Advertisement

Kundapura: ಅಂಬೇಡ್ಕರ್‌ ಶಾಲೆಗೆ ಗುಡ್ಡ ಕುಸಿತ ಭೀತಿ

03:36 PM Aug 11, 2024 | Team Udayavani |

ಕುಂದಾಪುರ: ಶಂಕರನಾರಾಯಣದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ| ಬಿ.ಆರ್‌. ಅಂಬೇಡ್ಕರ್‌ ವಸತಿ ಶಾಲೆ ಕಟ್ಟಡ ಸಮೀಪ ಬೃಹತ್‌ ಗುಡ್ಡವೊಂದಿದ್ದು ಆತಂಕ ಉಂಟಾಗಿದೆ. ತಡೆಗೋಡೆ ರಚಿಸುವ ಪ್ರಸ್ತಾವ ಇದ್ದರೂ ತಡೆಗೋಡೆ ಗುಡ್ಡ ಜರಿತ ತಪ್ಪಿಸಬಲ್ಲದೇ, ಆಘಾತ ತಡೆಯ ಬಲ್ಲದೇ ಎಂಬ ಅನುಮಾನ ಸಾರ್ವಜನಿಕರಿಗೆ ಮೂಡಿದೆ.

Advertisement

8 ವರ್ಷಗಳ ಹಿಂದೆ ಮಂಜೂರು

2015-16ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕರನಾರಾಯಣ ತಾಲೂಕು ರಚನಾ ಹೋರಾಟ ಸಮಿತಿಯ ನಿಯೋಗ ಬೆಂಗಳೂರಿನಲ್ಲಿ ಭೇಟಿಯಾದಾಗ ವಸತಿ ಶಾಲಾ ಬೇಡಿಕೆ ಮಂಜೂರಾತಿ ಮಾಡಿದ್ದರು. 2017ರಲ್ಲಿ ಶಂಕರನಾರಾಯಣದಲ್ಲಿ ಪ್ರಾರಂಭವಾದ ವಸತಿ ಶಾಲೆಯು ಮಾಸಿಕ 81 ಸಾವಿರ ರೂ. ಬಾಡಿಗೆ ಆಧಾರದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ವರ್ಷಕ್ಕೆ ಲಕ್ಷಾಂತರ ರೂ. ಸರಕಾರ ಪಾವತಿಸಬೇಕಿದೆ. ಇಲ್ಲಿ ವರ್ಷಕ್ಕೆ 50 ಜನ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ 6ನೇ ತರಗತಿಗೆ ಉಚಿತ ಊಟ, ವಸತಿ, ಸಮವಸ್ತ್ರ, ಪಠ್ಯ ಪುಸ್ತಕ, ಲೇಖನ ಸಾಮಗ್ರಿ, ನೈತಿಕ ಹಾಗೂ ಮೌಲ್ಯ ಶಿಕ್ಷಣ, ಕಂಪ್ಯೂಟರ್‌ ಶಿಕ್ಷಣ, ಸಂಗೀತ ಮತ್ತು ಯೋಗ ತರಬೇತಿ ಜತೆಗೆ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣವನ್ನು 6ನೇ ತರಗತಿಯಿಂದ ನೀಡಲಾಗುತ್ತಿದೆ.

ಭೇಟಿ

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅನಿತಾ ಮುಡ್ಲೂರು, ಸಹಾಯಕ ನಿರ್ದೇಶಕ ರಾಘವೇಂದ್ರ ವೆರ್ಣೇಕರ್‌ ಅವರು ಭೇಟಿ ನೀಡಿದ್ದು ಶಾಲೆ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ. ಈ ಸಂದರ್ಭ ತಡೆಗೋಡೆಯನ್ನು ಸಾಕಷ್ಟು ಎತ್ತರಿಸಿ ಗುಡ್ಡದ ಹಂತದವರೆಗೆ ನಿರ್ಮಿಸಲಾಗುವುದು ಎಂದು ಗುತ್ತಿಗೆದಾರರು ಹೇಳಿದ್ದಾರೆ. ಗುಡ್ಡದ ಸಮೀಪ ನಿರ್ಮಿಸುವ ತಡೆಗೋಡೆಯ ಗುಣಮಟ್ಟ ಗುಡ್ಡ ಜರಿತವಾಗದಂತೆ ಇರಬೇಕಿದೆ. ಸಮೀಪದಲ್ಲಿ ಶಾಲಾ ಕಟ್ಟಡ, ವಸತಿಗೃಹಗಳು ಇರುವ ಕಾರಣ ಭಯಮುಕ್ತವಾಗಿರಬೇಕು.

