Advertisement

ಸಂಕಟವನ್ನೇ ಸವಾಲಾಗಿಸಿದರೆ ಸಾಧನೆ

02:18 PM Apr 25, 2022 | Team Udayavani |

ಚಿತ್ರದುರ್ಗ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ ಚಿಕ್ಕಂದಿನಲ್ಲಿಯೇ ಸಾಕಷ್ಟು ನೋವು, ಹಿಂಸೆ, ಸಂಕಟ, ಅವಮಾನಗಳನ್ನು ಅನುಭವಿಸಿ, ಹಠ ಹಿಡಿದು ಸಾಧನೆ ಮಾಡಿದ್ದರಿಂದಲೇ ಎತ್ತರಕ್ಕೆ ಬೆಳೆದು ದೇಶಕ್ಕೆ ಸಂವಿಧಾನ ನೀಡಲು ಸಾಧ್ಯವಾಯಿತು ಎಂದು ಲೇಖಕ ಎಚ್‌. ಆನಂದಕುಮಾರ್‌ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ನವಯಾನ ಬುದ್ದ ಧಮ್ಮ ಪಥ ವತಿಯಿಂದ ಭಾನುವಾರ ಆಯೋಜಿಸಿದ್ದ ನವಯಾನದ ಓದು-ಸಂವಾದ ಹಂತ-2, ಡಾ| ಬಿ.ಆರ್. ಅಂಬೇಡ್ಕರ್‌ ಅವರ ಬುದ್ಧ ಮತ್ತು ಡಾ| ರಾಜ್‌ಕುಮಾರ್‌ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಕಟಗಳನ್ನೇ ಸವಾಲಾಗಿಸಿಕೊಂಡ ಅನೇಕ ಸಾಧಕರುಗಳಿದ್ದಾರೆ. ಇವರ ನಡುವೆ ಅಂಬೇಡ್ಕರರು ಜಾತಿ ಶೋಷಣೆ ಅನುಭವಿಸಿದ ಹಿನ್ನೆಲೆಯಲ್ಲಿ ಸಂವಿಧಾನದಲ್ಲಿ ಸರ್ವರಿಗೂ ಸಮಾನತೆ ನೀಡಿದ್ದಾರೆ ಎಂದರು.

ಕನ್ನಡ ಚಿತ್ರರಂಗದ ಮೇರುನಟ ಡಾ| ರಾಜ್‌ ಕುಮಾರ್‌ ಅವರ ಅಮೋಘ ಅಭಿನಯವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಗೋಕಾಕ್‌ ಚಳವಳಿ ಸಂದರ್ಭದಲ್ಲಿ ನಾಡಿನಾದ್ಯಂತ ಸಂಚರಿಸಿ ಕನ್ನಡಿಗರಲ್ಲಿ ಸಂಚಲನ ಮೂಡಿಸಿದ ಡಾ|ರಾಜ್‌ ಕುಮಾರ್‌, ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಅಭಿನಯಿಸಲಿಲ್ಲ. ಕನ್ನಡದ ಮೇಲೆ ಅವರಿಗೆ ಅಷ್ಟೊಂದು ಅಭಿಮಾನವಿತ್ತು ಎಂದು ಸ್ಮರಿಸಿದರು.

ನಿವೃತ್ತ ಪ್ರಾಚಾರ್ಯ ಪ್ರೊ| ಸಿ.ಕೆ. ಮಹೇಶ್‌ ಮಾತನಾಡಿ, ಮಾರ್ಕ್ಸ್ ಸಿದ್ಧಾಂತವನ್ನು ಆರಂಭದಲ್ಲಿ ಪುರೋಹಿತಶಾಹಿಗಳು ತಮ್ಮ ಬಳಿ ಇಟ್ಟುಕೊಂಡು ಕ್ರಾಂತಿಕಾರಕ ವಿಚಾರಗಳನ್ನು ನಾಶಗೊಳಿಸಿದ್ದರು. ಅವೈದ್ದಿಕ ಸಿದ್ಧಾಂತವಾಗಿ ಇರಬಹುದಾದ ಮಾರ್ಕ್ಸ್ನನ್ನು ವೈದ್ದಿಕ ರಕ್ಷಣೆಗೆ ಬಳಸಿಕೊಂಡಿದ್ದನ್ನು ಡಾ| ಬಿ.ಆರ್. ಅಂಬೇಡ್ಕರ್‌ ಕಟುವಾಗಿ ವಿರೋಧಿಸಿದ್ದರು ಎಂದು ತಿಳಿಸಿದರು.

