ವಾಡಿ: ಡಾ| ಬಿ.ಆರ್.ಅಂಬೇಡ್ಕರ್ ನಡೆದಾಡಿದ ಪಟ್ಟಣದಲ್ಲಿ 131ನೇ ಜಯಂತಿ ಆಚರಣೆಗೆ ಅದ್ಧೂರಿ ಸಿದ್ಧತೆ ನಡೆದಿದ್ದು, ಏ.27ರಂದು ಬೆಳಗ್ಗೆ 11 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಭೆ ಹಾಗೂ ಏ. 28ರಂದು ದಿನವಿಡಿ ಭಾವಚಿತ್ರ ಮೆರವಣಿಗೆ ಆಯೋಜಿಸಲಾಗಿದೆ ಎಂದು ಬೌದ್ಧ ಸಮಾಜದ ಕಾರ್ಯಾಧ್ಯಕ್ಷ ಇಂದ್ರಜೀತ್ ಸಿಂಗೆ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಬಾಸಾಹೇಬ ಅಂಬೇಡ್ಕರ್ ಸ್ವಾತಂತ್ರ್ಯ ಪೂರ್ವದಲ್ಲಿ ರೈಲಿನ ಮೂಲಕ ಹೈದ್ರಾಬಾದ್‌ಗೆ ಹೋಗುತ್ತಿದ್ದ ಸಂದರ್ಭದಲ್ಲಿ ವಾಡಿ ನಿಲ್ದಾಣದಲ್ಲೇ ಎಂಜಿನ್ ಬದಲಿಸುತ್ತಿತ್ತು. ನಿಲ್ದಾಣದಲ್ಲಿ ಸಮಯ ವ್ಯರ್ಥ ಮಾಡುವ ಬದಲು ಅಂದಿನ ಸ್ಥಳೀಯ ದಲಿತ ನಾಯಕರ ಮನವಿ ಮೇರೆಗೆ ವಾಡಿ ನಗರದೊಳಗೆ ಬಂದು ದಲಿತರ ಸ್ಥಿತಿಗತಿ ವಿಚಾರಿಸಿ ಹೋಗಿದ್ದರು ಅಂಬೇಡ್ಕರ್. ಪರಿಣಾಮ ವಾಡಿ ನಗರದ ದಲಿತರ ಪಾಲಿಗೆ ಏ.27 ಸ್ಫೂರ್ತಿಯ ದಿನವಾಗಿದೆ. ಆದ್ದರಿಂದ ಅಂಬೇಡ್ಕರ್ ಜೀವಿತಾವಧಿಯಿಂದಲೇ ವಾಡಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು.
ಬಹಿರಂಗ ಸಭೆಯಲ್ಲಿ ಬೌದ್ಧ ಭಿಕ್ಷು ಧಮ್ಮಾನಂದ ಥೇರೋ ಅಣದೂರ, ಭಂತೆ ಸಾಕು, ಬೋಧಿ ಧಮ್ಮ ಜಪಾನ್, ಭಂತೆ ಜ್ಞಾನಸಾಗರ, ಭಂತೆ ಸಂಘಾನಂದ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಉದ್ಘಾಟಿಸುವರು. ವಿಚಾರವಾದಿ ಡಾ| ಸಿ.ಎಸ್.ದ್ವಾರಕನಾಥ ಉಪನ್ಯಾಸ ನೀಡುವರು. ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸುವರು. ಅಂದು ಸಂಜೆ 6 ಗಂಟೆಗೆ ವಿವಿಧ ಬಡಾವಣೆಗಳಿಂದ ಸ್ತಬ್ಧಚಿತ್ರಗಳ ಆಗಮನ, ಅಶೋಕ ಚಕ್ರ ಮೆರವಣಿಗೆ, ಸಂಜೆ ಭೀಮ ಗೀತೆಗಳ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಏ.28 ರಂದು ಬೆಳಗ್ಗೆ 10:30ಕ್ಕೆ ಆರಂಭಗೊಳ್ಳುವ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆಗೆ ಪಿಎಸ್‌ಐ ಮಹಾಂತೇಶ ಜಿ. ಪಾಟೀಲ ಚಾಲನೆ ನೀಡುವರು ಎಂದರು.
ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ, ಪ್ರಧಾನ ಕಾರ್ಯದರ್ಶಿ ದೇವಿಂದ್ರ ನಿಂಬರ್ಗಾ, ಖಜಾಂಚಿ ಚಂದ್ರಸೇನ ಮೇನಗಾರ, ಸಹ ಕಾರ್ಯದರ್ಶಿ ಶರಣಬಸು ಸಿರೂರಕರ, ವಿಜಯಕುಮಾರ ಸಿಂಗೆ ಹಾಜರಿದ್ದರು.
ಭಾರತ ರತ್ನ ಡಾ| ಬಿ.ಆರ್.ಅಂಬೇಡ್ಕರ್ ಸ್ವಾತಂತ್ರ್ಯ ಪೂರ್ವದಲ್ಲಿ ವಾಡಿ ನಗರಕ್ಕೆ ಭೇಟಿ ನೀಡಿದ್ದು ಆಕಸ್ಮಿಕವಾಗಿದ್ದರೂ, ಸ್ಮರಣೀಯ ದಿನವಾಗಿದೆ. ದಲಿತ ಸಮುದಾಯ ಮೇಲೆತ್ತಲು ಮೀಸಲಾತಿ ಹಕ್ಕು ಒದಗಿಸಿದ್ದಾರೆ. ಈ ಕುರಿತು ದಲಿತರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಲು ಅವರು ನಗರಕ್ಕೆ ಬಂದ ದಿನದಂದೇ 131ನೇ ಜಯಂತಿ ಆಚರಿಸಲಾಗುತ್ತಿದೆ.
-ಟೋಪಣ್ಣ ಕೋಮಟೆ ಅಧ್ಯಕ್ಷ, ಬೌದ್ಧ ಸಮಾಜ