ಕೋಲಾರ: ರಾಷ್ಟ್ರದಲ್ಲಿಯೇ ಅತಿ ಹೆಚ್ಚು ದಲಿತ ಸಮೂಹವನ್ನು ಹೊಂದಿರುವ ಜಿಲ್ಲೆಗೆ ಐವತ್ತರ ದಶಕದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭೇಟಿ ನೀಡಿದ್ದರು. ಚಿನ್ನದ ಗಣಿಗಳು ಉತ್ತುಂಗ ಸ್ಥಿತಿಯಲ್ಲಿದ್ದ 50ರ ದಶಕದಲ್ಲಿ ಅಲ್ಲಿನ 30 ಸಾವಿರ ಕಾರ್ಮಿಕ ವರ್ಗದ ಕೋರಿಕೆ ಮೇರೆಗೆ ಅಂಬೇಡ್ಕರ್ 1954 ಜುಲೈ 12 ರಂದು ಪತ್ನಿ ಸವಿತಾ ಅವರೊಂದಿಗೆ ಕೆಜಿಎಫ್ನ ಗರಕ್ಕೆ ಭೇಟಿ ನೀಡಿದ್ದರು.
ದೇಶಾದ್ಯಂತ ದಲಿತ ಸಮುದಾಯದ ಕಾರ್ಮಿಕವನ್ನು ವರ್ಗವನ್ನು ಸಂಘಟಿಸುವ ಕಾರ್ಯದಲ್ಲಿ ಮಗ್ನರಾಗಿದ್ದ ಅಂಬೇಡ್ಕರ್‌ಗೆ ಸಹಜವಾಗಿಯೇ ಸಹಸ್ರಾರು ದಲಿತ ಕಾರ್ಮಿಕರು ಕೆಲಸ ಮಾಡುತ್ತಿದ್ದ ಕೆಜಿಎಫ್ ನಗರ ಆಕರ್ಷಿಸಿತ್ತು. ಕಾರ್ಮಿಕರ ಕೋರಿಕೆ ಮೇರೆಗೆ ಕೆಜಿಎಫ್ಗೆ ಆಗ ಮಿಸಿದ್ದ ಅಂಬೇಡ್ಕರ್ ಕೆಜಿಎಫ್ ನಗರದಲ್ಲಿ ಬುದ್ಧನ ಹೆಸರಿನ ಶಾಲೆಯೊಂದನ್ನು ಉದ್ಘಾಟಿಸಿದ್ದರು.
ಮಲಯಾಳಿ ಮೈದಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶ ಭಾಷಣ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಅತಿಥಿ ಗೃಹದಲ್ಲಿದ್ದ ಅಂಬೇಡ್ಕರ್‌ರ ಕಾಲಿಗೆರಗಲು ಸಹಸ್ರಾರು ಸಂಖ್ಯೆಯಲ್ಲಿ ಕಾರ್ಮಿಕರು ಆಗಮಿಸಿದ್ದರು. ಸ್ವಾಭಿಮಾನದ ಹೆಗ್ಗುರುತಾಗಿದ್ದ ಅಂಬೇಡ್ಕರ್‌ಗೆ ಇದು ಮುಜುಗರವನ್ನುಂಟು ಮಾಡಿತ್ತು. ಹೀಗೆ ಮಾಡಬಾರದೆಂಬ ಅಂಬೇಡ್ಕರ್ ಮಾತಿಗೆ ಕಾರ್ಮಿಕ ವರ್ಗ ಕಿವಿಗೊಟ್ಟಿರಲಿಲ್ಲ. ಇದರಿಂದ ಮುನಿಸಿಕೊಂಡು ಅಂಬೇಡ್ಕರ್, ಭಾಷಣ ಮಾಡದೆ ಬೆಂಗಳೂರಿನತ್ತ ತೆರಳಿದ್ದರೆಂದು ಗಣಿ ಕಾರ್ಮಿಕ ಕುಟುಂಬ ಸದಸ್ಯ ಸಿ.ವಿ.ನಾಗರಾಜ್ ವಿವರಿಸುತ್ತಾರೆ.