ಬುದ್ಧ ಮತ್ತು ಮಾರ್ಕ್ಸ್ ನಡುವೆ ಡಾ| ಬಿ.ಆರ್. ಅಂಬೇಡ್ಕರ್‌ ಸಂವಾದ ಏರ್ಪಡಿಸಿ ಬುದ್ಧನ ಒಳಗಿರುವ ವಿಚಾರಗಳನ್ನು ತತ್ವಜ್ಞಾನಿ ಮಾರ್ಕ್ಸ್ ಗೆ ಅಡಕಗೊಳಿಸುತ್ತಿದ್ದರು. ಇದರಿಂದ ವರ್ಗ ಮತ್ತು ಜಾತಿ ನಿರ್ಮೂಲನೆಗೆ ಪರಿಪಕ್ವವಾದ ಸಿದ್ಧಂತ ಕ್ರಿಯಾ ಯೋಜನೆ ರೂಪಿತವಾಗುತ್ತಿತ್ತು. ಮಾರ್ಕ್ ನ ಕ್ರಾಂತಿಕಾರಕ ಸಿದ್ಧಾಂತಗಳು ಪ್ರತಿಗಾಮಿಗಳ ಕೈಗೆ ಸಿಕ್ಕಿ ಕ್ರಿಯಾಶೀಲತೆ ಕಳೆದುಕೊಂಡಿತು ಎಂದರು.

Advertisement

ಕನ್ನಡ ಚಿತ್ರರಂಗದ ಮೇರುನಟ ಡಾ| ರಾಜ್‌ಕುಮಾರ್‌ ಚಿತ್ರಗಳಲ್ಲಿ ಜೀವನಕ್ಕೆ ಬೇಕಾದ ಆದರ್ಶ, ಮೌಲ್ಯಗಳಿರುತ್ತಿದ್ದವು. ತ್ಯಾಗಗುಣ ಅವರದಾಗಿತ್ತು. ತಂದೆ-ತಾಯಿಗಳು ಮಕ್ಕಳನ್ನು ಹೇಗೆ ಜೋಪಾನ ಮಾಡಬೇಕು, ಅದೇ ರೀತಿ ಮುಪ್ಪಿನ ಕಾಲದಲ್ಲಿ ತಂದೆ-ತಾಯಿಗಳನ್ನು ಮಕ್ಕಳು ಹೇಗೆ ನೋಡಿಕೊಳ್ಳಬೇಕು ಎನ್ನುವ ಸಂದೇಶ ಅವರ ಚಿತ್ರಗಳಲ್ಲಿರುತ್ತಿತ್ತು. ನಿತ್ಯ ಜೀವನದಲ್ಲಿಯೂ ಅತ್ಯಂತ ಸರಳವಾಗಿದ್ದ ಡಾ| ರಾಜ್‌ರವರು ತಮ್ಮ ಜೀವಮಾನವನ್ನು ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಮುಡಿಪಾಗಿಟ್ಟಿದ್ದರು ಎಂದು ಬಣ್ಣಿಸಿದರು.

ಕೂನಿಕೆರೆ ರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ದಲಿತ ಮುಖಂಡ ದುರುಗೇಶ್‌, ಚಿಕ್ಕಣ್ಣ, ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ಕುಮಾರ್, ಹೊಳಿಯಪ್ಪ, ಸಂಜೀವ್‌ಕುಮಾರ್‌ ಪೋತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next