ಮಹಾನಗರ: ಕಳೆದ ವರ್ಷ ಉದ್ಘಾಟನೆಗೊಂಡ ಅಂಬೇಡ್ಕರ್ ಭವನ ನಿರ್ವಹಣೆಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಸದ್ಯ ಭವನಕ್ಕೆ ಬಾಡಿಗೆ ದರ ನಿಗದಿಪಡಿಸಿ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಮನಪಾ ನಿರ್ಧರಿಸಲಾಗಿದೆ.
ಉರ್ವಸ್ಟೋರ್ ಬಳಿಯ ಅಂಗಡಿಗುಡ್ಡೆಯಲ್ಲಿ 3166.58 ಚ.ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಅಂಬೇಡ್ಕರ್ ಭವನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವರ್ಷ ಉದ್ಘಾಟಿಸಿದ್ದರು. ಬಳಿಕ ಕೆಲವು ತಿಂಗಳವರೆಗೆ ಯಾವುದೇ ಕಾರ್ಯಕ್ರಮಕ್ಕೆ ವಿನಿಯೋಗವಾಗಿರಲಿಲ್ಲ. ಭವನಕ್ಕೆ ಸುಮಾರು 40 ಸಾವಿರ ರೂ.ನಷ್ಟು ವಿದ್ಯುತ್ ಬಿಲ್ ಬರುತ್ತಿದ್ದು, ಕಾರ್ಯಕ್ರಮಗಳಿಗೆ ವಿನಿಯೋಗಿಸಿದರೆ 1 ಲಕ್ಷ ರೂ. ಮೀರುತ್ತದೆ. ಹೀಗಿದ್ದಾಗ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಷ್ಟೊಂದು ಆದಾಯವಿಲ್ಲ. ಇದೇ ಕಾರಣಕ್ಕೆ ಮಹಾನಗರ ಪಾಲಿಕೆ ಹಸ್ತಾಂತರಿಸಲು ಸಮಾಜ ಕಲ್ಯಾಣ ಇಲಾಖೆ ಮುಂದಾಗಿತ್ತು. ಆ ಪ್ರಕ್ರಿಯೆ ಸದ್ಯ ಪೂರ್ಣಗೊಂಡಿದೆ.
ನಿಗದಿಪಡಿಸಿದ ದರವೆಷ್ಟು?
ಉಚಿತ ಯಕ್ಷಗಾನ, ಉಚಿತ ನಾಟಕ, ತಾಳಮದ್ದಳೆ, ಉಚಿತ ಸಾಂಸ್ಕೃತಿಕ ಕಾರ್ಯಕ್ರಮ, ಹರಿಕಥೆ, ಸಮ್ಮಾನ ಸಭೆ, ಭರತನಾಟ್ಯ, ಜಾದೂ, ಸರಕಾರಿ ಕಾರ್ಯಕ್ರಮಗಳಿಗೆ ಸೆಷನ್-1-ಸೆಷನ್ 2ಕ್ಕೆ 5,000 ರೂ.ಸೆಷನ್-3ಕ್ಕೆ 5,000 ರೂ. ತಲಾ 5000 ರೂ. ಠೇವಣಿ ಇರಲಿದೆ. ಟಿಕೆಟ್ ಯಕ್ಷಗಾನಕ್ಕೆ ಸೆಷನ್-1 ಮತ್ತು 2ಕ್ಕೆ ಬಾಡಿಗೆ 10,000 ರೂ., ಸೆಷನ್ 3ಕ್ಕೆ 10,000 ರೂ. ಬಾಡಿಗೆ, ತಲಾ 50000 ರೂ. ಠೇವಣಿ ಇರಲಿದೆ. ಟಿಕೆಟ್ ನಾಟಕ ಮತ್ತು ಜಾದೂವಿಗೆ ಸೆಷನ್-1-ಸೆಷನ್ 2ಕ್ಕೆ 10,000 ರೂ.ಸೆಷನ್-3ಕ್ಕೆ 10,000 ರೂ. ತಲಾ 5000 ರೂ. ಠೇವಣಿ ಇರಲಿದೆ. ಎಲ್ಲ ರಸಮಂಜರಿ ಕಾರ್ಯಕ್ರಮಗಳಿಗೆ ಸೆಷನ್ -1-ಸೆಷನ್ 2ಕ್ಕೆ 10,000 ರೂ.ಸೆಷನ್-3ಕ್ಕೆ 10,000 ರೂ. ತಲಾ 5,000 ರೂ. ಠೇವಣಿ ಇರಲಿದೆ. ಖಾಸಗಿ ಕಾರ್ಯಕ್ರಮಕ್ಕೆ ಸೆಷನ್ -1-ಸೆಷನ್ 2ಕ್ಕೆ 15,000 ರೂ. 10,000 ರೂ. ಠೇವಣಿ ಇರಲಿದೆ. ಇದರೊಂದಿಗೆ ತಲಾ ಶೇ.18ರಷ್ಟು ಜಿಎಸ್‌ಟಿ ಇರುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ದರ ನಿಗದಿ: ಕಳೆದ ವರ್ಷ ಉದ್ಘಾಟನೆಗೊಂಡ ಅಂಬೇಡ್ಕರ್ ಭವನವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಮಹಾನಗರ ಪಾಲಿಕೆಗೆ ಹಸ್ತಾಂತರ ಪ್ರಕ್ರಿಯೆ ನಡೆದಿದೆ. ಇದೀಗ ಭವನಕ್ಕೆ ಬಾಡಿಗೆ ದರ ನಿಗದಿಪಡಿಸಲಾಗಿದೆ. ಮನಪಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಯಕ್ರಮಗಳಿಗೆ ಶೇ.50ರಷ್ಟು ರಿಯಾಯಿತಿ ನೀಡಿ ಉಳಿದ ವರ್ಗದ ಸಾರ್ವಜನಿಕರಿಗೆ ದರ ನಿಗದಿ ಮಾಡಲಾಗಿದೆ. –
ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್