Advertisement

ಅಂಬೇಡ್ಕರ್‌ ಭವನ ಶೀಘ್ರ ಪೂರ್ಣ?

04:15 PM Apr 20, 2022 | Team Udayavani |

ಮೈಸೂರು: ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ, ಅಧಿಕಾರಿ ಗಳ ನಿರ್ಲಕ್ಷ್ಯದಿಂದ ಕಳೆದ 12 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಅಂಬೇಡ್ಕರ್‌ ಸಮುದಾಯ ಭವನ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ.

Advertisement

ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಹಿಡಿದಿದ್ದ ಗ್ರಹಣಕ್ಕೆ ಮುಕ್ತಿ ಸಿಗಲಿದೆ. ಸಚಿವ ಸಂಪುಟದಲ್ಲಿ 2ನೇ ಹಂತದ ಕಾಮಗಾರಿ ಪೂರ್ಣಕ್ಕೆ 17 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ಸೂಚಿಸಿದ್ದು, ಶೀಘ್ರವೇ ಕಾಮಗಾರಿ ಪುನಾರಂಭವಾಗಲಿದೆ.

ನಗರದ ಡಿ.ದೇವರಾಜ ಅರಸು ರಸ್ತೆ ಬಳಿ 7.470 ಚ.ಮೀ. ವಿಸ್ತಿರ್ಣದಲ್ಲಿ 14.6 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಅಂದಿನ ಬಿಜೆಪಿ ಸರ್ಕಾರ 2012 ಮೇ 4ರಲ್ಲೇ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಬಳಿಕ 2,500 ಆಸನಗಳ ಸಾಮರ್ಥ್ಯ ಇರುವ ಓವಲ್‌ ಆಕಾರದ ಆಡಿಟೋರಿ ಯಂ ಕಟ್ಟಡದ ನಿರ್ಮಾಣ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿತ್ತು. ಕೆಳಮಹಡಿ (ಬೇಸ್‌ಮೆಂಟ್‌), ನೆಲ ಮಹಡಿ, ಮೊದಲ ಅಂತಸ್ತು, ಎರಡನೇ ಮಹಡಿ ನಿರ್ಮಿಸಲು ಕ್ರಿಯಾಯೋಜನೆ ರೂಪಿಸಿ ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಸ್ಥಳೀಯ ಮಟ್ಟದ ರಾಜಕೀಯ ಸ್ಥಿತ್ಯಂತರ ದಿಂದ ಭವನದ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗಿತ್ತು.

ಸಮಾರಂಭಗಳಿಗೆ ಭಂಗ: ಡಿ.ದೇವರಾಜ ಅರಸು ರಸ್ತೆಗೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ಜನ ಮತ್ತು ವಾಹನ ಸಂದಣಿ ಹೆಚ್ಚಿರುವುದರಿಂದ ಇಲ್ಲಿ ನಡೆಯುವ ಸಭೆ, ಸಮಾರಂಭ ಗಳಿಗೆ ಭಂಗ ಉಂಟಾಗಲಿದೆ ಎಂಬುದನ್ನು ಮನಗಂಡ ಜನಪ್ರತಿನಿಧಿಗಳು ಒಳ ಸಭಾಂಗಣ ನಿರ್ಮಿಸಲು ಯೋಜನೆ ರೂಪಿಸಿ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಕಾಮಗಾರಿಗೆ ವೇಗ ನೀಡಿದ ಸಿದ್ದು: ಈ ವೇಳೆ ಅಸ್ತಿತ್ವದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೈಸೂರು ಮಹಾನಗರ ಪಾಲಿಕೆಯಿಂದ 3 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆ 6 ಕೋಟಿ ರೂ., ಮುಡಾದಿಂದ 10.5 ಕೋಟಿ ರೂ. ಹಾಗೂ ಜಿಲ್ಲಾ ಪಂಚಾಯ್ತಿಯಿಂದ 50 ಲಕ್ಷ ರೂ. ಹಣ ಕಟ್ಟಡ ನಿರ್ಮಾಣಕ್ಕೆ ಮಂಜೂರಾಯಿತು. ಇದರಿಂದ ಕಾಮಗಾರಿ ವೇಗ ಪಡೆದು ಕೊಂಡಿದ್ದು, ಭವನದ ಒಳ ವಿನ್ಯಾಸ, ಪಾರ್ಕಿಂಗ್‌ ಹೊರತು ಪಡಿಸಿ ಉಳಿದಂತೆ ಎಲ್ಲವೂ ಅಚ್ಚುಕಟ್ಟಾಗಿ ನಿರ್ಮಾಣಗೊಂಡಿದೆ.

