ಶಹಾಬಾದ: ಹುಟ್ಟಿನಿಂದ ಹಿಡಿದು ಅವರ ಕೊನೆ ಉಸಿರು ಇರುವ ತನಕ ಅನೇಕ ಹೋರಾಟಗಳನ್ನು ಮಾಡಿ ದೇಶದಲ್ಲಿರುವ ಅವೈಜ್ಞಾನಿಕ ಪದ್ಧತಿಯ ದಿಕ್ಕನ್ನೇ ಬದಲಾಯಿಸಿ ಹೊಸ ಬದಲಾವಣೆ ತಂದಂತಹ ಮಹಾನ್ ವ್ಯಕ್ತಿ ಡಾ| ಬಿ.ಆರ್. ಅಂಬೇಡ್ಕರ್ ಎಂದು ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.
ಸೋಮವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಡಾ| ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಮಾಜದಲ್ಲಿ ಅಂಬೇಡ್ಕರ್ ವೇಷಧಾರಿಗಳು ಕಾಣಸಿಗುತ್ತಾರೆಯೇ ಹೊರತು, ಅವರಂತೆ ನಡೆದುಕೊಳ್ಳುವವರು ಕಡಿಮೆ. ದೇಶ, ಸಮಾಜ ಮತ್ತು ತನ್ನವರಿಗಾಗಿ ಬಾಬಾಸಾಹೇಬರು ಬಾಳಿದಂತೆ ಬಾಳು ನಡೆಸಬೇಕಾದವರು ಬೇಕಾಗಿದೆ. ಕೇವಲ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪೂಜೆ ಮಾಡುವುದಕ್ಕಿಂತಲೂ ಅವರ ಚರಿತ್ರೆ ಅರಿತು ನಡೆಯಬೇಕಾಗಿದೆ ಎಂದರು.
ಪೌರಾಯುಕ್ತ ಡಾ| ಕೆ.ಗುರಲಿಂಗಪ್ಪ ಮಾತನಾಡಿ, ಬಾಬಾ ಸಾಹೇಬರ ಭಾಚಿತ್ರಕ್ಕೆ ಪೂಜೆ ಸಲ್ಲಿಸುವುದಕ್ಕಿಂತ ಅವರ ತತ್ವಗಳ ಅನುಷ್ಠಾನವಾಗಬೇಕಿದೆ. ಆಗ ಮಾತ್ರ ದೇಶದಲ್ಲಿ ಸಮಗ್ರ ಬದಲಾವಣೆ ಸಾಧ್ಯ ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ, ನಗರಸಭೆ ಸದಸ್ಯರಾದ ಡಾ| ಅಹ್ಮದ್ ಪಟೇಲ್, ಅವಿನಾಶ ಕಂಬಾನೂರ, ಪಾರ್ವತಿ ಪವಾರ, ಮುಖಂಡರಾದ ರಾಜೇಶ ಯನಗುಂಟಿಕರ್, ಕಿರಣ ಚವ್ಹಾಣ, ಶಿವರಾಜಕುಮಾರ, ರಘುನಾಥ ನರಸಾಳೆ, ಪೂಜಪ್ಪ ಮೇತ್ರೆ, ಕೃಷ್ಣಪ್ಪ ಕರಣಿಕ್ ಮತ್ತಿತರರು ಇದ್ದರು.