Advertisement

ಎತ್ತಂಗಡಿಗೆ ನಡೆದಿತ್ತು ಹುನ್ನಾರ

ಇಲಾಖಾ ನಿಯಮದ ಪ್ರಕಾರ ವಸತಿ ಶಾಲೆ ಪ್ರಾರಂಭವಾಗಿ ಒಂದೆರಡು ವರ್ಷದೊಳಗೆ ಸ್ವಂತ ನಿವೇಶನ ಹಾಗೂ ಕಟ್ಟಡ ಹೊಂದ ಬೇಕಿದ್ದು ಎಚ್‌. ಡಿ. ಕುಮಾರಸ್ವಾಮಿ ಅವರ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಶಂಕರನಾರಾಯಣ ಗ್ರಾಮದಲ್ಲಿ ಯಾವುದೇ ಸರಕಾರಿ ಸ್ಥಳಗಳು ಲಭ್ಯವಿಲ್ಲ ಎಂದು ವಸತಿ ಶಾಲೆಯನ್ನು ಶಂಕರನಾರಾಯಣದಿಂದ ಬೇರೆ ಗ್ರಾಮಕ್ಕೆ ಎತ್ತಂಗಡಿ ಮಾಡಲು ಪ್ರಯತ್ನಗಳು ನಡೆದವು. ಈ ಕುರಿತು “ಉದಯವಾಣಿ’ 2019ರ ಜ.14ರಂದು “ಅಂಬೇಡ್ಕರ್‌ ವಸತಿ ಶಾಲೆ ಎತ್ತಂಗಡಿ ಹುನ್ನಾರ’ ಎಂದು ವರದಿ ಮಾಡಿತ್ತು.

ನಿರ್ಮಾಣ

ಸೌಡ ರಸ್ತೆಯಲ್ಲಿ 8 ಎಕ್ರೆ ಜಾಗ ಸರಕಾರದಿಂದ ಮಂಜೂರುಗೊಂಡಿತ್ತು. ಜಾಗದ ತಕರಾರಿನಿಂದ ಕಟ್ಟಡ ರಚನೆ ವಿಳಂಬವಾಗಿ ಸಂಸದ ಬಿ.ವೈ. ರಾಘವೇಂದ್ರ, ಬಿ.ಎಂ.ಸುಕುಮಾರ್‌ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಪ್ರಯತ್ನ ಪಟ್ಟಿದ್ದರು. ಪ್ರಕರಣ ನ್ಯಾಯಾಲಯದ ಕಟಕಟೆ ಏರಿತ್ತು. ಬಳಿಕ ಕಟ್ಟಡ ಕಟ್ಟಲು 26 ಕೋ. ರೂ. ಹಣ ಬಿಡುಗಡೆ ಆಗಿ 22.5 ಕೋ. ರೂ.ಗಳಿಗೆ ಟೆಂಡರ್‌ ಆಗಿ ಕೆಲಸ ಪ್ರಾರಂಭ ಆಗಿದೆ. ಸುಮಾರು 30 ಶೇ.ದಷ್ಟು ಕಾಮಗಾರಿ ಮುಗಿದಿದೆ. ಲಿಂಟಲ್‌ ಹಂತಕ್ಕೆ ಬಂದಿದೆ. ಮೂರು ಬಾರಿ ಕಟ್ಟಡದ ನೀಲ ನಕಾಶೆ, ವಿನ್ಯಾಸ ಬದಲಿಸಲಾಗಿದೆ. ಸಿಬಂದಿ ವಸತಿ ಗೃಹವನ್ನು ಯೋಜಿತ ಪ್ರದೇಶದಿಂದ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ.

