ದೇವನಹಳ್ಳಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾನತೆಯ ತತ್ವವನ್ನು ಅಳವಡಿಸುವ ಮೂಲಕ ಶೋಷಿತ ವರ್ಗದವರನ್ನು ಮುಖ್ಯ ವಾಹಿನಿಗೆ ತರಲು ಶ್ರಮಿಸಿದರು ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ರಾಜ್ಯ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್ ತಿಳಿಸಿದರು.
ನಗರದ ಸೂಲಿಬೆಲೆ ರಸ್ತೆಯ ವಕೀಲ ಮುನಿಕೃಷ್ಣ ಅವರ ಕಚೇರಿಯಲ್ಲಿ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 63 ನೇ ಮಹಾ ಪರಿನಿರ್ವಾಣ ದಿನ ಕಾರ್ಯಕ್ರಮಮದಲ್ಲಿ ಮಾತನಾಡಿದರು.
ಸರ್ವರಿಗೂ ಸಮಪಾಲು, ಸಮಬಾಳು ತತ್ವವನ್ನು ಸಂವಿಧಾನದಲ್ಲಿ ಅಳವಡಿಸಿ ಶೋಷಿತ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಟ್ಟ ಡಾ.ಅಂಬೇಡ್ಕರ್. ಭಾರತೀಯ ರಿಸವ್ì ಬ್ಯಾಂಕ್ ಸ್ಥಾಪನೆ ಯಲ್ಲಿ ಪ್ರಮುಖ ಪಾತ್ರವಹಿಸಿ ದೇಶದ ಆರ್ಥಿಕತೆಗೂ ಶಕ್ತಿ ತುಂಬಿದರು. ಈ ಭಾರತ ದೇಶದ ಜಗತ್ತಿನ ಅತೀ ದೊಡ್ಡ ಪ್ರಜಾ ಪ್ರಭುತ್ವ ವ್ಯವಸ್ಥೆ ಮುನ್ನಡೆಯುತ್ತಿದೆ.
ಅದಕ್ಕೆ ಅಂಬೇಡ್ಕರ್ ಹಾಕಿಕೊಟ್ಟ ಸಂವಿಧಾನ ಭದ್ರ ಬುನಾದಿ ಆಗಿದೆ. ಕಾನ್ಸಿರಾಮ್ ಅವರೂ ಅಂಬೇಡ್ಕರ್ ಅವರ ಆದರ್ಶಗಳನ್ನು ಮೈ ಗೂಡಿಸಿಕೊಂಡು ಬಿಎಸ್‌ಪಿ ಪಕ ಮುನ್ನಡೆಸಿದರು ಎಂದರು. ಜಿಲ್ಲಾ ಬಿಎಸ್‌ಪಿ ಅಧ್ಯಕ್ಷ ಮುನಿಕೃಷ್ಣ ಮಾತನಾಡಿ, ಅಂಬೇಡ್ಕರ್ ತಮ್ಮ ಬದುಕನ್ನು ಹೋರಾಟದಲ್ಲೇ ಕಳೆದು ನಮಗೆ ಸಮಾನತೆ ನೀಡದೇ ಇದ್ದಿದ್ದರೆ, ಇಂದು ಸಮಾನತೆ ಅಸಾಧ್ಯವಾಗುತ್ತಿತ್ತು.
ಅಂದು ಅವರ ಬದುಕಿನ ತ್ಯಾಗ ಇಂದು ನಮ್ಮೆಲ್ಲರ ಗೌರವದ ಬದುಕಿಗೆ ಮುನ್ನುಡಿ ಬರೆದಿದೆ ಎಂದು ಹೇಳಿದರು. ತಾ.ಬಿಎಸ್‌ಪಿ ಅಧ್ಯಕ್ಷ ಬಂಗಾರಪ್ಪ, ಜಾಗೃತಿ ಸಮಿತಿ ಸದಸ್ಯೆ ರವಿಕಲಾ, ಜಿಲ್ಲಾ ಕಚೇರಿ ಕಾರ್ಯದರ್ಶಿ ನರಸಿಂಹ ಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಜಯ ಲಕ್ಷ್ಮಮ್ಮ, ಮುಖಂಡ ಶಿವಪ್ಪ, ಮತ್ತಿತರರಿದ್ದರು.