Advertisement

ಅಂದಾಜು ವೆಚ್ಚವೂ ಹೆಚ್ಚಳ: ಬಳಿಕ 2017ರಲ್ಲಿ 2ನೇ ಹಂತದ ಕಾಮಗಾರಿ ನಡೆಸಲು 18 ಕೋಟಿ ರೂ. ವೆಚ್ಚದ ಪರಿಷ್ಕೃತ ಕ್ರಿಯಾ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿತ್ತು. ಆದರೆ, ಇದಕ್ಕೆ ಅನುಮೋದನೆ ದೊರೆಯುವುದು ವಿಳಂಬವಾಯಿತು. ಇದರಿಂದಾಗಿ ಪರಿಷ್ಕೃತ ಅಂದಾಜು ವೆಚ್ಚವೂ 20.60 ಕೋಟಿ ರೂ.ಗೆ ಹೆಚ್ಚಳವಾಯಿತು. ಇದಕ್ಕೆ 2018ರ ಜನವರಿ 8ರಂದು ಅನುಮತಿ ಸಿಕ್ಕಿದರೂ ಅನುದಾನವನ್ನು ಬಿಡುಗಡೆ ಮಾಡಲಿಲ್ಲ. ಅಷ್ಟರಲ್ಲಿ ವಿಧಾನಸಭಾ ಚುನಾವಣೆ ಎದುರಾದ್ದರಿಂದ 2ನೇ ಹಂತದ ಕಾಮಗಾರಿಗೆ ಚಾಲನೆ ದೊರೆಯಲಿಲ್ಲ.

ಸರ್ಕಾರದಿಂದ 17 ಕೋಟಿ ರೂ.: ಈ ಕೆಲಸಕ್ಕೆ ಸಮಾಜ ಕಲ್ಯಾಣ ಇಲಾಖೆ, ಮುಡಾ, ಮೈಸೂರು ಮಹಾನಗರ ಪಾಲಿಕೆ ಮತ್ತು ಜಿಪಂನಿಂದ ನೀಡಬೇಕಿದ್ದ ಅನುದಾನ ತಡವಾದ್ದರಿಂದ 2018ರಿಂದ 22ರವರೆಗೆ ಭವನ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈಗ ಮತ್ತೆ ಭವನ ನಿರ್ಮಾಣಕ್ಕೆ ಸರ್ಕಾರವೇ 17 ಕೋಟಿ ರೂ. ನೀಡಲು ಮುಂದಾಗಿದ್ದು, ನವೆಂಬರ್‌ ವೇಳೆಗೆ ಡಾ.ಬಿ.ಆರ್‌. ಅಂಬೇಡ್ಕರ್‌ ಭವನ ಲೋಕಾರ್ಪಣೆಗೊಳ್ಳಲಿದೆ.

