ಚಾಮರಾಜನಗರ: ಡಾ. ಬಿ.ಆರ್.ಅಂಬೇಡ್ಕರ್ ರವರು ದೇಶದಲ್ಲಿದ್ದ ಜಾತೀಯತೆ, ಅಸಮಾನತೆ, ಅನಕ್ಷರತೆ ಹಾಗೂ ಶೋಷಣೆಗಳ ನಿರ್ಮೂಲನೆಗೆ ಸಂವಿಧಾನದ ಮೂಲಕ ಸೂಕ್ತ ಚಿಕಿತ್ಸೆ ಪರಿಹಾರ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದರು.
ಬುಧವಾರ, ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್‌ರವರ 131ನೇ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ರವರು ಮಹಾನ್ ಮಾನವತಾವಾದಿಯಾಗಿದ್ದು ಶೋಷಿತ ವರ್ಗದವರ ಆಶಾಕಿರಣ ಹಾಗೂ ಮಹಿಳೆಯರ ಪಾಲಿಗೆ ಸಮಾನತೆಯ ನಂದಾದೀಪವಾಗಿದ್ದಾರೆ. ಸೂರ್ಯ ಭೂಮಿಗೆ ಎಷ್ಟು ಮುಖ್ಯವೋ ಹಾಗೇ ಡಾ. ಬಿ.ಆರ್ ಅಂಬೇಡ್ಕರ್ ರವರು ಭಾರತಕ್ಕೆ ಅಷ್ಟೇ ಮುಖ್ಯವಾಗಿದ್ದಾರೆ. ಸಾವಿರಾರು ವರ್ಷಗಳ ಕಾಲದಿಂದಲೂ ಇದ್ದ ಜಾತೀಯತೆ, ಅಸಮಾನತೆ, ಅನ್ಯಾಯ, ಶೋಷಣೆಗಳಿಗೆ ಸಂವಿಧಾನದಲ್ಲಿ ಕಾನೂನು ರೂಪಿಸುವ ಮೂಲಕ ಚಿಕಿತ್ಸೆ ನೀಡಿದ್ದಾರೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಸರ್ವಕಾಲಿಕ ಚಿಂತನೆಗಳ ಕುರಿತು ವಿಚಾರ ಮಂಡಿಸಿದ ಲೇಖಕ ಡಾ. ಜಗದೀಶ್ ಕೊಪ್ಪ ಮಾತನಾಡಿ ಜಗತ್ತಿನಲ್ಲಿ ಮನುಕುಲದ ಬಗ್ಗೆ ಅತ್ಯಂತ ಗಂಭೀರವಾಗಿ ಆಲೋಚಿಸಿದ ಇಬ್ಬರು ಮಹನಿಯರೆಂದರೆ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಅಬ್ರಹಾಂ ಲಿಂಕನ್. ಇಡೀ ಬದುಕನ್ನು ಅಧ್ಯಯನಕ್ಕೆ ಮೀಸಲಿಟ್ಟು ದೇಶಕ್ಕೆ ಸಾಮಾಜಿಕ ಪ್ರಜ್ಞೆ ಎಚ್ಚರ ಮೂಡಿಸಿದವರು ಅಂಬೇಡ್ಕರ್ ಎಂದರು.
ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಶ್ರೀ ಕಲ್ಯಾಣಸಿರಿ ಬಂತೇಜಿ ಸಾನ್ನಿಧ್ಯ ವಹಿಸಿದ್ದರು. ನಗರದ ವಿರಕ್ತ ಮಠದ ಶ್ರೀ ಚೆನ್ನಬಸವಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ವೇಳೆ ಅಂತರ್ಜಾತಿ ವಿವಾಹವಾಗಿರುವ ದಂಪತಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರೋತ್ಸಾಹ ಧನ ವಿತರಿಸಲಾಯಿತು.
ಎಸ್ಪಿ ಟಿ.ಪಿ. ಶಿವಕುಮಾರ್, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಎಡೀಸಿ ಎಸ್. ಕಾತ್ಯಾಯಿನಿದೇವಿ, ಎಎಸ್‌ಪಿ ಕೆ.ಎಸ್. ಸುಂದರ್ ರಾಜ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕಿ ಭಾಗೀರಥಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದರು.