Advertisement

ಆಧುನಿಕ ವಾಗ್ಮಿಗಳಿಗೆ ಅಂಬೇಡ್ಕರ್‌ ಅರ್ಥವಾಗಿಲ್ಲ: ಪೋತೆ

12:58 PM Aug 09, 2017 | |

ಕಲಬುರಗಿ: ಇವತ್ತು ಏನೆಲ್ಲ ಆಧುನಿಕತೆಯ ಅಕ್ಷರ ಚಳವಳಿ ನಡೆಯುತ್ತಿದ್ದರೂ, ಪುಸ್ತಕ ವಿರೋಧಿ ನಿಲುವಿನ ಆಲೋಚನೆಗಳನ್ನು ಹೊತ್ತು ತಿರುಗುವ ಆಧುನಿಕ ವಾಗ್ಮಿಗಳಿಗೆ ಅಂಬೇಡ್ಕರ್‌ ಇನ್ನೂ ಅರ್ಥವಾಗಿಲ್ಲ. ಇದು ಈ ನೆಲದ ದುರಾದೃಷ್ಟ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ನಿರ್ದೇಶಕ ಡಾ| ಎಚ್‌.ಟಿ. ಪೋತೆ ವಿಷಾದ ವ್ಯಕ್ತಪಡಿಸಿದರು. ಕನ್ನಡ ಭವನದಲ್ಲಿ ಮಹಾತ್ಮಾ ಜ್ಯೋತಿಬಾ ಫುಲೆ ಸೇವಾ ಸಂಘ, ಸಹನಾ ಪ್ರಕಾಶನ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಎಚ್‌.ಎಸ್‌. ಬೇನಾಳ ರಚಿಸಿದ ಇತಿಹಾಸ ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಏಕೆಂದರೆ ಬಾಬಾ ಸಾಹೇಬರ ಕುರಿತು ಆಧುನಿಕ ಮಾತುಗಾರರೆಲ್ಲಾ ಮಾತನಾಡಿದಾಗ ಅವರ ಮಾತುಗಳಲ್ಲಿ ಅಂಬೇಡ್ಕರ್‌ ಇನ್ನೂ ಅವರಿಗೆ ಪಥ್ಯವಾಗಿಲ್ಲ ಎನ್ನಿಸುತ್ತದೆ. ನಿಜಕ್ಕೂ ಇದೊಂದು ಈ ನೆಲದ ದುರಂತ ಸತ್ಯ. ಇದನ್ನು ಇಂದಿನ ತಲೆಮಾರಿನ ಯುವಕರು, ಬರಹಗಾರರು,
ಮಾತುಗಾರರು ತಿಳಿದು ಬಾಬಾ ಸಾಹೇಬರ ಕುರಿತು ಹೆಚ್ಚೆಚ್ಚು ಬರೆಯಬೇಕಿದೆ. ಇಂದಿಗೂ ಶೋಷಿತ ಸಮಾಜ ದಯನೀಯ ಸ್ಥಿತಿಯಲ್ಲಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಬಂಡಾಯ ಹೋರಾಟದ ಹಾಡುಗಳು ಎಂಬ ಎಚ್‌.ಎಸ್‌. ಬೇನಾಳ ಇನ್ನೊಂದು ಕೃತಿಯನ್ನು ಬಿಡುಗಡೆ ಮಾಡಿದ ಪಂಚಾಯತ್‌ ರಾಜ್‌ಇಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಅಭಿಯಂತರ ಸುರೇಶ ಎಲ್‌. ಶರ್ಮಾ ಬಿಡುಗಡೆಗೊಳಿಸಿದರು. ಹಿರಿಯ ಲೇಖಕ ಡಾ| ಚೆನ್ನಣ್ಣ ವಾಲಿಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಲೇಖಕರು
ವಾಸ್ತವದ ನೆಲೆಗಟ್ಟಿನಲ್ಲಿ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ ಬರೆಯಬೇಕು. ಯಾವುದೇ ವಿಷಯ ಮನನ ಮಾಡಿಕೊಂಡು
ಸೊಗಸಾಗಿ ಬರೆಯಬೇಕು. ಈ ಕಾರ್ಯವನ್ನು ಎಚ್‌.ಎಸ್‌.ಬೇನಾಳ ಮಾಡಿದ್ದಾರೆ. ಅದನ್ನು ನಾವು ಒಪ್ಪಿಕೊಳ್ಳಬೇಕಿದೆ ಎಂದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ವಿಕ್ರಮ ವಿಸಾಜಿ ಉಭಯ ಕೃತಿಗಳ ಪರಿಚಯ ಮಾಡಿ, ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎನ್ನುವ ಪುಸ್ತಕದಲ್ಲಿ ಭಾರತದ ಚರಿತ್ರೆಯ ನೈಜ ಸಂಗತಿಗಳನ್ನು ಹಾಗೂ
ಭಾರತ ಸಂವಿಧಾನದ ಮೀಸಲಾತಿಯನ್ನು ದಲಿತರ ಮುಂದಿನ ಆಗು ಹೋಗುಗಳ ಬಗ್ಗೆ ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಬುದ್ಧವಿಹಾರದ ಸಂಘಾನಂದ ಭಂತೇಜಿ ಸಾನ್ನಿಧ್ಯ ವಹಿಸಿದ್ದರು. ಗಣಪತಿ ಬಬಲಾದ, ಪ್ರಬುಲಿಂಗ ಕಾಂಬಳೆ ಅತಿಥಿಗಳಾಗಿದ್ದರು. ಮಹಾತ್ಮಾ ಜ್ಯೋತಿಬಾ ಫುಲೆ ಸೇವಾ ಸಂಘದ ಅಧ್ಯಕ್ಷೆ ರೇಣುಕಾದೇವಿ ಜಿ. ಬಬಲಾದ, ಕಾರ್ಯದರ್ಶಿ ದತ್ತಾತ್ರೇಯ ಅಂಬುರೆ, ಎಚ್‌. ಎಸ್‌. ಬೇನಾಳ, ಭೀಮಣ್ಣ ಬೋನಾಳ, ಡಾ| ಗಾಂಧಿ  ಮೋಳಕೇರಿ, ಸಿದ್ದಣ್ಣ ಕನ್ನಡಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌
ಅಧ್ಯಕ್ಷ ವೀರಭದ್ರ ಸಿಂಪಿ, ಡಾ| ಚಿ.ಸಿ. ನಿಂಗಣ್ಣ, ಬಸಣ್ಣ ಸಿಂಘೆ, ಶಂಕರ ಪಾಟೀಲ, ಡಾ| ಸೂರ್ಯಕಾಂತ ಸುಜ್ಯಾತ್‌, ಮಲ್ಲಿಕಾರ್ಜುನ,
ಕೆ.ಎಸ್‌.ಬಂಧು, ಸುರೇಶ ಬಡಿಗೇರ, ನಾಗರಾಜ ಹೂವಿನಹಳ್ಳಿ, ಚಂದ್ರಶೇಖರ ಹಾಜರಿದ್ದರು. ಡಾ| ಎಂ.ಬಿ. ಕಟ್ಟಿ ನಿರೂಪಿಸಿದರು, ಚಿದಾನಂದಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಚ್‌.ಎಸ್‌. ಬೇನಾಳ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next