ಇಷ್ಟಾದರೂ ಕೆಜಿಎಫ್ ಕಾರ್ಮಿಕ ವರ್ಗಕ್ಕೆ ಅಂಬೇಡ್ಕರ್ ಬಗ್ಗೆ ಅಭಿಮಾನ ತಗ್ಗಿರಲಿಲ್ಲ. ಅವರು ನಗರಕ್ಕೆ ಕಾಲಿಟ್ಟು ಹೋಗಿದ್ದರ ನೆನಪಿನಲ್ಲಿ ಇಂದಿಗೂ ಕೆಜಿಎಫ್ ಬಹುತೇಕ ಪ್ರಮುಖ ರಸ್ತೆ, ಗಲ್ಲಿಗಳಲ್ಲಿ ಅಂಬೇಡ್ಕರ್ ಪ್ರತಿಮೆ, ಬಣ್ಣದ ಚಿತ್ರಗಳಿವೆ. ದೇಶದಲ್ಲಿಯೇ ಅತಿ ಹೆಚ್ಚು ಅಂಬೇಡ್ಕರ್ ಪ್ರತಿಮೆ, ಚಿತ್ರ ಹೊಂದಿರುವ ನಗರಗಳಲ್ಲಿ ಕೆಜಿಎಫ್ಗೆ ಅಗ್ರಸ್ಥಾನ ಇದೆ.
ಟಿ.ಚೆನ್ನಯ್ಯರ ನಂಟು: ಕೋಲಾರ ನಗರದ ನಿರ್ಮಾತೃ ಟಿ.ಚೆನ್ನಯ್ಯರಿಗೂ ಅಂಬೇಡ್ಕರ್‌ರೊಂ ದಿಗೆ ನಿಕಟ ನಂಟಿತ್ತು. ಸಂವಿಧಾನ ಕರಡು ಸಮಿತಿಯಲ್ಲಿ ಟಿ.ಚನ್ನಯ್ಯನವರು ಕೆಲಸ ನಿರ್ವಹಿಸಿದ್ದರು. ಅಂಬೇಡ್ಕರ್ ಜತೆ ಇರುವ ಅಪೂರ್ವ ಚಿತ್ರಗಳು ಇಂದಿಗೂ ಟಿ.ಚನ್ನಯ್ಯರ ಕುಟುಂಬದಲ್ಲಿದೆ.
ಸವಿತಾ ಅಂಬೇಡ್ಕರ್ ನಂಟು: ಸವಿತಾ ಅಂಬೇಡ್ಕರ್ ನಿಧನವಾಗುವ ಕೆಲವೇ ವರ್ಷಗಳ ಮೊದಲು ಕೋಲಾರ ಜಿಲ್ಲೆಗೆ ಆಗಮಿಸಿ ದಲಿತ ಚಳವಳಿಯ ಹಿರಿಯ ಮುಖಂಡ ಡಾ.ಎಂ.ಚಂದ್ರಶೇಖರ್ ನಿವಾ ಸ ದಲ್ಲಿ ಒಂದು ವಾರ ಕಾಲ ವಾಸ್ತವ್ಯಹೂಡಿ ಕೋಲಾರ, ಕೆಜಿಎಫ್ ನಗರಗಳಲ್ಲಿ ಸಂಚರಿಸಿದ್ದರು. ಅಂಬೇಡ್ಕರ್‌ರ ಬಗೆಗಿನ ಅಭಿಮಾನ ಪ್ರೀತಿ ಸ್ಫೂರ್ತಿಯಿಂದಲೇ ಕೋಲಾರ ಜಿಲ್ಲೆ 70ರ ದಶಕದಲ್ಲಿ ದಲಿತ ಚಳವಳಿಯ ತವರೂರಾಗಿ ಮಾರ್ಪಟ್ಟಿತ್ತು.
ಕೆ.ಎಸ್.ಗಣೇಶ್