ಕಾಳಜಿ ಮುಖ್ಯ

ಬೃಹತ್‌ ವಾಲ್‌ ನಿರ್ಮಾಣಕ್ಕೆ ಹಣ ಬಂದಿದೆಯಾ, ಎಷ್ಟು ಹಣ ಮಂಜೂರು ಆಗಿದೆ ಗೊತ್ತಿಲ್ಲ. ಸ್ವಲ್ಪ ಕಾಳಜಿ ವಹಿಸದಿದ್ದರೆ ಶಿರೂರು ಗುಡ್ಡ ಕುಸಿದು ಗಂಗಾವತಿ ನದಿಗೆ ಜಾರಿದಂತೆ ಆಗಬಹುದು. ವಿದ್ಯಾರ್ಥಿಗಳ ಭವಿಷ್ಯ ಮುಖ್ಯ.-ಚಿಟ್ಟೆ ರಾಜಗೋಪಾಲ ಹೆಗ್ಡೆ ಸಂಚಾಲಕ, ಶಂಕರನಾರಾಯಣ ತಾ.ರ. ಹೊ.ಸಮಿತಿ ಶಂಕರನಾರಾಯಣ

ಎಂಜಿನಿಯರ್‌ ಭೇಟಿಗೆ ಪತ್ರ

ಸ್ಥಳಕ್ಕೆ ಇಲಾಖಾ ಉಪನಿರ್ದೇಶಕಿ ಹಾಗೂ ನಾನು ಭೇಟಿ ನೀಡಿದ್ದೇವೆ. ಕ್ರೈಸ್‌ ಸಂಸ್ಥೆ ಕಾಮಗಾರಿ ನಿರ್ವಹಿಸುತ್ತಿದ್ದು ಗುಣಮಟ್ಟ ಹಾಗೂ ತಡೆಗೋಡೆ ನಿರ್ಮಾಣದ ಆತಂಕದ ಕುರಿತು ಪತ್ರ ಬರೆಯಲಾಗಿದೆ. ಅಲ್ಲಿನ ಮುಖ್ಯ ಎಂಜಿನಿಯರ್‌ ಭೇಟಿ ನೀಡಲಿದ್ದು ಪರಿಶೀಲನೆ ನಡೆಸಿ ತಡೆಗೋಡೆ ನಿರ್ಮಾಣ ಕಾರ್ಯ ಮಾಡಬಹುದು ಎಂದ ಮೇಲಷ್ಟೇ ನಮಗೆ ಭರವಸೆ ದೊರೆಯಲಿದೆ. ಮಕ್ಕಳ ಸುರಕ್ಷತೆಗೆ ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲು ಸೂಚಿಸಲಾಗಿದೆ.

-ರಾಘವೇಂದ್ರ ವರ್ಣೇಕರ್‌ ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ, ಕುಂದಾಪುರ

ಗುಡ್ಡದಿಂದ ಅಪಾಯ

ಕಟ್ಟಡದ ಸಮೀಪದ ಭಾರೀ ಗುಡ್ಡ ಒಂದಿದ್ದು ಈಗಾಗಲೇ ಒಮ್ಮೆ ಕುಸಿದು ಉಸಿರು ಬಿಗಿ ಹಿಡಿಯುವಂತೆ ಮಾಡಿತ್ತು. ಪುನಃ ಗುಡ್ಡ ಜಾರದ ಹಾಗೆ ತಡೆಗೋಡೆ ಕಟ್ಟುತ್ತಿದ್ದಾರೆ. ಈ ತಡೆಗೋಡೆ ಬುಡದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಮುಂದೆ ಎಲ್ಲಾದರೂ ವಿಪರೀತ ಮಳೆಗೆ ಗುಡ್ಡ ಜಾರಿದರೆ ಕಟ್ಟಡದ ಗತಿ ಏನು? ಎಂದು ಸ್ಥಳೀಯರು ಕೇಳಿದರೆ ಗುತ್ತಿಗೆದಾರರ ಕಡೆಯಿಂದ ಸಮರ್ಪಕ ಉತ್ತರ ದೊರೆತಿಲ್ಲ. ಅಂಕೋಲದ ಶಿರೂರು ಸೇರಿದಂತೆ ವಿವಿಧೆಡೆ ಈ ಬಾರಿಯ ಅನಿರೀಕ್ಷಿತ ಮಳೆಗೆ ಗುಡ್ಡ ಕುಸಿತದಿಂದ ಅನಾಹುತ ಸಂಭವಿಸಿದ್ದು ನೂರಾರು ಮಕ್ಕಳು ಕಲಿಯುವ ಶಾಲೆಯ ಪಕ್ಕ ಗುಡ್ಡ ಕುಸಿಯದಂತೆ ಕಟ್ಟಡ ನಿರ್ಮಾಣ ಹಂತದಲ್ಲೇ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next