Advertisement

ಎಲ್ಲ ಪಕ್ಷದವರಿಂದ ಅಂಬೇಡ್ಕರ್‌ ಸ್ಮರಣೆ

05:38 PM Apr 15, 2018 | Team Udayavani |

ದಾವಣಗೆರೆ: ಕಾಂಗ್ರೆಸ್‌ ಪಾಳಯದ ನಾಯಕರಿಗೆ ಹೈ ಕಮಾಂಡ್‌ ಯಾವಾಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೋ ಎಂಬ ಕಾತುರ, ಬಿಜೆಪಿಯವರಿಂದ ಮತಬೇಟೆ, ಜೆಡಿಎಸ್‌ ನಾಯಕರದ್ದು ಮನೆ ಮನೆಗೆ ತೆರಳಿ ಮತದಾರನ ಮನವೊಲಿಸುವ ಕಾರ್ಯ…. ಜತೆಗೆ ಎಲ್ಲಾ ರಾಜಕೀಯ ಪಕ್ಷಗಳ ಕಚೇರಿಯಲ್ಲಿ ಡಾ|ಬಿ.ಆರ್‌. ಅಂಬೇಡ್ಕರ್‌ ಅವರ 127ನೇ ಜಯಂತಿ ಆಚರಣೆ…. ಇವು ಶನಿವಾರ ಜಿಲ್ಲೆಯಲ್ಲಿ ನಡೆದ ಪ್ರಮುಖ ಬೆಳವಣಿಗೆ.

Advertisement

ವಿಧಾನಸಭಾ ಚುನಾವಣೆಗೆ ಶುಕ್ರವಾರ ರಾತ್ರಿ ಕಾಂಗ್ರೆಸ್‌ ಹುರಿಯಾಳುಗಳ ಮೊದಲ ಪಟ್ಟಿ ಬಿಡುಗಡೆ ಆಗಿದೆ ಎಂಬ ಸುದ್ದಿ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ ಮಾಯಕೊಂಡ ಕಾಂಗ್ರೆಸ್‌ನಲ್ಲಿ ಇದ್ದಕ್ಕಿದ್ದಂತೆ ಚಟುವಟಿಕೆ ಗರಿಗೆದರಿದವು. ಮಾಯಕೊಂಡದಿಂದ ಜಿಲ್ಲಾ ಪಂಚಾಯತ್‌ ಸದಸ್ಯ ಕೆ.ಎಸ್‌. ಬಸವಂತಪ್ಪ ಕಾಂಗ್ರೆಸ್‌ ಅಭ್ಯರ್ಥಿ ಆಗಲಿದ್ದಾರಂತೆ. 

ಪಟ್ಟಿಯಲ್ಲಿ ಅವರ ಹೆಸರು ಮಾತ್ರ ಫೈನಲ್‌ ಆಗಿದೆಯಂತೆ ಎಂಬ ವದಂತಿ ಕ್ಷಣಮಾತ್ರದಲ್ಲಿ ಹರಿದಾಡಿತು. ಇದಕ್ಕೆ ಪುಷ್ಠಿ ನೀಡುವಂತೆ ಆಕಾಂಕ್ಷಿಗಳಾಗಿದ್ದ ಕೆಲ ಮುಖಂಡರು ಹ್ಯಾಪ್‌ ಮೋರೆ ಹಾಕಿಕೊಂಡು ಬೆಂಗಳೂರು, ದೆಹಲಿಯಿಂದ ವಾಪಸ್‌ ಆಗಿದ್ದರು. ಇದು ಶನಿವಾರ ಇಡೀ ದಿನ ಚರ್ಚೆಗೆ ಕಾರಣ ಆಯಿತು. ಮೂಲಗಳ ಪ್ರಕಾರ ಕಾಂಗ್ರೆಸ್‌ನ ಎಂಟು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಂಡಿದೆ. ಹಾಲಿ ಶಾಸಕರ ಪೈಕಿ ಓರ್ವರನ್ನು ಹೊರತುಪಡಿಸಿ, ಉಳಿದ ಎಲ್ಲಾ ಶಾಸಕರಿಗೆ ಟಿಕೆಟ್‌ ದೊರೆಯವುದು ಬಹುತೇಕ
ಖಚಿತ. 2 ಕಡೆ ಹೊಸ ಮುಖ ಕಣಕ್ಕಿಳಿಸಲು ನಿರ್ಧರಿಸಿದ್ದು, ಅಲ್ಲಿ ಉಂಟಾಗಬಹುದಾದ ಅಸಮಾಧಾನ ಸರಿಪಡಿಸಲು ಹೈ ಕಮಾಂಡ್‌ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಜವಾಬ್ದಾರಿ ನೀಡಿದೆ ಎಂದು ತಿಳಿದುಬಂದಿದೆ.

