ಬಾಲಕಿ ಇದ್ದ ಜಿಗನಬಿ ಅವರು ಅಂಬೇಡ್ಕರಗೆ ಊಟ ಉಪಚಾರ ಮಾಡಿದ್ದರು.
ಜಿಗನಬಿ ಅವರು ನೂರು ವರ್ಷ ದಾಟಿದರೂ ಮನೆಯಲ್ಲಿ ಕೆಲಸ ಕಾರ್ಯದಲ್ಲಿ ತೊಡಗುತ್ತಿದ್ದರು. ಯುವ ಪೀಳಿಗೆಗೆ ಮಾದರಿಯಾಗಿದ್ದರು. ಇತ್ತೀಚೆಗೆ ಅಂಬೇಡ್ಕರ್ ಮೊಮ್ಮಗ ಪ್ರಕಾಶ ಅಂಬೇಡ್ಕರ್, ಬಿಎಸ್ ಪಿ ರಾಷ್ಟ್ರೀಯ ಅಧ್ಯಕ್ಷ ಮಾಯಾವತಿ ಅವರು ಶತಾಯುಷಿ ಜಿಗನಬಿ ಅವರನ್ನು ಭೇಟಿ ಮಾಡಿ ಸನ್ಮಾನಿಸಿದ್ದರು.
ಡಾ. ಅಂಬೇಡ್ಕರ್ ಅವರು ಜಿಗನಬಿ ಅವರಿಗೆ ಪ್ರೀತಿಯಿಂದ ಮುನ್ನಿ ಎಂದು ಕರೆಯುತ್ತಿದ್ದರು ಎಂದು ಬದುಕಿದ್ದಾಗ ಶತಾಯುಷಿ ಹೇಳಿದ್ದರು. ಚಿಕ್ಕೋಡಿ ತಾಲೂಕಿನ ಹಿರಿಯ ಜೀವ ಜಿಗನಬಿ ನಿಧನದಿಂದ ತಾಲೂಕಿನಾದ್ಯಂತ ಶೋಕ ಮಡುಗಟ್ಟಿದೆ.