ಆಗಬೇಕಿರುವ ಬಾಕಿ ಕೆಲಸ: ಗ್ರಂಥಾಲಯ, ಸಂಶೋಧನಾ ಕೇಂದ್ರ, ಎರಡು ಗ್ರಿನ್‌ ರೂಂ, ವಿಶ್ರಾಂತಿ ಕೊಠಡಿ, ಶೌಚಾಗೃಹ ನಿರ್ಮಿಸಲಾಗಿದ್ದು, ಇದರೊಂದಿಗೆ ಬೇಸ್‌ಮೆಂಟ್‌ನಲ್ಲಿ 150 ಕಾರುಗಳು ಮತ್ತು 350 ಬೈಕುಗಳು ನಿಲುಗಡೆ ಸ್ಥಳಾವಕಾಶ ಕಲ್ಪಿಸಲಾಗಿದೆ. 20.6 ಕೋಟಿ ರೂ. ವೆಚ್ಚದ 2ನೇ ಹಂತದ ಕಾಮಗಾರಿಯಲ್ಲಿ ಬಯಲು ಸಭಾಂಗಣವನ್ನು ಒಳ ಸಭಾಂಗಣವನ್ನಾಗಿ ಸುವುದರೊಂದಿಗೆ ಹವಾ ನಿಯಂತ್ರಿತ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಜತೆಗೆ ಆಸನ ವ್ಯವಸ್ಥೆ, ಧ್ವನಿ ವರ್ಧಕ ವ್ಯವಸ್ಥೆ ಮಾಡುವುದರೊಂದಿಗೆ ಹೆಚ್ಚುವರಿಯಾಗಿ ಶೌಚಾಗೃಹಗಳ ನಿರ್ಮಾಣ ಮಾಡಬೇಕಿದೆ.

ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಅವಶ್ಯವಿದ್ದ ಬಾಕಿ ಹಣ 17 ಕೋಟಿ ರೂ. ಬಿಡುಗಡೆಗೆ ಸಂಪುಟ ದಲ್ಲಿ ಒಪ್ಪಿಗೆ ಸಿಕ್ಕಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಮುಡಾಗೆ ಹಣ ವರ್ಗಾವಣೆ ಆಗಲಿದೆ. ಇನ್ನು 3 ತಿಂಗಳಲ್ಲಿ ಭವನ ನಿರ್ಮಾಣ ಕಾರ್ಯಪೂರ್ಣಗೊಳ್ಳಲಿದೆ. ಎಸ್‌.ಟಿ.ಸೋಮಶೇಖರ್‌, ಸಚಿವ. ಸ್ಥಳೀಯ ಶಾಸಕರು,

ಇಬ್ಬರು ಸಂಸದರು, ಜಿಲ್ಲಾ ಮಂತ್ರಿಗಳಿಂದ ಭವನದಹೆಚ್ಚುವರಿ ಅನುದಾನಕ್ಕೆ ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ. ಮುಡಾಗೆ ಹಣ ಬಿಡುಗಡೆ ಆದ ಕೂಡಲೇ ಕಾಮಗಾರಿ ಆರಂಭವಾಗುತ್ತೆ. ಎಚ್‌.ವಿ.ರಾಜೀವ್‌, ಅಧ್ಯಕ್ಷರು, ಮುಡಾ

ಮೈಸೂರಿನಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಸ್ಥಳದ ಆಯ್ಕೆಯಿಂದ ಹಿಡಿದು ಭವನದ ನಿರ್ಮಾಣದವರೆಗೂ ಮಾಜಿ ಸಿಎಂ ಸಿದ್ದರಾಮಯ್ಯ, ತಾವು ಕಾರಣ. ಮುಡಾ, ಪಾಲಿಕೆ, ಜಿಪಂ, ಸಮಾಜ ಕಲ್ಯಾಣ ಇಲಾಖೆಯಿಂದ ಶೇ.18 ಹಣವನ್ನು ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ನೀಡಲಾಯಿತು. ಪುರಭವನ ಆವರಣದ ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆಯೂ ಸಿದ್ದರಾಮಯ್ಯ ಮತ್ತು ತಾವು ಅಧಿಕಾರದಲ್ಲಿದ್ದಾಗ ನೆರವೇರಿತು. ಡಾ.ಎಚ್‌.ಸಿ. ಮಹದೇವಪ್ಪ ಮಾಜಿ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next