ಹಾಗಾಗಿಯೇ ಕೆಲ ದಿನಗಳಿಂದ ಬೆಂಗಳೂರು, ದೆಹಲಿಯಲ್ಲಿ ಬೀಡುಬಿಟ್ಟಿದ್ದ ಹಲವು ನಾಯಕರು ಶುಕ್ರವಾರ ರಾತ್ರಿ ವೇಳೆಗೆ
ಜಿಲ್ಲೆಗೆ ಆಗಮಿಸಿದ್ದಾರೆ. ಶನಿವಾರ ಬೆಳಗ್ಗೆಯಿಂದ ಮಲ್ಲಿಕಾರ್ಜುನ್‌, ಶಿವಶಂಕರಪ್ಪ ನಿವಾಸಕ್ಕೆ ಆಗಮಿಸಿ, ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನು ಬಿಜೆಪಿ ಪಾಳಯದಲ್ಲಿ ಅಭ್ಯರ್ಥಿ ಆಯ್ಕೆ ವಿಷಯಕ್ಕಿಂತ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಬೆಳ್ಳಂಬೆಳಗ್ಗೆ ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ನೇತೃತ್ವದಲ್ಲಿ ಗಾಂಧಿನಗರದ ಅಂಬೇಡ್ಕರ್‌ ಪ್ರತಿಮೆ ಇರುವ ಸುತ್ತ ಮುತ್ತ ಸ್ವತ್ಛತಾ ಕಾರ್ಯದಲ್ಲಿ ಪಾಲ್ಗೊಂಡು, ನಂತರ ಮನೆ ಮನೆಗೆ ತೆರಳಿ ಮತಯಾಚಿಸಿದರು. ಸಂಜೆ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು. ಸಂಸದ ಜಿ.ಎಂ. ಸಿದ್ದೇಶ್ವರ್‌, ಇತರರು ಭಾಗಿಯಾಗಿದ್ದರು. ಜೆಡಿಎಸ್‌ ನಾಯಕರು, ಕಾರ್ಯಕರ್ತರು ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮದಲ್ಲಿ ನಿರತವಾಗಿದ್ದರು. ಇದರ ಜೊತೆಗೆ ಪಿ.ಜೆ. ಬಡಾವಣೆಯ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಅಂಬೇಡ್ಕರ್‌ ಜಯಂತಿ ಆಚರಿಸಿದರು.

Advertisement

ಹರಪನಹಳ್ಳಿಯಲ್ಲಿ ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ ಪ್ರಚಾರದ ಜೊತೆಗೆ ಅಂಬೇಡ್ಕರ್‌ ಜಯಂತಿ ಆಚರಿಸಿ, ಬಳ್ಳಾರಿಗೆ ಪ್ರಯಾಣ ಬೆಳೆಸಿದರು. ಶಾಸಕ ಎಂ.ಪಿ. ರವೀಂದ್ರ, ಬಿಜೆಪಿ ಟಿಕೆಟ್‌ ಆಕಾಂಕ್ಷಿ ಕೊಟ್ರೇಶ್‌ ಬೆಂಗಳೂರಲ್ಲೇ ಠಿಕಾಣಿ ಹೂಡಿದ್ದಾರೆನ್ನಲಾಗಿದೆ. ಹೊನ್ನಾಳಿಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರಚಾರ ಕೈಗೊಂಡರು. ಇದೇ ರೀತಿ ಚನ್ನಗಿರಿ, ಜಗಳೂರು, ಮಾಯಕೊಂಡದಲ್ಲೂ ಸಹ ಪ್ರಚಾರ ಭರಾಟೆ ಜೋರಾಗಿ ಇತ್ತು.

ಚುನಾವಣಾ ಕಾರ್ಯಕ್ಕೆ ನಿಯೊಜನೆಗೊಂಡಿರುವ ಅಧಿಕಾರಿಗಳು ಸಹ ಹಲವು ಕಾರ್ಯಗಳಲ್ಲಿ ತೊಡಗಿದ್ದರು. ಬೆಳ್ಳಂಬೆಳಗ್ಗೆ ಜಿಪಂ ಸಿಇಒ ಪ್ಯಾರಾಗ್ಲೆ$çಡಿಂಗ್‌ ಮೂಲಕ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮ ಚಾಲನೆ ನೀಡಿದರು. ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌. ರಾಜು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next