ಚಿತ್ರದುರ್ಗ: ಅವಮಾನಗಳ ಪಾಕದಿಂದ ಎದ್ದು, ಸರ್ವರಿಗೂ ಸಮಪಾಲು, ಸಮಭಾಳು ಧ್ಯೇಯದೊಂದಿಗೆ ಭಾರತೀಯರ ಹಣೆಬರಹ ಬರೆದ ಭಾಷ್ಯಕಾರ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಭೋವಿ ಗುರುಪೀಠದಲ್ಲಿ ಬುಧವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಅಂಬೇಡ್ಕರರನ್ನು ಕೇವಲ ಓರ್ವ ಸಂವಿಧಾನ ತಜ್ಞ, ಕಾನೂನು ತಜ್ಞ ಎಂದು ಬಿಂಬಿಸುತ್ತಿರುವುದು ವಿಷಾದನೀಯ. ಅವರ ಬಹುಮುಖೀ ಪ್ರತಿಭೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು ಎಂದರು. ಡಾ| ಅಂಬೇಡ್ಕರ್ ಈ ದೇಶದ ನದಿಗಳು, ನೀರಾವರಿ, ಜಲಮೂಲಗಳ ಸಂರಕ್ಷಣೆ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಭಾರತದ ಪ್ರಪ್ರಥಮ ಸವಿಸ್ತಾರ ನೀರಾವರಿ ಪಾಲಿಸಿಯನ್ನು ರೂಪಿಸಿದ ಭಾರತ ಮೊದಲ ಜಲಸಂರಕ್ಷಣಾ ಹೋರಾಟಗಾರ ಅಂಬೇಡ್ಕರ್ ಎಂದು ಸ್ಮರಿಸಿದರು.
ಅಂಬೇಡ್ಕರ್ ಉತ್ತಮ ವಕೀಲ, ಅರ್ಥಶಾಸ್ತ್ರಜ್ಞ, ಸಮಾಜ ವಿಜ್ಞಾನಿ, ಆಡಳಿತಗಾರ, ತತ್ವಜ್ಞಾನಿ, ಸಂವಿಧಾನ ಶಿಲ್ಪಿ, ಮಾನವೀಯತೆಯ ಮಹಾಮೂರ್ತಿ, ಮಾನವ ಹಕ್ಕುಗಳ ಹೋರಾಟಗಾರ, ರಾಜಕೀಯ ತಜ್ಞ, ಸಮಾಜಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಇತಿಹಾಸ ತಜ್ಞ, ಖ್ಯಾತ ಚಿಂತಕ, ವಿಶ್ವಮಾನವ, ಆಧುನಿಕ ಭಾರತದ ನಿರ್ಮಾಪಕ, ಶಿಕ್ಷಣ ತಜ್ಞ ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಅವರು ದಲಿತರಾಗಿ ಹುಟ್ಟದೆ, ಮೇಲ್ವರ್ಗದಲ್ಲಿ ಜನಿಸಿದ್ದರೆ ದೈವಿಕ ಅವತಾರ ಪುರುಷರ ಸಾಲಿಗೆ ಸೇರಿಬಿಡುತ್ತಿದ್ದರು. ಆದರೆ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದ ನೋಡದೆ, ವಾಸ್ತವ ಅರ್ಥೈಸಿಕೊಂಡರೆ ಬಡವರನ್ನು ಒಳಗೊಂಡ ಭಾರತದ ಭಾಗ್ಯವಿಧಾತ.
ಭಾರತೀಯರ ಧೀಶಕ್ತಿ, ಜಾತಿ ವಿನಾಶದ ಜಾತ್ಯತೀತ ಶಕ್ತಿಯಾಗಿ ಡಾ| ಬಿ.ಆರ್. ಅಂಬೇಡ್ಕರ್ ರಾರಾಜಿಸುತ್ತಾರೆ ಎಂದು ಬಣ್ಣಿಸಿದರು. ಹೊಸದುರ್ಗ ಕುಂಚಿಟಿಗ ಗುರುಪೀಠದ ಡಾ| ಶಾಂತವೀರ ಸ್ವಾಮೀಜಿ ಮಾತನಾಡಿ, ಅಂಬೇಡ್ಕರರನ್ನು ಬುದ್ಧ, ಬಸವ, ಕನಕ, ವಾಲ್ಮೀಕಿ, ಪೈಗಂಬರರಂತೆ ಸಂತನಾಗಿ ನೋಡಬೇಕು. ಅಂಬೇಡ್ಕರ್ ಬಡವರ ಬೆಳಕು, ನೊಂದವರಿಗೆ ಅಸರೆ, ಅಕ್ಷರ ನೀಡಿದ ಕರುಣಾಕರ. ಇಷ್ಟೆಲ್ಲ ನೀಡಿದ ಮಹಾತ್ಮನನ್ನು ದಲಿತ ಎಂಬ ಕಾರಣಕ್ಕೆ ಉದಾಸೀನ ಭಾವದಿಂದ ನೋಡುವುದು ಸರಿಯಲ್ಲ. ಕಲಿಯುಗದಲ್ಲಿ ಎಲ್ಲ ಭಾರತೀಯರ ಧರ್ಮಗ್ರಂಥ ಸಂವಿಧಾನವನ್ನು ತಮ್ಮ ಪರಿಶ್ರಮದಿಂದ ಅವಮಾನ, ಅನುಮಾನ ಮೆಟ್ಟಿ ನಿಂತು, ಶಿಕ್ಷಣವೇ ದೊಡ್ಡ ಅಸ್ತ್ರ ಎಂಬುದನ್ನು ಸಾಧಿ ಸಿ ತೋರಿದ ಮಾರ್ಗದರ್ಶಕ ಅಂಬೇಡ್ಕರ್ ಎಂದರು. ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಶ್ರೀ ಬಸವ ಹರಳಯ್ಯ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಶ್ರೀಬಸವ ಪ್ರಭು ಸ್ವಾಮೀಜಿ, ನಗರಸಭೆ ನಾಮನಿರ್ದೇಶನ ಸದಸ್ಯ ತಿಮ್ಮಣ್ಣ, ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಲಕ್ಷ್ಮಣ, ಖಜಾಂಚಿ ಈ. ಮಂಜುನಾಥ, ಯುವ ಮುಖಂಡ ನಾಗರಾಜ, ಹನುಮಂತ, ಶಿಕ್ಷಕ ಶ್ರೀಧರ, ಆನಂದ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.